Slide
Slide
Slide
previous arrow
next arrow

ಕಾಲೋನಿಗೆ ಭೇಟಿ ಕೊಟ್ಟ ಅದಮಾರು ಶ್ರೀಗಳು; ಜನರ ಯೋಗಕ್ಷೇಮ ವಿಚಾರಣೆ

300x250 AD

ಉಡುಪಿ: ಪರ್ಯಾಯ ಪೀಠವೇರಿ ಕಳೆದ 2 ವರ್ಷಗಳ ಕಾಲ ಉಡುಪಿ ಶ್ರೀಕೃಷ್ಣನ ಪೂಜಾ ಕೈಂಕರ್ಯದ ಜೊತೆ ಜೊತೆಗೆ ಸಮಾಜ ಜಾಗೃತಿ ಮತ್ತು ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಮಗ್ನರಾಗಿರುವ ಅದಮಾರು ಮಠದ ಕಿರಿಯ ಯತಿಗಳಾದ ಶ್ರೀ ಶ್ರೀ ಈಶಪ್ರೀಯ ತೀರ್ಥರು ಇಂದು ಮುಂಜಾನೆಯ ಶ್ರೀಕೃಷ್ಣನ ಪೂಜೆಯ ಬಳಿಕ ಪರಂಪರೆಯಂತೆ ಕೃಷ್ಣಾಪುರ ಮಠದ ಯತಿಗಳಿಗೆ ಪೂಜಾದಿ ಮಠದ ಹೊಣೆಯನ್ನು ಹಸ್ತಾಂತರಿಸಿ ಸಮಾಜದ ಪ್ರತ್ಯಕ್ಷ ಕಾರ್ಯಕ್ಕೆ ಧಾವಿಸಿದರು.

ಇಂದು ಮಧ್ಯಾಹ್ನ ಮಣಿಪಾಲದ ಸಮೀಪದ ನೇತಾಜಿ ನಗರದ ಉಪೇಕ್ಷಿತ ಕಾಲೋನಿಗೆ ಭೇಟಿ ನೀಡಿ ಮಾತಾ ಭಗಿನಿಯರು, ಸಜ್ಜನ ಬಂಧುಗಳು ಮತ್ತು ಮಕ್ಕಳ ಯೋಗಕ್ಷೇಮ ವಿಚಾರಿಸಿದರು. ಶ್ರೀಕೃಷ್ಣನ ನಾಮ ಜಪದ ಬೋಧನೆ ಮತ್ತು ಧಾರ್ಮಿಕ ಪ್ರವಚನ ನೀಡಿ, ಶ್ರೀಕೃಷ್ಣನ ಪ್ರಸಾದ ನೀಡಿದರು. ಮನೆಗಳಿಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು. ಈ ಮೂಲಕ ಉಡುಪಿ ಶ್ರೀ ಕೃಷ್ಣ ಮಠದ ಸಾಮಾಜಿಕ ಸ್ಪಂದನದ 500 ವರ್ಷಗಳ ಸಂಪ್ರದಾಯಕ್ಕೆ ಸಾಕ್ಷಿಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ದೇವರ ಬಗೆಗಿನ ಮೊದಲ ತಿಳುವಳಿಯೇ ಅವನು ಪೂರ್ಣ ತಿಳಿಯಲು ಸಾಧ್ಯವಾಗದವನು ಎಂಬುದು. ಸ್ವಲ್ಪ ಸ್ವಲ್ಪ ತಿಳಿಯುತ್ತಾ ದೇವರು ತಿಳಿಯುತ್ತಾ ಹೋಗುತ್ತಾನೆ. ಕೃಷ್ಣ ಎಂದರೆ ಕಷ್ಟದಿಂದ ಪರಿಶ್ರಮದಿಂದ ಲಭ್ಯವಾಗುವವನು, ಎಲ್ಲರಿಂದಲೂ ಆಕರ್ಷಿತನಾಗುವವನು ಇತ್ಯಾದಿ ಅನೇಕ ಅರ್ಥವಿರುವವನು. ನಮ್ಮ ಆರಾಧನೆಗಾಗಿ ನಾವೇ ರಚಿಸಿಕೊಂಡಿರುವ ರಚನೆ ದೇವರ ಮೂರ್ತಿ. ಈ ರೀತಿ ಆರಾಧನೆ, ಕೀರ್ತನೆ, ಕಥೆಗಳ ಮೂಲಕ ದೇವರನ್ನು ಹೆಚ್ಚು ಹೆಚ್ಚು ಅರ್ಥ ಮಾಡಿಕೊಳ್ಳಬೇಕು. ನಾವು ಹೇಗೆ ಬದುಕ ಬೇಕು ಎಂಬುದು ದೇವರ ಕಥೆಗಳ ಮೂಲಕ ತಿಳಿದುಕೊಳ್ಳಬಹುದು. ದೇವರನ್ನು ತಿಳಿದುಕೊಳ್ಳುವ ಮೊದಲ ಮೆಟ್ಟಿಲು ದೇವರ ನಾಮ ಸ್ಮರಣೆ. ದೇವರ ಪೂಜೆಯಿಂದ ನಮ್ಮ ಕಷ್ಟ ಪರಿಹಾರ ಆಗುವುದಿಲ್ಲ. ಮುಂದೆ ಕಷ್ಟ ಬರದ ಹಾಗೆ ನಾವು ದೇವರ ಆರಾಧನೆ ಮಾಡಬೇಕು. ನಮ್ಮ ಒಳ್ಳೆಯ ಕಲಸ ಈ ಜನ್ಮದಲ್ಲಿ, ಮುಂದಿನ ಜನ್ಮದಲ್ಲೂ ಲಭಿಸುತ್ತದೆ. ಈ ರೀತಿ ನಿರಂತರ ಸಂಪರ್ಕದಲ್ಲಿದ್ದುಕೊಂಡು ಧಾರ್ಮಿಕ ಚಿಂತನೆ ಮುಂದುವರೆಸೋಣ. ಹಿಂದು ಧರ್ಮದ ಜಾಗೃತಿ ಇಂದಿನ ಅತೀ ಅವಶ್ಯಕ ಸಂಗತಿ” ಎಂದರು.

300x250 AD

ಜಿಲ್ಲಾ ಸಂಘಚಾಲಕರಾದ ಡಾ. ನಾರಾಯಣ ಶೆಣೈ, ಜಿಲ್ಲಾ ಸಾಮರಸ್ಯ ಪ್ರಮುಖರಾದ ಶ್ರೀ ರವಿ ಅಲೆವೂರು, ಧರ್ಮ ಜಾಗರಣ ಪ್ರಮುಖರಾದ ಆಶೋಕ ಪರ್ಕಳ, ಸೇವಾ ಪ್ರಮುಖರಾದ ಭಾಸ್ಕರ್ ಮಣಿಪಾಲ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top