ಹೊನ್ನಾವರ: ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡ್ನೀರು ಹಾಗೂ ಶಿರಸಿಯ ಯುಥ್ ಫಾರ್ ಸೇವಾ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ನವಗ್ರಹವನ ಔಷಧಿ ಸಸ್ಯ ಸ್ಥಾಪನಾ ಕಾರ್ಯಕ್ರಮ ನಡೆಯಿತು.
ಶಾಲೆಯ ಪೂರ್ವ ವಿದ್ಯಾರ್ಥಿ, ಶಿಕ್ಷಕ ನಾರಾಯಣ ಬಿ.ನಾಯ್ಕ ನವಗ್ರಹ ವನದ ರೂವಾರಿಗಳು. ಅವರು ನವಗ್ರಹ ವನಕ್ಕೆ ಬೇಕಾಗುವ ಸಸ್ಯಗಳನ್ನು ತಾವೇ ಸಂಗ್ರಹಿಸಿಕೊAಡು ಮುಂಜಾನೆ ಶಾಲೆಯಂಗಳಕ್ಕೆ ಬಂದಿಳಿದು ಎಲ್ಲರಿಗೂ ಸಂತಸ ಮೂಡಿಸಿದರು.
ಶಿಕ್ಷಕ ನಾರಾಯಣ ನಾಯ್ಕ ನವಗ್ರಹಗಳು ಹಾಗೂ ನವಗ್ರಹ ವನದ ಕುರಿತು ಪರಿಚಯ ಮಾಡಿದರು. ಎಕ್ಕೆ, ಮುತ್ತುಗ, ಖೈರಾ, ಉತ್ತರಣಿ, ಅಶ್ವತ್ಥ, ಅತ್ತಿ, ಶಮಿ, ದರ್ಬೆ ಮತ್ತು ದೂರ್ವಾ ಗಳನ್ನು ಪ್ರದರ್ಶಿಸಿ, ಮಕ್ಕಳಿಂದಲೇ ಗಿಡಗಳನ್ನು ನೆಡಿಸಿದರು. ಜೊತೆಗೆ ಮಧುನಾಶಿನಿ, ನೆಲಮಾವು, ಮುಂತಾದ ಕೆಲವು ಔಷಧಿ ಸಸ್ಯಗಳ ಪರಿಚಯ ಮಾಡುವ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.
ನಾಟಿ ವೈದ್ಯ ಶ್ರೀಧರ ನಾಯ್ಕ ಕಡ್ನೀರು ಔಷಧಿ ಸಸ್ಯಗಳ ಮಹತ್ವ ಹಾಗೂ ಬಳಕೆಯ ಕುರಿತು ಮಾತನಾಡಿ, ಆರೋಗ್ಯಕರ ಜೀವನಶೈಲಿ ಮತ್ತು ಆಹಾರ ಪದ್ಧತಿ ಕುರಿತು ಎಲ್ಲರೂ ಗಮನಹರಿಸಬೇಕು ಎಂದರು. ಧನ್ವಂತರಿಯ ಪ್ರಾರ್ಥನೆ ಹೇಳಿಕೊಟ್ಟರು.
ಈ ಸಂದರ್ಭದಲ್ಲಿ ಸಿಆರ್‌ಪಿ ಈಶ್ವರ ಭಟ್, ಗ್ರಾಮ ಪಂಚಾಯತಿ ಸದಸ್ಯ ವಿನಯ್ ನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷ ದಿನೇಶ್ ನಾಯ್ಕ, ಸದಸ್ಯರಾದ ರವಿ ನಾಯ್ಕ, ರಾಮಚಂದ್ರ ನಾಯ್ಕ, ಸುನೀತಾ, ಗೋದಾವರಿ ಸಹಕರಿಸಿದರು. ಪೂರ್ವ ವಿದ್ಯಾರ್ಥಿಗಳಾದ ರೇಷ್ಮಾ, ಸುಧೀರ್ ಮುಂತಾದವರು ಹಾಜರಿದ್ದರು. ಮುಖ್ಯಾಧ್ಯಾಪಕಿ ಶಾರದಾ ಶರ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಭಾರತಿ ನಾಯ್ಕ ಸ್ವಾಗತಿಸಿದರು. ಎಚ್.ಎನ್.ನಾಯ್ಕ ವಂದಿಸಿದರು. ಜ್ಯೋತಿ ಶೇಟ್ ಕಾರ್ಯಕ್ರಮ ನಿರೂಪಿಸಿದರು.