ಅಂಕೋಲಾ: ಗಣೇಶನ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದ್ದು, ವಿವಿಧ ಭಂಗಿಯ ಗಣಪತಿಯ ಮೂರ್ತಿಗಳು ಗಮನ ಸೆಳೆಯುತ್ತಿದೆ. ಇತ್ತ ತಾಲೂಕಿನಲ್ಲಿ ಲಂಬೋದರ ಹಾಟ್ ಸೀಟಿನಲ್ಲಿ ಕುಳಿತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರೊಂದಿಗೆ ಕನ್ನಡದ ಕೋಟ್ಯಧಿಪತಿ ಆಡಲು ತಯಾರಾಗಿದ್ದಾನೆ
ಒಂದು ಕಡೆ ಗಣೇಶನ ಹಬ್ಬಕ್ಕೆ ಸಂಭ್ರಮ- ಸಡಗರದ ತಯಾರಿ ನಡೆದರೆ, ಮತ್ತೊಂದು ಕಡೆ ಅಗಲಿದ ಸ್ಯಾಂಡಲ್‌ವುಡ್ ನಟ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನ ಸ್ಮರಿಸಲು ಅವರ ಅಭಿಮಾನಿಗಳು ಈ ಗಣೇಶನ ಹಬ್ಬವನ್ನ ಅವಕಾಶವಾಗಿ ಮಾಡಿಕೊಂಡಿದ್ದಾರೆ. ಅದರಂತೆಯೇ ತಾಲೂಕಿನ ಅವರ್ಸಾ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕನ್ನಡದ ಕೋಟ್ಯಧಿಪತಿ ಗಣಪನನ್ನ ಪ್ರತಿಷ್ಠಾಪಿಸಲು ಸಿದ್ಧತೆ ಮಾಡಿಕೊಂಡಿದ್ದು, ಈಗಾಗಲೇ ಈ ಮೂರ್ತಿಯ ತಯಾರಿ ಕೂಡ ಮುಗಿದಿದೆ. ಗಣೇಶನೊಂದಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮೂರ್ತಿ ಕೂಡ ಜೊತೆ ಜೊತೆಗೆ ಪ್ರತಿಷ್ಠಾಪನೆಗೊಳ್ಳುತ್ತಿರುವುದು ವಿಶೇಷವಾಗಿದ್ದು, ಜಿಲ್ಲೆಯ ಜನತೆಯ ದೃಷ್ಟಿ ಸದ್ಯ ಇಲ್ಲಿಯ ಗಣೇಶೋತ್ಸವದ ಮೇಲೆ ನೆಟ್ಟಿದೆ.
ಅಷ್ಟಕ್ಕೂ ಈ ಕನ್ನಡದ ಕೋಟ್ಯಧಿಪತಿ ಗಣಪ ಹಾಗೂ ಪುನೀತ್ ರಾಜಕುಮಾರ್ ಅವರ ಮೂರ್ತಿಯನ್ನು ತಯಾರು ಮಾಡಿರುವುದು ತಾಲೂಕಿನ ಅವರ್ಸಾ ಗ್ರಾಮದ ಕುಮ್ಮಣ್ಣ ಮೇತ್ರಿ ಮನೆತನದ ದಿನೇಶ ಮೇತ್ರಿ. ಈ ಮೇತ್ರಿ ಕುಟುಂಬ ಮೂರ್ತಿ ತಯಾರಿಕೆಯಲ್ಲಿ ಎತ್ತಿದ ಕೈ; ವರ್ಷವಿಡೀ ಈ ಕುಟುಂಬದಿಂದ ಮೂರ್ತಿಗಳ ನಿರ್ಮಾಣ ಕಾರ್ಯ ನಡೆಯುತ್ತಲೇ ಇರುತ್ತದೆ. ಇಂಥ ಕುಟುಂಬದ ದಿನೇಶ ಮೇತ್ರಿ, ಚಿತ್ರಕಲೆ, ರಂಗೋಲಿ, ಮೂರ್ತಿ ನಿರ್ಮಾಣದಂಥ ಕಲೆಗಳಿಂದ ಇಂದು ರಾಜ್ಯಾದ್ಯಂತ ಪರಿಣಿತನಾಗಿ ಗುರುತಿಸಿಕೊಂಡಿದ್ದಾನೆ. ಇದೀಗ ಪುನೀತ್ ಹಾಗೂ ಗಣಪನನ್ನ ಕನ್ನಡದ ಕೋಟ್ಯಧಿಪತಿಯ ಸೆಟ್‌ನಲ್ಲಿ ಕೂತಂತೆ ತಯಾರು ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಈಗಾಗಲೇ ತಂಡೋಪತಂಡದಲ್ಲಿ ಜನತೆ ಇವರ ಮನೆಗೆ ಮೂರ್ತಿ ನೋಡಲು ಆಗಮಿಸುತ್ತಿದೆ. ಹೀಗಾಗಿ ಗಣೇಶನ ಪ್ರತಿಷ್ಠಾಪನೆಯ ಬಳಿಕ ಈ ಹಿಂದಿನ ಎಲ್ಲಾ ವರ್ಷಗಳಿಗಿಂತ ಹೆಚ್ಚಿನ ಜನ ಈ ಬಾರಿ ಸೇರುವ ಸಾಧ್ಯತೆಯೂ ಇದೆ.