ಬೆಂಗಳೂರು: ಕರ್ನಾಟಕದಲ್ಲಿ ಸೂಕ್ಷ್ಮ ನೀರಾವರಿ ಕಾರ್ಯಕ್ರಮಗಳಿಗೆ ಹೆಚ್ಷಿನ ಬೇಡಿಕೆ ಇರುವುದನ್ನು ಗಮನಿಸಿದ ಕೇಂದ್ರ ಸರ್ಕಾರವು ರಾಜ್ಯದ ಬೇಡಿಕೆ ಅನುಸಾರ ಕೇಂದ್ರದ ಅನುದಾನವನ್ನು ಹೆಚ್ಚಿಸಲು ಆದೇಶಿಸಿದೆ. ಅಲ್ಲದೇ ಎರಡನೇ ಕಂತಿನ ಅನುದಾನವನ್ನು ಸಹ ಬಿಡುಗಡೆ ಮಾಡಿದೆ.
2020-21ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಪಿಎಂಕೆಎಸ್‌ವೈ ಪಿಡಿಎಂ ಅಡಿಯಲ್ಲಿ 400 ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು.
2021-22 ನೇ ಸಾಲಿನಲ್ಲಿ ರಾಜ್ಯದಲ್ಲಿ ಸೂಕ್ಷ್ಮನೀರಾವರಿ ಕಾರ್ಯಕ್ರಮಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಕೇಂದ್ರ ಸರ್ಕಾರ ಇದೀಗ ರಾಜ್ಯದ ಮನವಿಯಂತೆ 500 ಕೋಟಿ ರೂಪಾಯಿಗಳ ಅನುದಾನವನ್ನು ಹಂಚಿಕೆ ಮಾಡಿದೆ. ಕಳೆದ ಬಾರಿಗೆ ಹೋಲಿಸಿದಲ್ಲಿ ಶೇ25 ರಷ್ಟು ಹೆಚ್ಚಿನ ಕೇಂದ್ರದ ಪಾಲಿನ ಅನುದಾನ ಪಡೆಯಲಾಗಿದೆ.
ಪ್ರಸಕ್ತ ಸಾಲಿನಲ್ಲಿ ಕೇಂದ್ರವು ಹಂಚಿಕೆ ಮಾಡಿದ್ದ 500 ಕೋಟಿ ರೂಪಾಯಿಗಳಲ್ಲಿ ಮೊದಲ ಕಂತಿನ ಅನುದಾನವನ್ನಾಗಿ ರಾಜ್ಯಕ್ಕೆ 300 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿತ್ತು. ಉಳಿದ 200 ಕೋಟಿ ರೂಪಾಯಿಗಳನ್ನು ಮಾರ್ಚ್25 ರಂದು ಅಂದರೆ ನಿನ್ನೆ ಕರ್ನಾಟಕಕ್ಕೆ ಬಿಡುಗಡೆ ಮಾಡಿದೆ.
ಸದರಿ ಕಾರ್ಯಕ್ರಮವು ತೋಟಗಾರಿಕೆ, ಕೃಷಿ, ರೇಷ್ಮೆ ಮತ್ತು ಜಲಾನಯನಬ ಅಭಿವೃದ್ಧಿ ಇಲಾಖೆಗಳನ್ನೊಳಗೊಂಡಿರುತ್ತದೆ. ಕೇಂದ್ರ ಹಂಚಿಕೆ ಮಾಡಿದ ಅನುದಾನದಲ್ಲಿ ಶೇ.76ರಷ್ಟು ಸಾಮಾನ್ಯ ವರ್ಗಕ್ಕೆ ಶೇ.17 ರಷ್ಟು ಪರಿಶಿಷ್ಟ ಜಾತಿಗೆ ಮತ್ತು ಪರಿಶಿಷ್ಟಪಂಗಡಕ್ಕೆ ಶೇ 7 ರಷ್ಟನ್ನು ನಿಗದಿಪಡಿಸಿ ಅನುದಾನ ಬಿಡುಗಡೆ ಮಾಡಲಾಗಿರುತ್ತದೆ. ಕೇಂದ್ರದಿಂದ ರಾಜ್ಯಕ್ಕೆ ಇದರ ಯೋಜನೆಯಡಿ ಹಂಚಿಕೆಯಾದ ಎರಡನೇ ಕಂತಿನ 200 ಕೋಟಿ ರೂ.ಗಳ ಕೇಂದ್ರದ ಪಾಲಿನ ಅನುದಾನದಲ್ಲಿ ಕೃಷಿ ಇಲಾಖೆಗೆ ಹಂಚಿಕೆ ಮಾಡಬಹುದಾದ ಅನುದಾನಕ್ಕನುಗುವಾಗಿ ರಾಜ್ಯದ ಪಾಲಿನ ಅನುದಾನವನ್ನೂ ಸೇರಿಸಿ ಲಭ್ಯವಾಗುವ ಒಟ್ಟು ಅನುದಾನಕ್ಕೆ ಜಿಲ್ಲಾವಾರು ಬೇಡಿಕೆ ಅನುಸಾರ ಕ್ರಿಯಾಯೋಜನೆಯನ್ನು ನೀಡಲಾಗಿರುತ್ತದೆ. ಇದರಿಂದ ಬೇಸಿಗೆ ಹಂಗಾಮಿನ ಬೆಳೆಗಳಿಗಳಿಗೆ ಸಕಾಲದಲ್ಲಿ ಸೂಕ್ಷ್ಮನೀರಾವರಿ ಘಟಕಗಳನ್ನು ವಿತರಿಸಿ ಬೆಳೆಗಳನ್ನು ಉಳಿಸಿಕೊಳ್ಳಲು ಸಹಾಯಕವಾಗುತ್ತದೆ.
ಜಿಲ್ಲೆಗಳಿಗೆ ನೀಡಿದ ಕ್ರಿಯಾಯೋಜನೆಯನ್ವಯ ಸೂಕ್ಷ್ಮನೀರಾವರಿ ಘಟಕಗಳನ್ನು ರೈತರಿಗೆ ತುರ್ತಾಗಿ ಅಂದರೆ ನಿನ್ನೆಯಿಂದಲೇ ಮಾರ್ಚ್ 25 ರಿಂದ ವಿತರಣೆ ಆರಂಭವಾಗಿರುತ್ತದೆ. ಇದರಿಂದ ಸಂಕಷ್ಟದಲ್ಲಿರುವ ರೈತರಿಗೆ ತುರ್ತಾಗಿ ನೆರವಿಗೆ ಧಾವಿಸಲು ಕರ್ನಾಟಕಸರ್ಕಾರ ಕ್ರಮ ಕೈಗೊಂಡಿರುತ್ತದೆ.