ಶಿರಸಿ: ನಗರದ ಪ್ರತಿಷ್ಠಿತ ಎಂಇಎಸ್ ಶಿಕ್ಷಣ ಸಂಸ್ಥೆಯು ಬಹು ನಿರೀಕ್ಷಿತವಾಗಿದ್ದ ವಿದ್ಯಾರ್ಥಿಗಳ ವಸತಿ ನಿಲಯ “ಸಹ್ಯಾದ್ರಿ” ಶನಿವಾರ ಮಹಾಗಣಪತಿ ಹೋಮದೊಂದಿಗೆ ಉದ್ಘಾಟನೆಗೊಂಡಿತು.
ಉದ್ಘಾಟನೆ ನೆರವೇರಿಸಿ, ಎಂಇಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ ಮಾತನಾಡಿ, ಈಗಾಗಲೇ ಎಂ.ಇ.ಎಸ್ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿನಿಯರ ಮೂರು ವಸತಿ ನಿಲಯಗಳನ್ನು ನಡೆಸುತ್ತಿದ್ದು, ವಿದ್ಯಾರ್ಥಿಗಳಿಗೂ ವಸತಿ ನಿಲಯದ ಅವಶ್ಯಕತೆ ಮನಗಂಡ ಆಡಳಿತ ಮಂಡಳಿಯ ತೀರ್ಮಾನಿಸಿ, 60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. 60 ರಿಂದ 70 ವಿದ್ಯಾರ್ಥಿಗಳ ವಸತಿಗೆ ಅವಕಾಶ ಕಲ್ಪಿಸಲಾಗಿದೆ. ವಸತಿ ನಿಲಯದಲ್ಲಿ ಊಟದ ಜತೆ ವಿಶಾಲ ಕೋಣೆಗಳು, ಕಾಟು, ಕಪಾಟು, ಫ್ಯಾನ್, ಶೌಚಾಲಯ, ಬಿಸಿ ನೀರಿನ ವ್ಯವಸ್ಥೆ, ಸುರಕ್ಷತೆಯ ದೃಷ್ಟಿಯಿಂದ ಸಿ.ಸಿ.ಟಿವಿ ಕ್ಯಾಮೆರಾ ಹಾಗೂ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಎಂ.ಇ.ಎಸ್ ಪದವಿ ಪೂರ್ವ ಹಾಗೂ ಪದವಿ ಮಹಾವಿದ್ಯಾಲಯದ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಇಲ್ಲಿ ಪ್ರವೇಶಕ್ಕೆ ಅವಕಾಶ ನೀಡಲಾಗಿದ್ದು, ಮೊದಲು ಬಂದವರಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ ಎಂದರು.
ಸಂಸ್ಕಾರ, ಸಂಸ್ಕೃತಿಯೊಂದಿಗೆ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವ ಮೊಡರ್ನ್ ಎಜ್ಯುಕೇಶನ್ ಟ್ರಸ್ಟ್ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ವರದಾ, ಶರಾವತಿ, ಶಾಲ್ಮಲಾಗಳನ್ನು ನಡೆಸಲಾಗುತ್ತಿದೆ. ಈಗ ಹೊಸ ಹೆಜ್ಜೆಯನ್ನಿಟ್ಟು ವಿದ್ಯಾರ್ಥಿಗಳಿಗೆ ವಸತಿ ನಿಲಯ ನಿರ್ಮಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ವಿನಂತಿಸಿದರು.
ಎಂ.ಎಂ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಟಿ.ಎಸ್.ಹಳೆಮನೆ ಗಣಪತಿ ಹೋಮ ನೆರವೇರಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಂ.ಜಿ.ಹೆಗಡೆ ಗಡಿಮನೆ, ಖಜಾಂಚಿ ಸುಧೀರ ಭಟ್ಟ, ನಿರ್ದೇಶಕರಾದ ನಿತೀನ ಕಾಸರಗೋಡ, ಶ್ಯಾಮ್ ಭಟ್ಟ, ಎಸ್.ಕೆ.ಭಾಗ್ವತ್ ಶಿರಸಿಮಕ್ಕಿ, ಎಸ್.ಎನ್.ಹೆಗಡೆ, ಪ್ರತಿಕೋದ್ಯಮ ವಿಭಾಗದ ಮುಖ್ಯಸ್ಥ ರಾಘವೇಂದ್ರ ಜಾಜಿಗುಡ್ಡೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.