ಸಿದ್ದಾಪುರ: ಯಕ್ಷಗಾನ ಮನರಂಜನೆ, ಕಲೆ, ಧಾರ್ಮಿಕತೆಯ ಭಾಗವಾಗಿದೆ. ಅನಾದಿಕಾಲದಿಂದ ದೇವರ ಉತ್ಸವ ವ್ಯಕ್ತಿಗತ ಕಾರ್ಯಕ್ರಮಗಳ ಭಾಗವಾಗಿ ಯಕ್ಷಗಾನ ಬಯಲಾಟ ಮತ್ತು ತಾಳಮದ್ದಳೆ ಪ್ರಕಾರಗಳನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ. ಇದೊಂದು ಕಲಾಪ್ರಕಾರವಾಗಿದ್ದು, ಮಾತು ಹಾಗೂ ಕಥೆಗಳನ್ನು ಒಟ್ಟಿಗೆ ಒಯ್ಯುವ ಮತ್ತು ಕಲಾವಿದರ ನೈಪುಣ್ಯವನ್ನು ನೋಡಬಲ್ಲ ಕಲೆಯಾಗಿದೆ ಎಂದು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಸಿದ್ದಾಪುರ ಟಿ.ಎಂ.ಎಸ್. ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಹೇಳಿದರು.
ಅವರು ಮರಲಿಗೆಯಲ್ಲಿ ಎಸ್.ಕೆ. ಗೌಡ (ವಕೀಲರು) ಅವರ ಮನೆ ‘ಆದಿಶಕ್ತಿ’ ನಿಲಯದ ಪ್ರವೇಶೋತ್ಸವ ಅಂಗವಾಗಿ ‘ಜಾಂಬವತಿ ಕಲ್ಯಾಣ’ ಎಂಬ ತಾಳಮದ್ದಳೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಖ್ಯಾತ ವಿದ್ವಾಂಸ ಉಮಾಕಾಂತ ಭಟ್ಟರು ಜಾಂಬವಂತನಾಗಿ, ಅರುಣ ವೆಂಕಟವಳ್ಳಿ ಕೃಷ್ಣನಾಗಿ, ಗಣಪತಿ ಗುಂಜಗೋಡ ಬಲರಾಮನಾಗಿ, ಜಯರಾಮ ಭಟ್ಟ ಗುಂಜಗೋಡ ನಾರದನಾಗಿ ತುಂಬ ಮನೋಜ್ಞವಾಗಿ ಅಭಿನಯಿಸಿದರು. ತಾಳಮದ್ದಳೆ ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯಿತು. ಕೇಶವ ಕೊಳಗಿ ಭಾಗವತರಾಗಿ, ಶಂಕರ ಭಾಗವತ ಯಲ್ಲಾಪುರ ಮೃದಂಗಕಾರರಾಗಿ ಭಾಗವಹಿಸಿದ್ದರು.
ವಕೀಲರಾದ ಎಸ್.ಕೆ. ಗೌಡ ಮರಲಿಗೆ ಸ್ವಾಗತಿಸಿದರು. ಜಿ.ಜಿ. ಹೆಗಡೆ ಬಾಳಗೋಡ ನಿರೂಪಿಸಿದರು. ಅರುಣ ಕಟ್ಟಿನಕೆರೆ ವಂದಿಸಿದರು.