Slide
Slide
Slide
previous arrow
next arrow

ಮತದಾನ ಜಾಗೃತಿ ಮೂಡಿಸಿದ “ಪ್ರಜಾ ವತ್ಸಲೇ ಭಾರತಿ”

300x250 AD

ಕಾರವಾರ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಕುರಿತಂತೆ, ಕಾರವಾರದ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಿದ್ದ ಯಕ್ಷಗಾನ ಪ್ರಸಂಗ ‘ ಪ್ರಜಾ ವತ್ಸಲೇ ಭಾರತಿ’ ನೆರದಿದ್ದ ಸಾರ್ವಜನಿಕರಲ್ಲಿ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವಲ್ಲಿ ಅತ್ಯಂತ ಯಶಸ್ವಿಯಾಯಿತು.

ಪ್ರಸಂಗದಲ್ಲಿ, ಸರ್ವಾಧಿಕಾರಿ ರಾಜನೊಬ್ಬನ ಧೋರಣೆಯಿಂದ ನೊಂದ ಪ್ರಜೆಗಳು, ಆತನ ಕ್ರೂರತನವನ್ನು ಸಹಿಸಲಾಗದೆ ದಂಗೆ ಎದ್ದು ಅವನನ್ನು ಕೊಲ್ಲುತ್ತಾರೆ. ನಂತರದಲ್ಲಿ ಯಾರನ್ನು ಮುಂದಿನ ರಾಜನನ್ನಾಗಿ ಮಾಡಬೇಕು ಎಂಬ ಗೊಂದಲದಲ್ಲಿದ್ದು, ಈ ಸಮಸ್ಯೆಗೆ ಪರಿಹಾರನ್ನು ತಾಯಿ ಭಾರತಾಂಬೆಯಲ್ಲಿ ಕೇಳೋಣ ಎಂದು ಭಾರತಾಂಬೆಯನ್ನು ಪ್ರಾರ್ಥಿಸುತ್ತಾರೆ.
ಪ್ರಜೆಗಳ ಪ್ರಾರ್ಥನೆಗೆ ಪ್ರತ್ಯಕ್ಷವಾದ ಭಾರತಾಂಭೆ, ದೇಶದಲ್ಲಿ ಪ್ರಭುಗಳ ಆಡಳಿತ ವ್ಯವಸ್ಥೆ ಬೇಡ, ಪ್ರಜೆಗಳಿಂದಲೇ ಆಯ್ಕೆಯಾದ ಸೂಕ್ತ ವ್ಯಕ್ತಿ ದೇಶವನ್ನು ಮುನ್ನಡೆಸಲಿ. ಇದಕ್ಕಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಿ. ನಿಮ್ಮ ನಾಯಕನನ್ನು ನೀವೇ ಆಯ್ಕೆ ಮಾಡಿಕೊಳ್ಳಿ ಎಂದು ತಿಳಿಸಿ, ಸೂಕ್ತ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಅನುಸರಿಸಬೇಕಾದ ಮತದಾನದ ವ್ಯವಸ್ಥೆಯ ಕುರಿತಂತೆ ಸಮಗ್ರ ಮಾಹಿತಿಯ ಕುರಿತಂತೆ ಅರಿವು ಮೂಡಿಸುತ್ತಾರೆ.
ನಂತರ ನಡೆಯುವ ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರಿಗೆ ವಿವಿಧ ಆಮಿಷಗಳನ್ನು ಒಡ್ಡುವ ಜನಪ್ರತಿನಿಧಿಗಳ ಕುರಿತಂತೆ ಎಚ್ಚರವಹಿಸುವಂತೆ ತಿಳಿಸುವ ಆಯಾ ಪ್ರಾಂತ್ಯದ ಪ್ರಾಂತ್ಯಾಧಿಕಾರಿಗಳು , ಯಾವುದೇ ಒತ್ತಡ ಆಮಿಷಗಳಿಗೆ ಬಲಿಯಾಗದೇ ಸೂಕ್ತ ನಾಯಕನ್ನು ಆಯ್ಕೆ ಮಾಡುವ ಮೂಲಕ ಭಾರತಾಂಬೆಯ ಆಶಯಗಳನ್ನು ತಪ್ಪದೇ ಪಾಲಿಸುವಂತೆ ಜನತೆಗೆ ತಿಳಿಸುತ್ತಾರೆ.
ಮತದಾನದ ದಿನದಂದು ಯುವ ಮತದಾರರು ಸೇರಿದಂತೆ ಎಲ್ಲಾ ಮತದಾರರು ಉತ್ಸಾಹದಿಂದ ಮತ ಚಲಾಯಿಸಿ ತಮ್ಮ ಜನಪ್ರತನಿಧಿಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನವನ್ನು ಹಬ್ಬದಂತೆ ಆಚರಿಸುವ ಮತ್ತು ಮತದಾನದ ಪ್ರತಿಜ್ಞಾ ವಿಧಿ ಸ್ವೀಕಾರದೊಂದಿಗೆ ಮೇ 7 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಪ್ರತಿಯೊಬ್ಬ ನಾಗರೀಕರು ತಪ್ಪದೇ ಮತ ಚಲಾಯಿಸುವಂತೆ ಸಂದೇಶ ಸಾರಲಾಯಿತು.

300x250 AD

ಯಕ್ಷಗಾನದ ಮುಮ್ಮೇಳದಲ್ಲಿ ಪ್ರಖ್ಯಾತ ಕಲಾವಿದರಾದ ಶಂಕರ ಹೆಗಡೆ ನೀಲ್ಕೋಡ ಭುವನ ವಂದ್ಯ ಆಗಿ, ಧಮನವೀರನಾಗಿ ದೀಪಕ ಕುಂಶಿ, ಸಮ್ಮತಿ ಸೇನಾ ಆಗಿ ಸನ್ಮಯ ಭಟ್ಟ , ದಾಸಪ್ಪ ಆಗಿ ಶಿವಾ ಆವರ್ಸೆ, ಭಾರತ ಮಾತೆ ನಾಗರತ್ನ ಆಗಿ ನಾಗರಾಜ ಕುಂಶಿ, ಸೇರಿದಂತೆ ಇನ್ನಿತರೆ ಕಲಾವಿದರು ಪ್ರೇಕ್ಷಕರನ್ನು ರಂಜಿಸುವ ಜೊತೆಗೆ ಮತದಾನದ ಕುರಿತು ಮನಮುಟ್ಟುವಂತೆ ಸಂದೇಶ ನೀಡಿದರು.
ಹಿಮ್ಮೇಳದಲ್ಲಿ ಭಾಗವತರಾಗಿ ಸರ್ವೇಶ್ವರ ಮುರೂರು, ಮದ್ದಳೆಯಲ್ಲಿ ಅನಿರುದ್ದ ಹೆಗಡೆ ಪರಮೇಶ್ವರ ಬಂಡಾರಿ ಮೃದಂಗ ಮತ್ತು ಚಂಡೆಯಲ್ಲಿ ಗಣೇಶ ಗಾಂವ್ಕರ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಚುನಾವಣಾ ವೀಕ್ಷಕ ರಾಜೀವ ರತನ್, ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ ಕಾಂದೂ , ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಉಪವಿಭಾಗಾಧಿಕಾರಿ ಕನಿಷ್ಕ, ಹಾಗೂ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು , ಸಿಬ್ಬಂದಿಗಳು ಹಾಗೂ ಯುವ ಮತದಾರರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top