Slide
Slide
Slide
previous arrow
next arrow

ಸ್ವಾಮಿ ವಿವೇಕಾನಂದರೆಂಬ ಸ್ಪೂರ್ತಿಯ ಚಿಲುಮೆ

300x250 AD

ವ್ಯಕ್ತಿ ವಿಶೇಷ: ಒಮ್ಮೆ ಸ್ಪಾಮಿ ವಿವೇಕಾನಂದರ ಅನುಯಾಯಿ ಗಳಿಗೆ ವ್ಯಕ್ತಿಯೊರ್ವರು ಕೇಳಿದರಂತೆ, ಸ್ವಾಮೀಜಿಯವರು ಬದುಕಿದ್ದು 39 ವರ್ಷ ಮಾತ್ರ..

ಆದರೆ, ಅವರಿಂದ ಇನ್ನೂ ಹೆಚ್ಚಿನ ಸಾಧನೆಯಾಗುವುದಿತ್ತು ಎಂದು, ಅದಕ್ಕೆ ವಿವೇಕಾನಂದರ ಅನುಯಾಯಿಗಳು ಪ್ರತಿಕ್ರಯಿಸುತ್ತಾ ಬದುಕಿದ್ದು 39 ವರ್ಷ ಆದರೂ ಆ ಜೀವಿತಾವಧಿಯಲ್ಲಿ ಅವರು ಮುಂದಿನ ಎಷ್ಟೋ ತಲೆಮಾರುಗಳಿಗಾಗುವಷ್ಟು ಜ್ಞಾನವನ್ನು ಪಸರಿಸಿ,ಅಭೂತಪೂರ್ವವಾದುದನ್ನು ಅಚಲವಾದುದನ್ನು ಸಾಧಿಸಿ ಚಿರ ಧ್ಯಾನ ಮಗ್ನರಾದರು ಎಂದು. ಅನುಯಾಯಿಗಳು ಮುಂದುವರೆಸುತ್ತಾ, ಜೀವನ 3 ಗಂಟೆಯ ಪರೀಕ್ಷೆ ಎಂದು ಭಾವಿಸಿದಾಗ ,ಆ ಪರೀಕ್ಷಾ ಪ್ರಶ್ನೆಪತ್ರಿಕೆಯಲ್ಲಿನ ಎಲ್ಲಾ ಪ್ರಶ್ನೆಗಳಿಗೆ ಕೇವಲ 1 ಗಂಟೆಯ ಕ್ಷಣಕಾಲದಲ್ಲಿ ಸ್ವಾಮೀಜಿಯವರು ಉತ್ತರಿಸಿ , ಮಾದರಿ ಉತ್ತರಗಳಾಗುವಂತೆ ಬರೆದು ಪರೀಕ್ಷಾ ಕೊಠಡಿಯನ್ನು ತೊರೆದು ನಡೆದರು..,ಆದರೆ ನಾವು ಇಂದಿಗೂ ಜೀವನದ ಪರೀಕ್ಷೆಯ ಅನೇಕ ಪ್ರಶ್ನೆಗಳಿಗೆ ಉತ್ತರಿಸಲಾಗದೆ, ಕಾಲಹರಣಮಾಡುತ್ತಾ ಸಮಸ್ಯೆಗಳ ಸುಳಿಯಲ್ಲಿ ಸಿಲುಕುತ್ತಾ ಪೇಚಾಡುತ್ತಿದ್ದೇವೆ.


ವಿವೇಕಾನಂದರ ಉದಾತ್ತ ವಿಚಾರಗಳು ಇಂದಿಗೂ ಪ್ರಸ್ತುತ ,ಅವರ ಸದ್ವಿಚಾರದ ಜ್ಞಾನದೀವಿಗೆಯನ್ನೊಮ್ಮೆ ಅಧ್ಯಯನಮಾಡಿದಾಗ ಪ್ರಶ್ನೆಗಳಿಗೆ ಸಮಂಜಸ ಉತ್ತರ ದೊರಕೀತು!?

1863 ,ಜನವರಿ 12 ರಂದು ಕಲ್ಕತ್ತಾದಲ್ಲಿ ವಿಶ್ವನಾಥದತ್ತ ಹಾಗೂ ಭುವನೇಶ್ವರಿದೇವಿ ದಂಪತಿಗಳ ಪುತ್ರನಾಗಿ ಜನಿಸಿದ ನರೇಂದ್ರನಾಥರು ಆಧ್ಯಾತ್ಮಿಕ ಅಧ್ಯಯನವನ್ನು ಮಾಡುತ್ತಾ ಗುರು ರಾಮಕೃಷ್ಣ ಪರಮಹಂಸರ ವಿಚಾರಧಾರೆಗಳಿಂದ ಪ್ರಭಾವಿತರಾಗಿ ಪ್ರಪಂಚ ಪರ್ಯಟನೆ ನಡೆಸಿ, ಸೆಪ್ಟೆಂಬರ್ 11 , 1893 ರಲ್ಲಿ ಅಮೇರಿಕಾದ ಶಿಕಾಗೂ ನಗರದ ಸರ್ವಧರ್ಮ ಸಮ್ಮೇಳನದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದು ಇತಿಹಾಸದ ಪುಟಗಳಲ್ಲಿ ಅಜರಾಮರ. ಧೀಮಂತ ಸಂತ ಧ್ಯಾನ ಮಗ್ನರಾಗಿದ್ದಾಗಲೇ 1920, ಜುಲೈ 4 ರಂದು ಚಿರಶಾಂತಿ ಹೊಂದಿದರು.

ಸ್ವಾಮಿ ವಿವೇಕಾನಂದರು “ಜಗತ್ತಿನ ಹಿತಕ್ಕಾಗಿ ಆತ್ಮ ಸಾಕ್ಷಾತ್ಕಾರವಾಗಬೇಕು , ಆತ್ಮನಲ್ಲಿ ಹುದುಗಿರುವುದನ್ನು ಬಾಹ್ಯವಾಗಿ ಪ್ರಕಟಗೊಳಿಸುವುದೇ ಶಿಕ್ಷಣ” ಎಂಬುದಾಗಿ ಅಭಿಪ್ರಾಯಪಟ್ಟವರು. ಅಂತಹ ಆಧ್ಯಾತ್ಮ ಶಿಕ್ಷಣ ಬಾಲ್ಯದಿಂದಲೇ ತಂದೆತಾಯಿಗಳ ,ಪೋಷಕರ ಪ್ರೇರಣೆಯಿಂದ ಮಕ್ಕಳಿಗೆ ಸಿಗುವಂತಾಗಬೇಕು.ಅದು ಮುಂದಿನ ಪೀಳಿಗೆಗೆ ಮುಂದುವರೆಯಬೇಕು. ಮಕ್ಕಳು ಚಿಕ್ಕಂದಿನಿಂದಲೇ ಸದಾಚಾರಾ, ದೈವಭಕ್ತಿ ,ಒಲವು, ಸತ್ಯ , ಪ್ರಾಮಾಣಿಕತೆ ಮುಂತಾದ ಮೌಲ್ಯಗಳನ್ನು ಬೆಳೆಸಿಕೊಂಡರೆ ವಿಶ್ವಶಾಂತಿಯನ್ನು ಸ್ಥಾಪಿಸಲು ಸಾಧ್ಯವಾದೀತು.!?

300x250 AD

ನಾವು ಸಾಕ್ಷರಾಗುವುದರೊಂದಿಗೆ ನಮ್ಮ ಆತ್ಮಸಾಕ್ಷಾತ್ಕಾರವಾದಾಗ ಮಾತ್ರ ಸರ್ವತೋಮುಖ ಬೆಳವಣಿಗೆ ಸಾಧ್ಯ. ಇಂದಿನ ಯುವ ಪೀಳಿಗೆ -ವಿದ್ಯಾರ್ಥಿ ಸಮೂಹ ಚಂಚಲ ಮನಸ್ಸಿನಿಂದ ಹೊರಬಂದು ಪರಿಪಕ್ವತೆಯ ಕಡೆಗೆ,ನಿರ್ದಿಷ್ಟ ಗುರಿಯೆಡೆಗೆ ಚಿತ್ತ ಮಾಡಬೇಕು, ವಿದ್ಯಾರ್ಥಿಗಳು ತಮ್ಮ ಕರ್ತವ್ಯವನ್ನು ಚೆನ್ನಾಗಿ ಪಾಲಿಸಬೇಕು,ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕ್ರಾಂತಿಯಾಗಬೇಕು, ಸ್ಪರ್ಧೆಗೆ ಸದಾ ಹಾತೊರೆಯುತ್ತಾ ಮನಸ್ಸಿನೊಂದಿಗೆ ಸ್ಪರ್ಧೆಗಿಳಿದು ಗೆದ್ದಾಗ , ನಿಶ್ಚಿತ ಗುರಿಯ ಸಾಧನೆಯಾಗುವುದು.

ವಿವೇಕಾನಂದರ “ಏಳಿ ! ಏದ್ದೇಳಿ !!,ಗುರಿ ಮುಟ್ಟುವವರೆಗೆ ನಿಲ್ಲದಿರಿ” ಎಂಬ ವಿದ್ಯುತ್ ವಾಣಿ ಇಂದಿಗೂ ಎಂದೆಂದೆಗೂ ಸಾಧನೆಗೆ ಮಿಂಚುಹರಿಸುವಂತಹದ್ದು, ಅದುವೇ ಸ್ಪೂರ್ತಿಯ ಹೂರಣ ಬದುಕಿಗೊಂದು ಹೊಂಗಿರಣ! ಪ್ರಸ್ತುತ ವಿದ್ಯಾವಂತ ಯುವಕರು ಎಚ್ಚರಗೊಳ್ಳಬೇಕು, ರಾಷ್ಟ್ರಪ್ರೇಮಿಗಳು ಒಂದಾಗಬೇಕು,ರಾಷ್ಟ್ರಕ್ಕೆ ಒದಗಿದ ನೈತಿಕ ಅವನತಿಯ ಮಹಾವಿಪತ್ತು ದೂರವಾಗುವಂತೆ ಸರ್ವಧರ್ಮಿಯರು ಸರ್ವಶಕ್ತನಾದ ಭಗವಂತನನ್ನು ನಿತ್ಯವೂ ಪ್ರಾರ್ಥಿಸಬೇಕು. ರಚನಾತ್ಮಕ ಕಾರ್ಯಗಳನ್ನು ಯೋಜಿಸಿಕೊಂಡು ದುಡಿಯಬೇಕು.ಧರ್ಮಜಾಗೃತಿ ಆಗಬೇಕು.ಧರ್ಮದ ಹೆಸರಿನಲ್ಲಿ ನಡೆಯುವ ಅನ್ಯಾಯ ದೂರವಾಗಬೇಕು.ಕಷ್ಟದಲ್ಲಿರುವ ಬಡಪಾಯಿ ದುಃಖಿತರಿಗೆ ಸಾಂತ್ವನ – ಸಹಾಯ ದೊರಕಬೇಕು.ಯುವಜನತೆ ಭವ್ಯಭಾರತದ ನಿರ್ಮಾಣಕ್ಕೆ ಚಾರಿತ್ರ್ಯ ಬಲವನ್ನು ವೃದ್ಧಿಸಿಕೊಂಡು ಕಂಕಣಬದ್ಧರಾಗಬೇಕು. ವೇದಾಂತಧರ್ಮವೇ ಭಾರತದ ಜೀವಾಳವಾಗಿರುವದನ್ನು ಅರಿತು, ಸನಾತನ ಮೌಲ್ಯಗಳನ್ನು ರೂಢಿಗೊಳಿಸುವ ಮಹತ್ಕಾರ್ಯವನ್ನು ಕೈಗೊಳ್ಳಬೇಕಾಗಿದೆ. ವೀರ ಸನ್ಯಾಸಿಯ ಅಮೃತ ಸಂದೇಶಗಳನ್ನು ಮನನಮಾಡಿ ಅನುಷ್ಠಾನ ತರುವ ಪ್ರಯತ್ನ ಮಾಡಬೇಕಿದೆ.
ಇಗೋ! ಬನ್ನಿ ನಮ್ಮ ಗುರಿಯನ್ನು ಸ್ಪಷ್ಟೀಕರಿಸೋಣ..!!

ಲೇಖನ: ರವಿಕುಮಾರ.ಕೆ.ಎನ್
ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ಬಿಸಗೋಡ, ಯಲ್ಲಾಪುರ

Share This
300x250 AD
300x250 AD
300x250 AD
Back to top