ಹೊನ್ನಾವರ: ದೇಶದ ಪ್ರಧಾನಿ ನರೇಂದ್ರಮೋದಿ ಮತ್ತೊಮ್ಮೆ ಪ್ರಧಾನಿ ಆಗಲು ಕಾರ್ಯಕರ್ತರೆಲ್ಲರೂ ಒಗ್ಗೂಡಿ ಕೇಂದ್ರ ಸರ್ಕಾರದ ಸಾಧನೆಯನ್ನು ಮನೆ ಬಾಗಿಲಿಗೆ ತಲುಪಿಸಬೇಕು ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಕಾರ್ಯಕರ್ತರಿಗೆ ಕರೆ ನೀಡಿದರು.
ತಾಲೂಕಿನ ಕಡತೋಕಾದ ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಶಿವಾನಂದ ಹೆಗಡೆ ಮನೆ ಆವರಣದಲ್ಲಿ ನಡೆದ ಜಿಲ್ಲಾ ರೈತಮೊರ್ಚಾ ಫಲಾನುಭವಿಗಳ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು ಸಾಮಾಜಿಕ ಹಾಗೂ ರಾಜಕೀಯ ಹೋರಾಟದ ಮೂಲಕ ಮಾದರಿಯಾದ ಜಿಲ್ಲೆ ಉತ್ತರಕನ್ನಡವಾಗಿದೆ. ಕಾರ್ಯಕರ್ತರಾಗಿ ಬೆಳೆದು ಪಕ್ಷದ ಅಭ್ಯರ್ಥಿಯನ್ನಾಗಿಸುವ ಪಕ್ಷ ಬಿಜೆಪಿ ಮಾತ್ರವಾಗಿದ್ದು, ಅದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ಪಕ್ಷಕ್ಕಿಂತ ದೇಶ ಮೊದಲು ಎನ್ನುವುದು ಬಿಜೆಪಿ ಪಕ್ಷದ ನಿಲುವಾಗಿದೆ. ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಬಿಜೆಪಿಯವರು ಹೇಳುತ್ತಾ ಚುನಾವಣೆ ಎದುರಿಸುತ್ತಾರೆ ಎನ್ನುವವರಿಗೆ ಈ ಬಾರಿ ಮಂದಿರ ನಿರ್ಮಿಸಿಯೇ ಮತಯಾಚನೆ ಹೊಗುತ್ತಿದ್ದೇವೆ. ಗೆದ್ದೆ ಗೆಲ್ಲುತ್ತೇವೆ ಎನ್ನುವ ಅಚಲ ವಿಶ್ವಾಸ ಇದ್ದವರಿಗೆ ವಾಜಪೇಯಿಯವರ ಸೋಲನ್ನು ನೆನಪಿಟ್ಟು ಪಕ್ಷದ ಅಭ್ಯರ್ಥಿ ಗೆಲ್ಲಿಸೋಣ ಎಂದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ ಚುನಾವಣೆ ಮೊದಲು ಘೋಷಣೆ ಮಾಡದೇ ಅಧಿಕಾರಕ್ಕೆ ಬಂದ ನಂತರ ರೈತರಿಗೆ ಅನೂಕೂಲವಾಗಲು ಪಿ.ಎಂ.ಕಿಸಾನ್ ಯೋಜನೆ ಜಾರಿಗೊಳಿಸಿದರು. ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಯೋಜನೆಯ ಕುರಿತು ಮಾಹಿತಿ ನೀಡಿದರು. ಈ ಬಾರಿ ನಮ್ಮ ನಡುವೆ ಏನೆ ಭಿನ್ನಾಭಿಪ್ರಾಯವಿದ್ದರೂ ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಒಗ್ಗೂಡಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡೋಣ ಎಂದರು.
ರೈತಮೊರ್ಚಾ ಜಿಲ್ಲಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಮಾತನಾಡಿ ರಾಹುಲ್ ಗಾಂಧಿ ಕಾಂಗ್ರೇಸ್ ನಾಯಕರು. ಅವರ ನಾಯಕತ್ವದಲ್ಲಿ ದೇಶ ನೀಡಿದರೆ ಡ್ರೈವಿಂಗ್ ಬರದೇ ಹೋದವರಿಗೆ ಬಸ್ ಚಲಾಯಿಸಲು ನೀಡಿದಂತೆ ಆಗುವುದು. ಇವರಿಗೆ ದೇಶ ಕೊಟ್ಟರೆ ಅಧೋಗತಿಗೆ ಹೋಗಲಿದೆ. ಉತ್ತಮ ನಾಯಕತ್ವದ ಮೂಲಕ ದೇಶ ಮುನ್ನಡೆಯಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆಂಬಲಿಸೋಣ ಎಂದರು.
ಜಿಲ್ಲಾ ವಕ್ತಾರರಾದ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ ನರೇಂದ್ರ ಮೋದಿ ಮಾಡಿದ ಸಾಧನೆಯನ್ನು ಮುಂದಿಟ್ಟು ನಾವು ಚುನಾವಣೆ ಎದುರಿಸೋಣ. ಕೇಂದ್ರ ಸರ್ಕಾರದ ಮುದ್ರಾ ಯೋಜನೆ, ಉಜ್ವಲ ಗ್ಯಾಸ್, ಆಯುಸ್ಮಾನ್ ಭಾರತ, ಪಿ.ಎಂ.ಕಿಸಾನ್ ಸೇರಿದಂತೆ ಹಲವು ಯೋಜನೆಗಳು ಲಕ್ಷಾಂತರ ಫಲಾನುಭವಿಗೆ ಅನೂಕೂಲವಾಗಿದೆ. ಇಡೀ ವಿಶ್ವವೇ ಅವರ ಆಡಳಿತ ಶ್ಲಾಘಿಸುತ್ತಿದೆ. ಮತ್ತಷ್ಟು ಕಾರ್ಯ ನಡೆಯಲು ಪ್ರಾಮಾಣಿಕ ಮೌಲ್ಯಾಧರಿತ ರಾಜಕಾರಣಿಯಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಬೆಂಬಲಿಸೋಣ ಎಂದರು.
ಜಿಲ್ಲಾ ರೈತಮೊರ್ಚಾ ಅಧ್ಯಕ್ಷ ರಮೇಶ ನಾಯ್ಕ, ತಾಲೂಕ ಬಿಜೆಪಿ ಮಂಡಲಧ್ಯಕ್ಷ ಮಂಜುನಾಥ ನಾಯ್ಕ ಕೇಂದ್ರ ಸರ್ಕಾರದ ಸಾಧನೆಯ ಕುರಿತು ಮಾತನಾಡಿದರು.
ವೇದಿಕೆಯಲ್ಲಿ ಕಡತೋಕಾ ಗ್ರಾ.ಪಂ.ಅಧ್ಯಕ್ಷೆ ಸಾವಿತ್ರಿ ಭಟ್, ಪಕ್ಷದ ಮುಖಂಡರಾದ ವಿಷ್ಣುಮೂರ್ತಿ ಹೆಗಡೆ, ಭಾಸ್ಕರ ಚಂದಾವರ, ಯೊಗೀಶ ಮೇಸ್ತ, ಗಣಪತಿ ಗೌಡ ಚಿತ್ತಾರ ಮತ್ತಿತರರು ಇದ್ದರು. ರೈತಮೊರ್ಚಾ ತಾಲೂಕ ಅಧ್ಯಕ್ಷ ಗಜಾನನ ಹೆಗಡೆ ಸ್ವಾಗತಿಸಿ ರಾಘವೇಂದ್ರ ನಾಯ್ಕ ವಂದಿಸಿದರು. ಜಿಲ್ಲಾ ಕಾರ್ಯದರ್ಶಿ ಶಿವಲಿಂಗಯ್ಯ ಅಲ್ಲಯಮಠ ಕಾರ್ಯಕ್ರಮ ನಿರ್ವಹಿಸಿದರು.