ಹಳಿಯಾಳ: ಬಿಜೆಪಿಗರು ರಾಜಕೀಯ ಮಾಡುವುದಕ್ಕಾಗಿ ಯಾವ ದೇವರನ್ನೂ ಬಿಟ್ಟಿಲ್ಲ, ಯಾವ ಸಂತರ ಹೆಸರನ್ನೂ ಬಿಟ್ಟಿಲ್ಲ. ಹಿಂದೂ ಧರ್ಮಕ್ಕೆ ಅಪಾಯ ಇರುವುದು ಬಿಜೆಪಿಗರಿಂದಲೇ ಹೊರತು ಬೇರಾರಿಂದಲೂ ಅಲ್ಲ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಹೇಳಿದರು.
ತೇರಗಾಂವ ಜಿಲ್ಲಾ ಪಂಚಾಯತ ವ್ಯಾಪ್ತಿಯ ಕಾಂಗ್ರೆಸ್ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಗರು ನಾವೇ ಹಿಂದುತ್ವ ರಕ್ಷಣೆ ಮಾಡುತ್ತಿರುವವರು ಎನ್ನುತ್ತಾರೆ. ಮೊಘಲರು, ಬ್ರಿಟಿಷರು ಬಂದಾಗಲೂ ಹಿಂದೂ ಧರ್ಮಕ್ಕೆ ತೊಂದರೆಯಾಗಲು ಯಾರೂ ಬಿಟ್ಟಿರಲಿಲ್ಲ. ಆದರೆ ಅಂಥ ಮೋಸ ಈಗ ಬಿಜೆಪಿಯಿಂದ ಆಗುತ್ತಿದೆ. ಛತ್ರಪತಿ ಶಿವಾಜಿ, ಶ್ರೀರಾಮರಿಗೆ ಅಪಮಾನ ಮಾಡುತ್ತಿದ್ದಾರೆ. ರಾಮ ಯಾವತ್ತೂ ಸೀತಾ, ಲಕ್ಷ್ಮಣ, ಹನುಮಂತ ಸಮೇತ ಇರಬೇಕು. ಎಲ್ಲಾ ಮಂತ್ರಗಳಲ್ಲೂ ಸಿಯಾರಾಮ್ (ಸೀತಾರಾಮ್) ಎಂದೇ ಇರುತ್ತದೆ. ಆದರೆ ಬಿಜೆಪಿಗರು ಮಾತ್ರ ರಾಮನನ್ನ ಒಂಟಿಯಾಗಿಸಿದ್ದಾರೆ. ಮನೆ ನಡೆಸುವ ಹೆಂಡತಿ, ಹೆತ್ತ ತಾಯಿ ಹೆಣ್ಣು ಇವರಿಗೆ ಬೇಡವಾದರಾ? ಯುವಕರಿಗೆ ವಾಟ್ಸಪ್ ಯೂನಿವರ್ಸಿಟಿ ತೋರಿಸಿ ಇತಿಹಾಸ, ಧರ್ಮವನ್ನೂ ಹಾಳು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿಗರಿಂದ ನಮ್ಮ ಧರ್ಮ, ಸಂಸ್ಕೃತಿ, ರಕ್ಷಣೆ ಮಾಡಬೇಕಿದೆ. ನಾನು ಹಿಂದೂ ಧರ್ಮದಲ್ಲಿ ಹುಟ್ಟಿರಲು ನನಗೆ ಹೆಮ್ಮೆ ಇದೆ. ಬಿಜೆಪಿಗರಿಂದ ಹಿಂದುತ್ವದ ಪಾಠ ಕಲಿಬೇಕಿಲ್ಲ. ಶಿವಾಜಿಯವರು ಎಲ್ಲಾ ಜಾತಿಗಳು ಸೇರಿ ಹಿಂದೂ ಧರ್ಮ ಎಂದಿದ್ದರು. ಯಾವುದೇ ಒಂದು ಜಾತಿಗೆ ಸೀಮಿತವಾದುದಲ್ಲ. ಆ ಹಿಂದೂ ಧರ್ಮವನ್ನ ಬಿಜೆಪಿಗರೇ ಹಾಳು ಮಾಡುತ್ತಿದ್ದಾರೆ ಎಂದ ಅವರು, ಬಿಜೆಪಿಗರು ಕಾಂಗ್ರೆಸ್ ೭೦ ವರ್ಷದಲ್ಲಿ ಏನು ಮಾಡಿದೆ ಎಂದು ಕೇಳುತ್ತಾರೆ. ಆ ಪುಣ್ಯಾತ್ಮರಿಗೆ ಹೇಳಬೇಕು, ನೀವಿರುವ ಗುಜರಾತ್‌ಗೆ ನೀರು ಪೂರೈಸುವ ಬೃಹತ್ ಅಣೆಕಟ್ಟು ಕಟ್ಟಿದ್ದು ಕಾಂಗ್ರೆಸ್. ಆದರೆ ಇವರಿಂದ ಹಳ್ಳಿಗಳಲ್ಲಿ ಚಿಕ್ಕ ಚರಂಡಿಗಳನ್ನೂ ನಿರ್ಮಿಸಲಾಗುತ್ತಿಲ್ಲ. ಸುಳ್ಳು, ಜಾತಿ, ಧರ್ಮದ ಮೇಲೆ ಮತ ಕೇಳಲು ಬಂದಿಲ್ಲ. ಅಭಿವೃದ್ಧಿ ಕೆಲಸಗಳ ಮೇಲೆ ಮತ ಯಾಚಿಸಲು ಬಂದಿದ್ದೇನೆ. ಈ ಬಾರಿ ಒಂದು ಅವಕಾಶ ನನಗೆ ನೀಡಿ ಬದಲಾವಣೆ ನೋಡಿ ಎಂದರು.
ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮಾತನಾಡಿ, ರಾಷ್ಟ್ರ ರಾಜ್ಯ, ತಾಲೂಕಿನ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ದೊಡ್ಡದು. ಆದರೂ ಮಹಿಳೆಯರಿಗೆ ಲೋಕಸಭಾ ಟಿಕೆಟ್ ಸಿಗುವುದು ತುಂಬಾ ಕಷ್ಟವಾಗಿದೆ. ಉತ್ತರ ಕನ್ನಡ ಭಾಗದಲ್ಲಿ ಇದುವರೆಗೂ ಬಿಜೆಪಿ ಮಹಿಳೆಯರಿಗೆ ಒಮ್ಮೆಯೂ ಟಿಕೆಟ್ ನೀಡಿಲ್ಲ. ಆದರೆ ಕಾಂಗ್ರೆಸ್, ಗ್ಯಾರಂಟಿಯ ಜೊತೆಗೆ ಮಹಿಳಾ ಅಭ್ಯರ್ಥಿಯನ್ನ ನೀಡಿ ಮಹಿಳಾ ಸಬಲೀಕರಣಕ್ಕಾಗಿ ಪ್ರಯತ್ನಿಸುತ್ತಿದೆ. ಮಹಿಳೆಯರು ಕೂಡ ಗ್ಯಾರಂಟಿ ನೀಡಿ ನೆರವಾದ ಕಾಂಗ್ರೆಸ್ ಪರ ಮತ ಚಲಾಯಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೈತಾನ ಬಾರ್ಬೋಜ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸಂತೋಷ ರೇಣಕೆ, ರವಿ ತೋರಣಗಟ್ಟಿ, ಪುರಸಭೆ ಮಾಜಿ ಅಧ್ಯಕ್ಷ ಅಜರ್ ಬಸರಿಕಟ್ಟಿ, ಡಿ ವಾಯ್ ಡಾಂಗೆ ಮುಂತಾದವರಿದ್ದರು.