Slide
Slide
Slide
previous arrow
next arrow

ದೇಶದಲ್ಲಿ ಸಂಚಲನ ಉಂಟುಮಾಡಿರುವ ‘ಬಾಕಾಹು’ ಈ ಯುಗದ ಕ್ರಾಂತಿ; ಡಾ. ಸುಬ್ರಮಣ್ಯಮ್

300x250 AD

ಶಿರಸಿ: ಇಂದಿನ ವಿಷಮ ಪರಿಸ್ಥಿತಿಯಲ್ಲಿ ಕೃಷಿಯನ್ನು ಹೊರತುಪಡಿಸಿ, ಇನ್ನುಳಿದ ಯಾವ ಉದ್ಯಮವಾದರೂ ಸ್ಥಗಿತವಾಗಬಹುದು. ಅಂತಹ ಸಮಯದಲ್ಲಿ ಬಾಳೆಕಾಯಿ ಹುಡಿಯ ಖಾದ್ಯಗಳು ಇಂದಿನ ಕ್ರಾಂತಿಯಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಕೇಂದ್ರೀಯ ನಿರ್ದೇಶಕ ಡಾ. ವೆಂಕಟ ಸುಬ್ರಮಣ್ಯಮ್ ಹೇಳಿದರು.

ಅವರು ಬುಧವಾರ, ನಗರದ ಟಿಆರ್ಸಿ ಸಭಾಭವನದಲ್ಲಿ ಬಾಳೆಕಾಯಿ ಹುಡಿಯ ಖಾದ್ಯ ವೈವಿಧ್ಯ ಸ್ಪರ್ಧೆ ಹಾಗೂ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಜೀವನದಲ್ಲಿ ಆಹಾರ ಔಷಧಿಯಾಗಬೇಕಿತ್ತು, ಆದರೆ ಇಂದು ಔಷಧಿಯೇ ಆಹಾರವಾಗಿದ್ದು ದೌರ್ಭಾಗ್ಯವಾಗಿದೆ. ಈ ಭಾಗದ ಆಹಾರ ಪದಾರ್ಥಗಳು ಔಷಧಿಗೆ ಸಮಾನವಾಗಿದೆ. ಪಾಶ್ಚಿಮಾತ್ಯ ಆಹಾರಕ್ಕೆ ಹೋಲಿಸಿದರೆ, ನಮ್ಮ ಸಾಂಪ್ರದಾಯಿಕ ಆಹಾರ ಪದಾರ್ಥಗಳನ್ನು ಮಾರುಕಟ್ಟೆಗೆ ತರುವಲ್ಲಿ ನಾವು ಸೋತಿದ್ದೇವೆ. ಆದರೆ ಇಂದು ನಾವು ಬದಲಾಗಿದ್ದೇವೆ.

ನಗರ ಭಾಗದದಿಂದ ಕೈಗಾರಿಕೆಗಳು ಹಳ್ಳಿಯನ್ನು ತಲುಪಿದರೆ, ಅದು ಅಭಿವೃದ್ದಿಗೆ ಮೂಲವಾಗುತ್ತದೆ. ಪ್ರಧಾನಿ ಮೋದಿ ತಮ್ಮ ‘ಮನ್ ಕೀ ಬಾತ್’ ಬಾಕಾಹು ಬಗ್ಗೆ ಹೇಳಿರುವುದು ದೇಶದೆಲ್ಲಡೆ ಸಂಚಲನವನ್ನುಂಟುಮಾಡಿದೆ. ಆ ನಿಟ್ಟಿನಲ್ಲಿ ಸಾಂಪ್ರದಾಯಿಕ ಆಹಾರಗಳಿಗೆ ಜಾಗತಿಕ ಮಾರುಕಟ್ಟೆಯನ್ನು ನಾವು ನಿರ್ಮಾಣ ಮಾಡಬೇಕಿದೆ. ಇಂತಹ ಅವಕಾಶವನ್ನು ನಾವು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು ಎಂದರು.

ಶಿರಸಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಮಂಜು ಪ್ರಸ್ತಾವಿಕ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯು ವೈವಿದ್ಯಮಯವಾಗಿದೆ. ಇಲ್ಲಿನ ಜೀವ ವೈವಿದ್ಯ ಇತರೆಡೆಗಿಂತ ಭಿನ್ನವಾಗಿದೆ. ನಾವು ಬೆಳೆದ ಬೆಳೆಗೆ ನಾವೇ ಮಾರುಕಟ್ಟಯನ್ನು ಹುಡುಕುವ ಪರಿಸ್ಥಿತಿ ಇಂದಿನ ಅನಿವಾರ್ಯತೆ. ಪ್ರಸ್ತುತದ ಕರೋನಾದಿಂದ ಮನುಷ್ಯನ ಜೀವನ ಶೈಲಿ, ಆಲೋಚನೆಯ ದಿಕ್ಕು ಬದಲಾಗಿದೆ. ಅದರ ಪರಿಣಾಮವೇ ಇಂದಿನ ಕಾರ್ಯಕ್ರಮವಾಗಿದೆ.

ಕರೋನಾದಿಂದ ಮಾರುಕಟ್ಟೆಯಲ್ಲಿ ಬಾಳೆಕಾಯಿ ಮೌಲ್ಯ ಕುಸಿದ ಪರಿಸ್ಥಿತಿಯಲ್ಲಿ, ಬಾಳೆಕಾಯಿ ಹುಡಿಯ ಮೌಲ್ಯವರ್ಧಿತದೆಡೆಗೆ ಸಾಗಿದ್ದು ಗಮನಿಸಬೇಕಾದ ಅಂಶವಾಗಿದೆ. ಗುಣಮಟ್ಟದ ಉತ್ಪನ್ನ, ಆ ಉತ್ಪನ್ನಗಳಿಗೆ ಮಾರುಕಟ್ಟೆ ಅವಶ್ಯಕತೆಯಾಗಿದೆ. ಈ ನಿಟ್ಟಿನಲ್ಲಿ ಕೃಷಿ ವಿಜ್ಞಾನ ಕೇಂದ್ರ ಹೆಜ್ಜೆಯನ್ನಿಟ್ಟಿದೆ. ಹಳ್ಳಿ ಭಾಗದಲ್ಲಿ ಗೃಹ ಉದ್ಯಮವಾಗಿ, ಆದಾಯ ಹೆಚ್ಚಿಸುವಲ್ಲಿ ಸಂಶಯವಿಲ್ಲ ಎಂದರು.

ಬಾಳೆಕಾಯಿ ಹುಡಿಗೆ ಪ್ರಸ್ತುತ 63 ಮಿಲಿಯನ್ ಡಾಲರ್ ಮಾರುಕಟ್ಟೆ ಪ್ರಪಂಚದಾದ್ಯಂತ ಇದೆ. 300 ರಿಂದ 400 ಕೋಟಿ ವ್ಯವಹಾರವನ್ನು ಬಾಕಾಹು ಮಾಡಲಿದೆ ಎಂದು ಅಂದಾಜಿಸಲಾಗಿದೆ ಎಂದು ಕೆವಿಕೆ ಪ್ರಾಧ್ಯಾಪಕ ಡಾ. ಶ್ರೀಪಾದ ಕುಲಕರ್ಣಿ ಹೇಳಿದರು.

300x250 AD

ಕಾರ್ಯಕ್ರಮದ ಕೇಂದ್ರಬಿಂದು ಖ್ಯಾತ ಚಿತ್ರನಟ ಸಿಹಿಕಹಿ ಚಂದ್ರು ಮಾತನಾಡಿ, ನಾನು ಈ ಕಾರ್ಯಕ್ರಮಕ್ಕೆ ಕೇವಲ ವಿದ್ಯಾರ್ಥಿಯಾಗಿ ಬಂದಿದ್ದೇನೆ. ಇಲ್ಲಿನ ಸ್ಪರ್ಧಿಗಳು ನನಗೆ ಗುರುಗಳಾಗಿದ್ದಾರೆ. ಅವರಿಂದ ಖಾದ್ಯಗಳ ತಯಾರಿಕೆಯನ್ನು ಕಲಿತು, ಮುಂದಿನ ದಿನದಲ್ಲಿ ನಾನೂ ಸಹ ಬಾಕಾಹುವಿನಿಂದ ಹೆಚ್ಚು ಖಾದ್ಯಗಳನ್ನು ತಯಾರಿಸುತ್ತೇನೆ. ಇಲ್ಲಿನ ಆರ್ಗ್ಯಾನಿಕ್ ಫೆಡರೇಷನ್ ಹಾಗು ಇನ್ನಿತರ ಸಂಸ್ಥೆಗಳು ಬಾಕಾಹುವನ್ನು ಮಾರುಕಟ್ಟೆಗೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದರು.

ಕಾರ್ಯಾಗಾರದ ಪ್ರಮುಖ ಆಕರ್ಷಣೆಯಾದ ಖಾದ್ಯ ವೈವಿದ್ಯ ಸ್ಪರ್ಧೆಯಲ್ಲಿ 70 ಕ್ಕೂ ಅಧಿಕ ಸ್ಪರ್ಧಿಗಳಿಂದ ಬಾಳೆಕಾಯು ಹುಡಿ ಬಳಸಿ ತಯಾರಿಸಿದ ಚಕ್ಲಿ, ನಿಪ್ಪಟ್ಟು, ಲಾಡು, ಕೇಕ್, ಕರೆ, ಕುಕ್ಕೀಸ್, ಬರ್ಫಿ, ರೊಟ್ಡಿ, ಶಂಕಪೊಳೆ, ಕೃಜಿಕಾಯಿ, ಚಟ್ನಿಪುಡಿ, ಹಲ್ವಾ ಸೇರಿದಂತೆ ಸುಮಾರು 175 ಕ್ಕೂ ಖಾದ್ಯಗಳು ಪ್ರದರ್ಶನದಲ್ಲಿ ಇದ್ದವು.

ಕದಂಬ ಮಾರ್ಕೆಟಿಂಗ್ ನ ಪ್ರಧಾನ ವ್ಯವಸ್ಥಾಪಕ ವಿಶ್ವೇಶ್ವರ ಭಟ್ಟ ಸ್ವಾಗತಿಸಿದರು. ವೇದಿಕೆಯಲ್ಲಿ ಧಾರವಾಡ ವಿಭಾಗ ವಿಸ್ತರಣಾ ನಿರ್ದೇಶಕ ರಮೇಶ, ಕೃಷಿ ಉಪನರ್ದೇಶಕರು ನಟರಾಜನ್, ಶಿರಸಿ ವಿಭಾಗದ ಮುಖ್ಯಸ್ಥರು ಡಾ ಮಂಜು, ಜಂಟಿ ಕೃಷಿ ನಿರ್ದೇಶಕರು ಹೊನ್ನಪ್ಪ ಗೌಡ, ಡಾ. ಲಕ್ಷ್ಮೀನಾರಾಯಣ ಭಟ್ಟ, , ಗಣೇಶ ಹೆಗಡೆ, ಹಾರ್ಟಿಕಲ್ಚರ ಡೆಪ್ಯುಟಿ ಡೈರೆಕ್ಟರ್ ಸತೀಶ ಹೆಗಡೆ ಸೇರಿದಂತೆ ಇನ್ನಿತರರು ಇದ್ದರು.

ಉತ್ತರ ಕನ್ನಡ ಆರ್ಗ್ಯಾನಿಕ್ ಫೆಡರೇಷನ್ ಮುಖ್ಯಕಾರ್ಯನಿರ್ವಾಹಕ ವಿಕಾಸ ಹೆಗಡೆ ವಂದಿಸಿದರು. ಕೃಷಿ ವಿಜ್ಞಾನ ಕೇಂದ್ರದ ರವಿ ಕುಮಾರ, ಮಮತಾ ಭಟ್ಟ, ರೂಪಾ ಪಾಟೀಲ್, ಮನೋರಮಾ ಜೋಷಿ ಖಾದ್ಯ ವೈವಿದ್ಯ ಸ್ಫರ್ಧೆಗೆ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.

Share This
300x250 AD
300x250 AD
300x250 AD
Back to top