ಕಾರವಾರ: ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರ ಸೂಚನೆಯ ಮೇರೆಗೆ, ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮುಲ್ಲೆöÊ ಮುಗಿಲನ್ ಅವರು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪ್ರಸ್ತಾವ ಸಲ್ಲಿಸಿದ್ದಾರೆ.
ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ತೀರಾ ಅವಶ್ಯಕತೆ ಇದ್ದು, ಸರ್ಕಾರಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಅಥವಾ ಹೊಸ ವೈದ್ಯಕೀಯ ಕಾಲೇಜಿನೊಂದಿಗೆ ಸೂಪರ್ ಸ್ಟೆಷಾಲಿಟಿ ಸೇವೆ ಲಭ್ಯವಿರುವ ಆಸ್ಪತ್ರೆಯನ್ನು ಖಾಸಗಿಯವರ ಸಹಭಾಗಿತ್ವದ ಮಾದರಿಯಲ್ಲಿ ಆರಂಭಿಸುವುದು ಅತೀ ಅವಶ್ಯಕವಾಗಿದೆ. ಈ ರೀತಿಯ ಸೇವೆ ಲಭ್ಯವಾದಲ್ಲಿ ಜಿಲ್ಲೆಯ ಸಾಕಷ್ಟು ರೋಗಗಳಿಗೆ ಹೆಚ್ಚಿನ ಕಾಯಿಲೆಗೆ ಚಿಕಿತ್ಸೆ ಮತ್ತು ಅಪಘಾತದ ಸಂದರ್ಭಗಳಲ್ಲಿ ತುರ್ತು ಚಿಕಿತ್ಸೆ ನೀಡಿ ಜೀವಹಾನಿಯಾಗುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ.
ಉತ್ತರ ಕನ್ನಡ ಭೌಗೋಳಿಕವಾಗಿ ಅತಿದೊಡ್ಡ ಜಿಲ್ಲೆಯಾಗಿದ್ದು, ಜಿಲ್ಲೆಯಲ್ಲಿ ಒಂದು ಜಿಲ್ಲಾ ಆಸ್ಪತ್ರೆಯು ಕಾರವಾರ ವೈದ್ಯಕೀಯ ಕಾಲೇಜಿನ ಭೋಧಕ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ೧೦ ಸರಕಾರಿ ತಾಲೂಕಾ ಆಸ್ಪತ್ರೆಗಳು, ೩ ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ೮೩ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇದ್ದು, ಈ ಎಲ್ಲಾ ಆಸ್ಪತ್ರೆಗಳಲ್ಲಿ ಬೆರಳೆಣಿಕೆಯ ವೈದ್ಯರ ಸೇವೆ ಮಾತ್ರ ಲಭ್ಯವಿದೆ. ವಿಶೇಷ ಪರಿಣಿತಿ ಹೊಂದಿರುವ, ಅತೀ ಅವಶ್ಯವಿರುವ ಕಾರ್ಡಿಯೋಲಜಿ, ನ್ಯೂರೋಲಜಿ ಹಾಗೂ ಕ್ಯಾನ್ಸರ್ ತಜ್ಞರು ಜಿಲ್ಲೆಯಲ್ಲಿ ಲಭ್ಯವಿಲ್ಲ. ಇದರಿಂದ ಜನಸಾಮಾನ್ಯರು ಹೆಚ್ಚಿನ ಚಿಕಿತ್ಸೆಗೆ ನೆರೆಯ ಜಿಲ್ಲೆಗಳಲ್ಲಿರುವ ಸೂಪರ್ ಸ್ಟೆಷಾಲಿಟಿ ಆಸ್ಪತ್ರೆಗಳ ಸೇವೆ ಪಡೆಯಲು ತೆರಳುವುದು ಅನಿವಾರ್ಯವಾಗಿದ್ದು, ತುರ್ತು ಸಮಯದಲ್ಲಿ ಸಹ ತೊಂದರೆಯನ್ನ ಅನುಭವಿಸುವಂತಾಗಿದೆ ಎಂದು ತಿಳಿಸಿದ್ದಾರೆ.
ಕುಮಟಾ ತಾಲೂಕಿನಲ್ಲಿ ‘ಏಕಲವ್ಯ ವಸತಿ ಶಾಲೆ’ ಮಂಜೂರಿಯಾಗಿದ್ದು, ಆ ಜಾಗವನ್ನು ಆಸ್ಪತ್ರೆ ಉದ್ದೇಶಕ್ಕೆ ಬಳಸುವುದಾದಲ್ಲಿ ‘ಏಕಲವ್ಯ ವಸತಿ ಶಾಲೆ’ಗೆ ಸೂಕ್ತವಾದ ಬೇರೆ ಸ್ಥಳವನ್ನು ಗುರುತಿಸಿ ನೀಡಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.