ಗೋಕರ್ಣ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕುಮಟಾ ತೀವ್ರ ಕುತೂಹಲದ ಕ್ಷೇತ್ರವಾಗಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಆದರೂ ಕೂಡ ಪಕ್ಷದ ಒಳಗೆ ಎರಡು ರಾಷ್ಟೀಯ ಪಕ್ಷಗಳ ಒಳಗೆ ಭಿನ್ನ ಮತವಿದ್ದು, ಅದು ಯಾವುದೇ ಸಂದರ್ಭದಲ್ಲೂ ಸ್ಫೋಟಗೊಂಡರೂ ಅಚ್ಚರಿಪಡಬೇಕಾಗಿಲ್ಲ.
2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪರೇಶ ಮೇಸ್ತ ಮತ್ತು ನರೇಂದ್ರ ಮೋದಿ ಅಲೆಯಿಂದಾಗಿ ಕುಮಟಾದಲ್ಲಿ ಬಿಜೆಪಿಯಿಂದ ಯಾರಿಗೆ ಟಿಕೇಟ್ ನೀಡಿದರೂ ಗೆಲ್ಲುತ್ತಾರೆಂಬ ವಾತಾವರಣ ನಿರ್ಮಾಣಗೊಂಡಿತ್ತು. ಆ ಸಂದರ್ಭದಲ್ಲಿ ಟಿಕೇಟ್ ಆಕಾಂಕ್ಷಿಯಾಗಿದ್ದ ಸೂರಜ ನಾಯ್ಕ ಅವರನ್ನು ಗಲಾಟೆ ಪ್ರಕರಣದಲ್ಲಿ ಬಂಧನವಾಗುವಂತೆ ತಂತ್ರ ರೂಪಿಸಿ ನಂತರ ಜೆಡಿಎಸ್‌ನಿಂದ ಬಂದ ದಿನಕರ ಶೆಟ್ಟಿಗೆ ಟಿಕೇಟ್ ನೀಡಿದ್ದರು. ನಿರೀಕ್ಷೆಯಂತೆ ದಿನಕರ ಶೆಟ್ಟಿ ಗೆಲುವು ಪಡೆದರು. ಆದರೆ ಬಂಡಾಯವೆದ್ದ ಸೂರಜ ನಾಯ್ಕ ಸೋನಿ ಪಕ್ಷೇತರವಾಗಿ ನಿಂತು ೨೦ ಸಾವಿರಕ್ಕೂ ಅಧಿಕ ಮತ ಪಡೆದಿದ್ದರು.
ಈ ಬಾರಿ ದಿನಕರ ಶೆಟ್ಟಿ ವಿರುದ್ಧ ಪಕ್ಷದೊಳಗೆ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಆಡಳಿತ ವಿರೋಧವು ಕೂಡ ಅಧಿಕವಾಗಿರುವುದರಿಂದ ಹಲವಾರು ಆಕಾಂಕ್ಷಿಗಳು ಹುಟ್ಟಿಕೊಂಡಿದ್ದರು. ಯಾವುದೇ ಕಾರಣಕ್ಕೂ ದಿನಕರ ಶೆಟ್ಟಿ ಟಿಕೇಟ್ ಮತ್ತೆ ಸಿಗುವುದಿಲ್ಲ ಎಂಬ ಚರ್ಚೆ ಕ್ಷೇತ್ರದಲ್ಲಿ ಹರಿದಾಡುತ್ತಿತ್ತು. ಆದರೆ ಜಿಲ್ಲೆಯ ಹಾಲಿ ಬಿಜೆಪಿ ಶಾಸಕರಿಗೆ ಟಿಕೇಟ್ ನೀಡಿದ್ದರಿಂದಾಗಿ ಮೇಲ್ಮಟ್ಟಕ್ಕೆ ಬಿಜೆಪಿಯಲ್ಲಿ ವಾತಾವರಣ ಶಾಂತವೆನಿಸಿದರೂ ಒಳಗೊಳಗೆ ದಿನಕರ ಶೆಟ್ಟಿ ವಿರುದ್ಧ ಒಳ ಹೊಡೆತ ಹೊಡೆಯುವ ಸಾಧ್ಯತೆಯಿದೆ.
ಇನ್ನು ಈ ಬಾರಿ ನನಗೆ ಕಾಂಗ್ರೆಸ್ ಟಿಕೇಟ್ ಸಿಗುತ್ತದೆ ಎಂದು ಅಚಲ ನಂಬಿಕೆ ಹೊಂದಿದ್ದ ಶಾರದಾ ಶೆಟ್ಟಿ ಅವರಿಗೆ ಟಿಕೇಟ್ ತಪ್ಪಿಸಿ ನಿವೇದಿತ್ ಆಳ್ವಾ ಟಿಕೇಟ್ ಸಿಕ್ಕಿರುವುದರಿಂದ ಕಾಂಗ್ರೆಸ್‌ನಲ್ಲಿ ಬಂಡಾಯ ಉಂಟಾಯಿತು. ಬಂಡಾಯ ಅಭ್ಯರ್ಥಿಯಾಗಿ ಶಾರದಾ ಶೆಟ್ಟಿ ನಾಮಪತ್ರ ಸಲ್ಲಿಸಿ, ನಂತರ ತೀವೃ ಒತ್ತಡಕ್ಕೆ ಒಳಗಾಗಿ ಕೊನೆ ದಿನದಲ್ಲಿ ನಾಮಪತ್ರ ವಾಪಸ್ ಪಡೆದು ರಾಜಕೀಯ ನಿವೃತ್ತಿ ಘೋಷಿಸಿದರು. ಇದು ಕಾಂಗ್ರೆಸ್ ಹಿನ್ನಡೆಗೆ ಕಾರಣವಾಗಿದೆ. ಕ್ಷೇತ್ರದಲ್ಲಿ ತನಗೆ ಪ್ರಭಾವ ಹೊಂದಿದ್ದ ಶಾರದಾ ಶೆಟ್ಟಿ ಪ್ರಚಾರಕ್ಕೆ ಇಳಿಯದೇ ಮನೆಯಲ್ಲಿದ್ದರೆ ಕಾಂಗ್ರೆಸ್‌ಗೆ ಒಂದಿಷ್ಟು ಮತಗಳು ಛಿದ್ರಗೊಳ್ಳುವ ಸಾಧ್ಯತೆಯಿದೆ. ಅದು ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾ ಮೇಲೆ ಪರಿಣಾಮ ಬೀರಲಿದೆ.
ಇನ್ನು ಜೆಡಿಎಸ್‌ನ ಸೂರಜ ನಾಯ್ಕ ಸೋನಿ ಈ ಬಾರಿ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದು, ಕಳೆದ ೫ ವರ್ಷಗಳಿಂದ ಸಾಮಾಜಿಕ ಕಾರ್ಯಕರ್ತನಾಗಿ ಇಡೀ ಕ್ಷೇತ್ರಾದ್ಯಂತ ಸಂಚಾರ ಮಾಡುತ್ತಲೇ ಇದ್ದರು. ಪ್ರತಿಯೊಂದು ಕಾರ್ಯಕ್ರಮಗಳಿಗೆ ಪಾಲ್ಗೊಳ್ಳುತ್ತ ಬಂದಿದ್ದರು. ಹೀಗಾಗಿ ಸಹಜವಾಗಿಯೇ ಜನರಲ್ಲಿ ಸೂರಜ ನಾಯ್ಕ ಮೇಲೆ ಸಹಾನುಭೂತಿ ಇದೆ. ಆದರೆ ರಾಜಕೀಯದಲ್ಲಿ ಯಾವ ಕ್ಷಣದಲ್ಲಿ ಯಾವ ತಿರುವನ್ನು ಪಡೆದುಕೊಳ್ಳುತ್ತವೆ ಎನ್ನುವುದು ಸಮಯವೇ ನಿರ್ಧರಿಸುತ್ತದೆ. ಇನ್ನು ಮಾಜಿ ಸಂಸದೆ ಮಾರ್ಗರೇಟ್ ಆಳ್ವಾ ಕ್ಷೇತ್ರದಲ್ಲಿಯೇ ಬೀಡು ಬಿಟ್ಟಿದ್ದು ಮಗನ ಗೆಲುವಿಗಾಗಿ ಹೋರಾಟ ನಡೆಸುತ್ತಿದ್ದಾರೆ.