Slide
Slide
Slide
previous arrow
next arrow

ಶ್ರಾವಣ ಸೋಮವಾರ ನಿಮಿತ್ತ ಈ ಸನಾತನ ಸಂಸ್ಥೆಯ ವಿಶೇಷ ಲೇಖನ

300x250 AD

eUK ವಿಶೇಷ: ಶ್ರಾವಣ ಮಾಸದಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಆಚರಿಸುವ ಒಂದು ಪ್ರಮುಖ ವ್ರತವೆಂದರೆ ‘ಶ್ರಾವಣ ಸೋಮವಾರ’ದ ಉಪವಾಸ. ಶ್ರಾವಣ ಸೋಮವಾರದ ಉಪವಾಸಕ್ಕೆ ಸಂಬಂಧಿಸಿದ ಆರಾಧ್ಯ ದೇವರು ‘ಶಿವ’.

  1. ಶ್ರಾವಣ ಸೋಮವಾರ ವ್ರತ

ಶ್ರಾವಣ ಮಾಸದ ಪ್ರತಿ ಸೋಮವಾರದಂದು, ಶಿವನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಾಗುತ್ತದೆ. ಕೆಲವು ಶಿವ ಭಕ್ತರು ಶ್ರಾವಣದ ಪ್ರತಿ ಸೋಮವಾರ ಶಿವಲಿಂಗಕ್ಕೆ 108 ಅಥವಾ ವಿಶಿಷ್ಟ ಸಂಖ್ಯೆಯಲ್ಲಿ ಬಿಲ್ವಪತ್ರೆಗಳನ್ನು ಅರ್ಪಿಸುತ್ತಾರೆ. ಕೆಲವರು ಶ್ರಾವಣ ಸೋಮವಾರದಂದು ಶಿವನಿಗೆ ಸಂಬಂಧಿಸಿದ ತೀರ್ಥಕ್ಷೇತ್ರಗಳಾದ ಕೇದಾರನಾಥ, ವೈದ್ಯನಾಥಧಾಮ, ಗೋಕರ್ಣಕ್ಕೆ ಭೇಟಿ ನೀಡುತ್ತಾರೆ ಮತ್ತು ಅಲ್ಲಿ ಅನೇಕ ಉಪಚಾರಗಳಿಂದ ಶಿವನನ್ನು ಪೂಜಿಸುತ್ತಾರೆ. ಇದರೊಂದಿಗೆ, ಶ್ರಾವಣ ಸೋಮವಾರದಂದು, ಶಿವನಿಗೆ ಸಂಬಂಧಿಸಿದ ಕಥೆಗಳನ್ನು ಕೇಳುವುದು, ಭಜನೆ-ಕೀರ್ತನೆ, ಶಿವನಿಗೆ ಸಂಬಂಧಿಸಿದ ಸ್ತೋತ್ರಗಳನ್ನು ಪಠಿಸುವುದು, ‘ಓಂ ನಮಃ ಶಿವಾಯ |’ ಜಪಿಸುವುದು ಮುಂತಾದ ಮಾಧ್ಯಮಗಳಿಂದ ಯಥಾಶಕ್ತಿ ಶಿವನ ಆರಾಧನೆಯನ್ನು ಮಾಡುತ್ತಾರೆ. ವ್ರತದ ದಿನದಂದು ವ್ರತದ ಉಪಾಸ್ಯ ದೇವತೆಯನ್ನು ಈ ರೀತಿ ಪೂಜಿಸುವುದು ವ್ರತದ ಒಂದು ಭಾಗವಾಗಿದೆ. ಶ್ರಾವಣ ಸೋಮವಾರದಂದು ಶಿವನ ನಾಮ ಮಂತ್ರವನ್ನು ಜಪಿಸುವುದು ಲಾಭದಾಯಕವಾಗಿದೆ.

2. ಶ್ರಾವಣ ಸೋಮವಾರ ವ್ರತಕ್ಕೆ ಸಂಬಂಧಿಸಿದ ಉಪವಾಸ

ಈ ದಿನ ಸಾಧ್ಯವಾದರೆ, ‘ನಿರಾಹಾರ’ ಉಪವಾಸವನ್ನು ಮಾಡಿ. ನಿರಾಹಾರ ಉಪವಾಸ ಎಂದರೆ ದಿನವಿಡೀ ಅಗತ್ಯವಿದ್ದರೆ ಕೇವಲ ನೀರಿನ ಪ್ರಾಶನ ಮಾಡುವುದರ ಮೂಲಕ ಮಾಡುವ ಉಪವಾಸ. ಎರಡನೇ ದಿನ ಆಹಾರ ಸೇವಿಸುವ ಮೂಲಕ ಈ ಉಪವಾಸವನ್ನು ಮುಗಿಸುತ್ತಾರೆ. ಕೆಲವರು ‘ನಕ್ತ’ ಉಪವಾಸ ಆಚರಿಸುತ್ತಾರೆ. ನಕ್ತಕಾಲ ಅಂದರೆ ಸೂರ್ಯಾಸ್ತದ ನಂತರದ ಮೂರು ಘಟಿಕೆಗಳು ಅಂದರೆ 72 ನಿಮಿಷಗಳು, ಅಥವಾ ನಕ್ಷತ್ರ ಗೋಚರಿಸುವವರೆಗಿನ ಕಾಲ (ಅಂದರೆ ರಾತ್ರಿಯಿಡೀ). ನಕ್ತ ಉಪವಾಸ ಮಾಡುವವರು ಈ ಸಮಯದಲ್ಲಿ ಮಾತ್ರ ಆಹಾರವನ್ನು ಸೇವಿಸಿ ದಿನವಿಡೀ ಏನನ್ನೂ ಸೇವಿಸದೆ ಉಪವಾಸವನ್ನು ಮಾಡುತ್ತಾರೆ.

3. ಶ್ರಾವಣ ಸೋಮವಾರದಂದು ಮಾಡಲಾಗುವ ಕೆಲವು ಧಾರ್ಮಿಕ ಕೃತಿಗಳು

ಕೆಲವು ಸ್ಥಳಗಳಲ್ಲಿ ಶಿವ ಭಕ್ತರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಯಾವುದೇ ಒಂದು ಸೋಮವಾರ ಅಥವಾ ತಿಂಗಳ ಪ್ರತಿ ಸೋಮವಾರ ಕಾನ್ವರ್ ಯಾತ್ರೆಯನ್ನು ಮಾಡುತ್ತಾರೆ. ಕಾನ್ವರ್ ಎಂದರೆ ನೀರನ್ನು ಹೊರುವವನು. ಈ ಯಾತ್ರೆಯಲ್ಲಿ ಶಿವಭಕ್ತರು ಪವಿತ್ರ ನದಿಯ ನೀರನ್ನು ತೆಗೆದುಕೊಂಡು ಶಿವನಿಗೆ ಸಂಬಂಧಿಸಿದ ಹತ್ತಿರದ ತೀರ್ಥಕ್ಷೇತ್ರಕ್ಕೆ ಹೋಗಿ ಶಿವಲಿಂಗಕ್ಕೆ ಜಲಾಭಿಷೇಕ ಮಾಡುತ್ತಾರೆ. ಹಾಗೆ ಮಾಡಿದ ಅಭಿಷೇಕದ ನೀರನ್ನು ಶಿವಭಕ್ತರು ತೀರ್ಥವಾಗಿ ಬಳಸುತ್ತಾರೆ. ಈ ಯಾತ್ರೆಯನ್ನು ಬರಿಗಾಲಿನಲ್ಲಿ ಮಾಡಲಾಗುತ್ತದೆ.

ಕೆಲವು ಸ್ಥಳಗಳಲ್ಲಿ ಶ್ರಾವಣದ ಮೂರನೇ ಸೋಮವಾರದಂದು ಜಾತ್ರೆಯನ್ನು ಸಹ ಆಯೋಜಿಸಲಾಗುತ್ತದೆ.

ಈ ವ್ರತವನ್ನು ಶ್ರಾವಣದ ಕೊನೆಯ ಸೋಮವಾರದಂದು ಮುಕ್ತಾಯಗೊಳಿಸಲಾಗುತ್ತದೆ (ವ್ರತದ ಪಾರಣ). ಕೆಲವು ಸ್ಥಳಗಳಲ್ಲಿ ಶ್ರಾವಣ ಮಾಸದುದ್ದಕ್ಕೂ ಅನ್ನಛತ್ರಗಳನ್ನು ನಡೆಸಲಾಗುತ್ತದೆ.

ಈ ವ್ರತವನ್ನು ಆಚರಿಸುವುದರಿಂದ ಭಗವಾನ ಶಿವನು ಸಂತುಷ್ಟನಾಗುತ್ತಾನೆ ಮತ್ತು ಭಕ್ತನಿಗೆ ಸಾಯುಜ್ಯ ಮುಕ್ತಿ ಸಿಗುತ್ತದೆ, ಭಕ್ತನು ಶಿವನೊಂದಿಗೆ ಐಕ್ಯತೆಯನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ.

ಸ್ತ್ರೀಯರು ಶ್ರಾವಣದ ಪ್ರತಿ ಸೋಮವಾರದಂದು ಈ ವ್ರತದೊಂದಿಗೆ ಮತ್ತೊಂದು ಉಪವ್ರತವನ್ನು ಆಚರಿಸುವ ರೂಢಿಯೂ ಇದೆ.

4. ಶ್ರಾವಣ ಸೋಮವಾರದ ವ್ರತವನ್ನು ಸರಳವಾಗಿ ಆಚರಿಸುವ ಪದ್ಧತಿ

ಶ್ರಾವಣ ಮಾಸದ ಪ್ರತಿ ಸೋಮವಾರ, ಶಿವನ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿ, ಸಾಧ್ಯವಾದರೆ ನಿರಾಹಾರ ಉಪವಾಸ ಅಥವಾ ನಕ್ತ ಉಪವಾಸ ಮಾಡಬೇಕು. ಯಾವುದೇ ಕಾರಣದಿಂದ ಶಿವನ ದೇವಾಲಯಕ್ಕೆ ಅಥವಾ ತೀರ್ಥಕ್ಷೇತ್ರಕ್ಕೆ ಹೋಗಲು ಆಗದಿದ್ದರೆ, ಮುಂದಿನ ಪರ್ಯಾಯವನ್ನು ಅನುಸರಿಸಬಹುದು.

ಶ್ರಾವಣ ಸೋಮವಾರದಂದು ಉಪವಾಸವಿಟ್ಟು ಶಿವನ ಪೂಜೆ ಮಾಡುವುದು

ಪೋಷಿತಃ ಶುಚಿರ್ಭೂತ್ವಾ ಸೋಮವಾರೇ ಜಿತೇನ್ದ್ರಿಯಃ |

ವೈದಿಕೈರ್ಲೌಕಿಕೈರ್ಮನ್ತ್ರೈರ್ವಿಧಿವತ್ಪೂಜಯೇಚ್ಛಿವಮ್ || ಗ್ರಂಥ ವ್ರತ ರಾಜ

ಅರ್ಥ: ಸಂಯಮ ಮತ್ತು ಶುದ್ಧತೆಯ (ಪಾವಿತ್ರ್ಯದ) ನಿಯಮಗಳನ್ನು ಅನುಸರಿಸಿ, ಸೋಮವಾರ ಉಪವಾಸ ಮಾಡಬೇಕು ಮತ್ತು ಶಿವನನ್ನು ವೇದ ಅಥವಾ ಲೌಕಿಕ ಮಂತ್ರಗಳಿಂದ ಪೂಜಿಸಬೇಕು.

300x250 AD

ಸಂಯಮದಿಂದ, ಪಾವಿತ್ರ್ಯದ ನಿಯಮಗಳನ್ನು ಪಾಲಿಸಲು ಮತ್ತು ಉಪವಾಸ ಮಾಡಲು ವಿದ್ವಾಂಸರು ನಮಗೆ ಹೇಳಿದ್ದಾರೆ. ಅಂತೆಯೇ, ತಮ್ಮತಮ್ಮ ಕ್ಷಮತೆಗನುಸಾರ ತಿಳಿದಿರುವ ವೈದಿಕ ಅಥವಾ ಲೌಕಿಕ ಮಂತ್ರಗಳ ಮೂಲಕ ಶಿವನನ್ನು ಪೂಜಿಸಲು ತಿಳಿಸಿದ್ದಾರೆ.

ಶಿವನನ್ನು ಹೇಗೆ ಪೂಜಿಸಬೇಕು?

1. ಮನೆಯಲ್ಲಿರುವ ಶಿವಲಿಂಗವನ್ನು ಪೂಜಿಸಿ.

2. ಶಿವಲಿಂಗ ಲಭ್ಯವಿಲ್ಲದಿದ್ದರೆ, ಶಿವನ ಚಿತ್ರವನ್ನಿಟ್ಟು ಪೂಜಿಸಬೇಕು.

3. ಶಿವನ ಚಿತ್ರವೂ ಲಭ್ಯವಿಲ್ಲದಿದ್ದರೆ, ಮಣೆಯ ಮೇಲೆ ಶಿವಲಿಂಗ ಅಥವಾ ಶಿವನ ಚಿತ್ರವನ್ನು ಬಿಡಿಸಿ ಪೂಜಿಸಬೇಕು.

ಈ. ಮೇಲಿನ ಯಾವುದನ್ನೂ ಮಾಡಲು ಸಾಧ್ಯವಾಗದಿದ್ದರೆ, ‘ಓಂ ನಮಃ ಶಿವಾಯ’ ಎಂಬ ಮಂತ್ರವನ್ನು ಬರೆದು ಅದಕ್ಕೆ ಪೂಜೆಯನ್ನು ಸಲ್ಲಿಸಬಹುದು.’

ಆಧಾರ : ಸನಾತನದ ಗ್ರಂಥ ‘ಧಾರ್ಮಿಕ ಉತ್ಸವ ಮತ್ತು ವ್ರತಗಳ ಹಿಂದಿನ ಶಾಸ್ತ್ರ

ಸಂಗ್ರಹ-ಶ್ರೀ. ವಿನೋದ ಕಾಮತ್

ರಾಜ್ಯ ವಕ್ತಾರರು, ಸನಾತನ ಸಂಸ್ಥೆ

ಸಂಪರ್ಕ :  9342599299

Share This
300x250 AD
300x250 AD
300x250 AD
Back to top