Slide
Slide
Slide
previous arrow
next arrow

ಕನ್ನಡದ ಅಸ್ಮಿತೆಯನ್ನು ಕಾಪಿಟ್ಟುಕೊಳ್ಳಿ:ಬಿ.ಎನ್.ವಾಸರೆ ಕಿವಿಮಾತು

300x250 AD

ಹಳಿಯಾಳ: ನೀವು ಇಂದಿನ ವಿದ್ಯಾರ್ಥಿಗಳು ನಾಳಿನ ಪ್ರಜೆಗಳು. ರಾಜ್ಯ ಅಥವಾ ಹೊರರಾಜ್ಯ ಅಥವಾ ಹೊರದೇಶದಲ್ಲೂ ಉದ್ಯೋಗ ಅರಸಿ ಹೋಗುವವರು ಎಲ್ಲಾದರೂ ಇರಿ, ಎಂತಾದರೂ ಇರಿ, ಎಂದೆಂದಿಗೂ ಕನ್ನಡದ ಅಸ್ಮಿತೆಯನ್ನು ನಿಮ್ಮ ಎದೆಯಲ್ಲಿ ಕಾಪಿಟ್ಟುಕೊಳ್ಳಿ. ಇಂದು ನಿಮ್ಮನ್ನು ಕನ್ನಡಕ್ಕೆ ನೂರಕ್ಕೆ ನೂರು ಅಂಕ ಪಡೆದ ಪ್ರತಿಭೆಗಳೆಂದು ಸನ್ಮಾನಿಸಿದ್ದೇವೆ. ಮುಂದೆ ನೀವು ದೊಡ್ಡ ಸಾಧಕರಾಗಿ ಆಗಲೂ ಸನ್ಮಾನಿಸುವ ಕಾರ್ಯವನ್ನು ಕಸಾಪ ಮಾಡುವಂತಾಗಲಿ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಆಶಯ ವ್ಯಕ್ತಪಡಿಸಿದರು.

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕಾರ್ಮೆಲ್ ಪ್ರೌಢಶಾಲೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಕನ್ನಡಕ್ಕೆ ನೂರಕ್ಕೆ ನೂರು ಅಂಕಪಡೆದ ತಾಲೂಕಿನ 56 ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಜಿಲ್ಲಾ ಮಟ್ಟದ ಕಾರ್ಯಕ್ರಮ ಮಾಡಬೇಕೆಂಬ ಆಶಯ ನಮ್ಮದಾಗಿತ್ತು. ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡಕ್ಕೆ ನೂರಕ್ಕೆ ನೂರು ಪಡೆದವರಿದ್ದು ಅವರೆಲ್ಲರಿಗೂ ಬರುವ ಹೋಗುವ ತೊಂದರೆಯಾಗದಿರಲೆಂದು ಜಿಲ್ಲಾ ಕ ಸಾ ಪ ಸಹಯೋಗದಲ್ಲಿ ಆಯಾ ತಾಲೂಕುಗಳಲ್ಲಿ ಆಯೋಜಿಸಿ ಯಶಸ್ವಿಗೊಳಿಸಿದ್ದೇವೆ. ಇದೊಂದು ಸಣ್ಣ ಸನ್ಮಾನವಾದರೂ ಮುಂದೊಂದು ದಿನ ನಿಮ್ಮ ನೆನಪಿನಲ್ಲಿ ಸದಾಯಿರುತ್ತೆ. ಈ ವಯಸ್ಸು ಅತ್ಯಂತ ಚಂಚಲತೆಯ ವಯಸ್ಸು ಜಾಗರೂಕತೆಯಿಂದ ಹೆಜ್ಜೆಯಿಡಿ, ಕನ್ನಡ ಬಳಸಿ, ಉಳಿಸಿ, ಬೆಳೆಸಿ ಎಂದು ಕಿವಿಮಾತು ಹೇಳಿದರು.

ಕಾರ್ಮೆಲ್ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಸಿ.ಸ್ವರೂಪ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಯಶಸ್ಸು ಕೋರಿದರು. ಅತಿಥಿಗಳಾಗಿ ಆಗಮಿಸಿದ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ದಿನೇಶ ನಾಯಕ ಮಾತನಾಡಿ, ಬಿ.ಎನ್.ವಾಸರೆಯವರು ಜಿಲ್ಲಾಧ್ಯಕ್ಷರಾದ ನಂತರ ಮತ್ತೆ ಜಿಲ್ಲೆಯಲ್ಲಿ ಕಸಾಪ ಚಟುವಟಿಕೆ ಚುರುಕುಗೊಂಡಿದೆ. ಶಾಲೆಯ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಕಸಾಪ ಮಾಡುತ್ತಿರುವುದು ಸ್ತುತ್ಯಾರ್ಹ ಕಾರ್ಯವಾಗಿದೆಯೆಂದರು.

300x250 AD

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ನಾಯಕ, ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಪ್ರಶಾಂತ ನಾಯಕ, ಪ್ರೌಢಶಾಲಾ ಶಿಕ್ಷಕರ ತಾಲೂಕಾ ಸಂಘದ ಅಧ್ಯಕ್ಷ ವಿಠೋಬಾ ಬೊರೇಕರ, ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಬಿ. ಎನ್. ಅರಶಿನಗೇರಿ ಸಾಂದರ್ಭಿಕ ಮಾತನಾಡಿ, ಕಸಾಪ ಕಾರ್ಯವನ್ನು ಶ್ಲಾಘಿಸಿ ವಿದ್ಯಾರ್ಥಿಗಳಿಗೆ ಭವಿಷ್ಯದ ಜೀವನ ಯಶಸ್ವಿಯಾಗಲೆಂದು ಹರಸಿದರು.

ಕಸಾಪ ಜಿಲ್ಲಾ ಸಂಘದ ಕೋಶಾಧ್ಯಕ್ಷ ಮುರ್ತುಜಾ ಆನೆಹೊಸೂರ ಆಶಯ ನುಡಿಗಳನ್ನಾಡಿದರು. ತಾಲೂಕಾಧ್ಯಕ್ಷೆ ಸುಮಂಗಲಾ ಅಂಗಡಿ ಪ್ರಾಸ್ತಾವಿಕ ಮಾತನಾಡಿದರು. ಕಸಾಪ ತಾಲೂಕಾ ಘಟಕದ ಪದಾಧಿಕಾರಿಗಳಾದ ಸುಗುಣಾ ಹೆಗಡೆ ಪ್ರಾರ್ಥಿಸಿದರು. ಕಾರ್ಯದರ್ಶಿ ಶಾಂತಾರಾಮ ಚಿಬ್ಬುಲಕರ ನಿರೂಪಿಸಿದರು. ಕಲ್ಪನಾ ಹುದ್ದಾರ ವಂದಿಸಿದರು. ಕಾಳಿದಾಸ ಬಡಿಗೇರ, ಝಾಕಿರಹುಸೇನ್ ಜಂಗುಬಾಯಿ, ಶ್ರೀಶೈಲ ಹುಲ್ಲೆನ್ನವರ, ಜಿ.ಡಿ.ಗಂಗಾಧರ, ಗೋಪಾಲ ಮೇತ್ರಿ ಸಹಕರಿಸಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ದಾಸೋಹಿಗಳಾದ ಕಸಾಪ ಪದಾಧಿಕಾರಿಗಳೂ ಆದ ಗೋಪಾಲ ಅರಿ, ಬಸವರಾಜ ಇಟಗಿ ಮತ್ತು ಮಂಜುನಾಥ ಪಂಡಿತರವರನ್ನು ಕಸಾಪ ವತಿಯಿಂದ ಸನ್ಮಾನಿಸಲಾಯಿತು.

Share This
300x250 AD
300x250 AD
300x250 AD
Back to top