ಕಾರವಾರ: ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ “ವಿಜ್ಞಾನ ಬೇಸಿಗೆ ಶಿಬಿರ 2024” ಎಪ್ರಿಲ್ 24ರಿಂದ 30ರ ವರೆಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ ಕಾರವಾರದಲ್ಲಿ ನಡೆಯಿತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಕೋಸ್ಟಲ್ & ಮರೈನ್ ಇಕೋಸಿಸ್ಟಮ್ ಘಟಕದ ವಲಯ ಅರಣ್ಯಾಧಿಕಾರಿ ಪ್ರಮೋದ ಬಿ. ಜ್ಞಾನವೇ ಮುಖ್ಯ, ನಮ್ಮ ಸುತ್ತ ಮುತ್ತಲಿನ ವೈಜ್ಞಾನಿಕ ವಿಚಾರವನ್ನು ಅರಿಯಬೇಕು ಹಾಗೂ ವಿಜ್ಞಾನ ಬೇಸಿಗೆ ಶಿಬಿರದ ಪ್ರಯೋಜನ ಪಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ನ್ಯೂ ಹೈಸ್ಕೂಲ್ ಮುಖ್ಯಾಧ್ಯಾಪಕ ರಾಜೇಶ ಶೆಣ್ವಿ ಮಾತನಾಡಿ ವಿಜ್ಞಾನ ಕಲಿಕೆಯೊಂದಿಗೆ ಪ್ರಶ್ನಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು, ನೈಜ ಜೀವನದ ಘಟನಾಧಾರಿತ ಪುಸ್ತಕಗಳನ್ನು ಓದುವ ಹವ್ಯಾಸ ಹೊಂದಬೇಕು ಎಂದರು.
ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ ಕಾರವಾರದ ಸದಸ್ಯ ಕಾರ್ಯದರ್ಶಿ ಡಾ. ಸಂಜೀವ ದೇಶಪಾಂಡೆ ಸ್ಮಾರ್ಟ ಲರ್ನಿಂಗ್ ಪಾಯಿಂಟ್ ಸಂಸ್ಥೆಯ ಉಷಾ ಸುಂಕದವೇದ, ರೋಹಿಣಿ ಧಾರವಾಡದ ಖಗೋಳ ಪಾಠಶಾಲಾದ ಉಷಾ ಕುಲಕರ್ಣಿ, ಶಿಕ್ಷಣ ತಜ್ಞ ಓಂಕಾರ ಪೈ ಮತ್ತಿತರರು ಉಪಸ್ಥಿತರಿದ್ದರು.
ಕೊನೆಯ ದಿನ ಶೂನ್ಯ ನೆರಳಿನ ಹಾಗೂ ವಿಶ್ವ ಭೂಮಿ ದಿನಾಚರಣೆಯ ಅಂಗವಾಗಿ ಚಟುವಟಿಕೆಗಳನ್ನು ಹಾಗೂ ಚಿತ್ರಕಲೆಯನ್ನು ಹಮ್ಮಿಕೊಳ್ಳಲಾಯಿತು.
ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು. ಶಿಬಿರದಲ್ಲಿ 40 ವಿದ್ಯಾರ್ಥಿಗಳು ಭಾಗವಹಿಸಿದ್ದರು.