ಚುನಾವಣಾ ಸಂಬಂಧಿತ ಹಲವು ಮಾಹಿತಿಗಳನ್ನು ಪಡೆಯಲು ಮತದಾರರು ಕಚೇರಿಗಳಿಗೆ ಅಥವಾ ವಿವಿಧ ವೆಬ್ಸೈಟ್ಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ, ಮತದಾರರಿಗೆ ಅಗತ್ಯವಿರುವ ಎಲ್ಲಾ ರೀತಿಯ ಮಾಹಿತಿಯನ್ನು ಸಮಗ್ರವಾಗಿ ಒಂದೇ ಆಪ್ನಲ್ಲಿ ನೀಡಲು ಚುನಾವಣಾ ಆಯೋಗವು ವೋಟರ್ ಹೆಲ್ಪ್ಲೈನ್ ಆಪ್ ಬಿಡುಗಡೆಗೊಳಿಸಿದೆ.
ಮತದಾರರು ತಮ್ಮ ಮೊಬೈಲ್ನ ಗೂಗಲ್ ಪ್ಲೇ ಸ್ಟೋರ್ನಲ್ಲಿ ವೋಟರ್ ಹೆಲ್ಪ್ ಲೈನ್ ಆಪ್ನ್ನು ಡೌನ್ಲೋಡ್ ಮಾಡಿಕೊಂಡು, ತಮ್ಮ ಮೊಬೈಲ್ ಸಂಖ್ಯೆ ಮತ್ತು ಓಟಿಪಿಯನ್ನು ನೋಂದಣಿ ಮಾಡಿಕೊಂಡು, ಚುನಾವಣಾ ಸಂಬಂಧಿತ ಹಲವು ಉಪಯೋಗಿ ಮಾಹಿತಿಗಳನ್ನು ಈ ಆಪ್ನಲ್ಲಿ ಸುಲಭವಾಗಿ ಪಡೆಯಬಹುದಾಗಿದೆ.
ವೋಟರ್ ಹೆಲ್ಪ್ಲೈನ್ ಆಪ್ ಮೂಲಕ ಮತದಾರ ಪಟ್ಟಿಗೆ ಹೊಸದಾಗಿ ಮತದಾರರ ನೋಂದಣಿ ಮಾಡಿಕೊಳ್ಳಲು ಅವಕಾಶವಿದ್ದು, 18 ವರ್ಷ ತುಂಬಿದ ಯುವಜನತೆ ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ನೋಂದಣಿ ಮಾಡಲು ಅಗತ್ಯವಿರುವ ಫಾರಂ 6 ನ್ನು ಈ ಆಪ್ ಮೂಲಕವೇ ಭರ್ತಿ ಮಾಡಿ ಸಲ್ಲಿಸಬಹುದಾಗಿದೆ. ಅಲ್ಲದೇ ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದುಹಾಕಲು ಅಗತ್ಯವಿರುವ ಫಾರಂ 7 ಮತ್ತು ಅಗತ್ಯ ತಿದ್ದುಪಡಿಗಳನ್ನು ಮಾಡಲು ಫಾರಂ 8 ಸಲ್ಲಿಸಲು ಸಹ ಅವಕಾಶಗಳಿದ್ದು, ಈಗಾಗಲೇ ಅರ್ಜಿ ಸಲ್ಲಿಸಿದಲ್ಲಿ ಅವುಗಳ ಸ್ಥಿತಿಗತಿಯನ್ನು ತಿಳಿಯಲು ಟ್ರಾಕ್ ಮಾಡುವ ಸೌಲಭ್ಯ ಕೂಡಾ ಇದೆ.
ಅಲ್ಲದೇ ಮತದಾರರ ಪಟ್ಟಿಯಲ್ಲಿನ ನಿಮ್ಮ ಹೆಸರು ಯಾವ ಮತಗಟ್ಟೆಯಲ್ಲಿದೆ, ನಿಮ್ಮ ಜಿಲ್ಲೆಯ ಜಿಲ್ಲಾ ಚುನಾವಣಾಧಿಕಾರಿ ಯಾರು, ನಿಮ್ಮ ಬೂಥ್ ಮಟ್ಟದ ಅಧಿಕಾರಿಯ ವಿವರ ಕೂಡಾ ಪಡೆಯಬಹುದಾಗಿದೆ. ಇ-ಎಪಿಕ್ ಕಾರ್ಡ್ ಪಡೆಯುವ ಬಗ್ಗೆ ಸಹ ಅಗತ್ಯ ಮಾಹಿತಿ ದೊರೆಯಲಿದೆ.
ಚುನಾವಣೆಯ ಕುರಿತಂತೆ ಮಾದರಿ ಚುನಾವಣಾ ನೀತಿ ಸಂಹಿತೆಯ ವಿವರ, ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ವಿವರ, ಹಿಂದಿನ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳ, ಉಪ ಚುನಾವಣೆಗಳ ಫಲಿತಾಂಶದ ವಿವರಗಳು, ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಆಸ್ತಿಯ ವಿವರಗಳನ್ನು ಕೂಡಾ ವೀಕ್ಷಿಸಬಹುದಾಗಿದೆ.
ಚುನಾವಣೆಯಲ್ಲಿ ಬಳಸಲಾಗುವ ಇ.ವಿ.ಎಂ. ಮತ್ತು ವಿವಿ ಪ್ಯಾಟ್ ಗಳ ಬಗ್ಗೆ, ಚುನಾವಣಾ ಆಯೋಗದ ಬಗ್ಗೆ, ಚುನಾವಣಾ ಆಯೋಗದಿಂದ ನಡೆಯುವ ವಿವಿಧ ಕಾರ್ಯಕ್ರಮಗಳ ಬಗೆಗಿನ ವರದಿಗಳನ್ನೂ ಸಹ ಹಾಗೂ ಯಾವುದೇ ಬಗೆಯ ದೂರುಗಳನ್ನು ಸಲ್ಲಿಸಲು ಹಾಗೂ ಸಲಹೆಗಳನ್ನು ನೀಡಲು ಸಹ ಅವಕಾಶವಿದೆ.
ವೋಟರ್ ಹೆಲ್ಪ್ಲೈನ್ ಆಪ್ ಮೂಲಕ ಮತದಾರರು ತಮಗೆ ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ಪಡೆಯಬಹುದಾಗಿದ್ದು, ಮಾಹಿತಿಗಳಿಗಾಗಿ ಕಚೇರಿಗೆ ಅಲೆದಾಡುವ ಅಗತ್ಯವಿರುವುದಿಲ್ಲ. ಹೊಸ ಮತದಾರರ ಗುರುತಿನ ಚೀಟಿ ಸೇರಿದಂತೆ , ತಮ್ಮ ಮತಗಟ್ಟೆಯ ವಿಳಾಸ, ಕ್ರಮ ಸಂಖ್ಯೆ, ಭಾಗ ಸಂಖ್ಯೆಯ ವಿವರಗಳನ್ನು ಈ ಆಪ್ ನಲ್ಲಿ ಪಡೆಯಬಹುದಾಗಿದೆ: ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ..