ಕುಮಟಾ: ತಾಲೂಕಿನ ಬರ್ಗಿ ಗ್ರಾಮ ಪಂಚಾಯತ್‍ನಲ್ಲಿ ವಿಚಾರಣೆಯೊಂದಕ್ಕೆ ಬಂದಿದ್ದ ಜಿ.ಪಂ ಉಪಕಾರ್ಯದರ್ಶಿಯು ಗ್ರಾ.ಪಂ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಓಡಿಹೋದ ಪ್ರಸಂಗ ನಡೆದಿದೆ!
ತಾಲೂಕಿನ ಬರ್ಗಿ ಗ್ರಾಮ ಪಂಚಾಯತ್‍ನಲ್ಲಿ ವ್ಯಕ್ತಿಯೊಬ್ಬರು ನೀಡಿದ ದೂರಿನ ವಿಚಾರಣೆಗಾಗಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಜಕ್ಕಪ್ಪ ಗೋಳ್ ಅವರು ಪಂಚಾಯತ್ ಕಚೇರಿಗೆ ಆಗಮಿಸಿದ್ದರು. ಈ ಸಭೆಗೆ ಗ್ರಾಮ ಪಂಚಾಯತ್‍ದ ಸದಸ್ಯರಿಗೆ ಮೌಖಿಕವಾಗಿ ಹಾಜರಿರುವಂತೆ ಆದೇಶ ನೀಡದ್ದರು. ಈ ಹಿನ್ನೆಲೆಯಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸಭೆಗೆ ಹಾಜರಿರುವಂತೆ ಸದಸ್ಯರಿಗೆ ನೊಟೀಸ್ ಜಾರಿ ಮಾಡಿದ್ದರು. ಗ್ರಾ.ಪಂ ಸಭಾಭವನದಲ್ಲಿ ಸಭೆ ಕರೆದಿದ್ದ ಉಪಕಾರ್ಯದರ್ಶಿ ಸದಸ್ಯರಿಗೆ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿರಲಿಲ್ಲ. ಹೀಗಾಗಿ ಸಭೆಗೆ ಹಾಜರಾಗುವುದಿಲ್ಲ ಎಂದು ಸದಸ್ಯರು ಪಟ್ಟು ಹಿಡಿದರು. ಅಭಿವೃದ್ಧಿ ಅಧಿಕಾರಿ ಸದಸ್ಯರ ಮನವೊಲಿಸಿ ಸಭೆಗೆ ಹಾಜರಾಗುವಂತೆ ಮುಂದಾದರು. ಇದು ಅಧಿಕೃತ ಸಭೆ ಇಲ್ಲದಿರುವುದರಿಂದ ತಾವು ಸಕ್ರೀಯವಾಗಿ ಪಾಲ್ಗೊಳ್ಳುವುದಿಲ್ಲ ಎಂದು ಸದಸ್ಯರು ಉಪಕಾರ್ಯದರ್ಶಿಯವರಿಗೆ ತಿಳಿಸಿದರು. ಇದರಿಂದ ವಿಚಲಿತಗೊಂಡ ಅಧಿಕಾರಿ ಸಮರ್ಥವಾಗಿ ವಿಷಯವನ್ನು ಮಂಡಿಸದಿರುವುದರಿಂದ ಕೆರಳಿದ ಸದಸ್ಯರು ಸಕ್ರೀಯವಾಗಿ ಚರ್ಚೆಗೆ ಮುಂದಾಗಲಿಲ್ಲ.
ಬರ್ಗಿ ಗ್ರಾಮ ಪಂಚಾಯಿತಿಯಲ್ಲಿ ಎಸ್.ಟಿ ಸದಸ್ಯರನ್ನು ಸಭೆಯ ಕಲಾಪಗಳಿಗೆ ನೋಟೀಸ್ ನೀಡುತ್ತಿಲ್ಲ. ಅಲ್ಲದೆ ಪಂಚಾಯಿತಿಯ ಯಾವುದೇ ಕಾರ್ಯಕಲಾಪಗಳಿಗೆ ಆಹ್ವಾನ ನೀಡಲಾಗುತ್ತಿಲ್ಲ. ಕಳೆದ ಒಂದು ವರ್ಷದಿಂದ ಇಂತಹ ಪರಿಸ್ಥಿತಿ ಮುಂದುವರೆದುಕೊಂಡು ಬಂದಿದೆ. ಹೀಗಾಗಿ ಕೆಲವು ತಿಂಗಳುಗಳ ಹಿಂದೆ ಗ್ರಾ.ಪಂ ಸದಸ್ಯರೆಲ್ಲರೂ ಸೇರಿ ಜಿಲ್ಲಾ ಪಂಚಾಯತ್ ಹಾಗೂ ಸರ್ಕಾರದ ಅಧಿಕಾರಿಗಳ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿದ್ದರು. ಪತ್ರಿಕಾಗೋಷ್ಠಿಯ ಔಚಿತ್ಯವನ್ನು ಪ್ರಶ್ನಿಸಿ ಸ್ಥಳೀಯ ವ್ಯಕ್ತಿಯೊಬ್ಬರು ಜಿ.ಪಂ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಹೀಗಾಗಿ ಉಪಕಾರ್ಯದರ್ಶಿಗಳು ಈ ಅರ್ಜಿಯ ವಿಚಾರಣೆಗೆ ಮುಂದಾಗಿದ್ದಾರೆ. ಇದು ಗ್ರಾ.ಪಂ ಸದಸ್ಯರ ನ್ಯಾಯುತ ಬೇಡಿಕೆಗಳಿಗೆ ವಿರುದ್ಧವಾದ ನಡೆಯಾಗಿದ್ದರಿಂದ ಸಹಜವಾಗಿ ಸದಸ್ಯರೆಲ್ಲರೂ ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಲಕ್ಷ್ಮೀ ಗೊಂಡ ಪರಿಶಿಷ್ಟ ಪಂಗಡ ವರ್ಗದಿಂದ ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿದ್ದರು. ಇವರು ಗ್ರಾ.ಪಂ ಅಧ್ಯಕ್ಷರ ಆಯ್ಕೆಯಲ್ಲಿ ಮತದಾನ ಮಾಡಿದ್ದರು. ಅಲ್ಲದೆ ಕಳೆದ ವಿಧಾನಪರಿಷತ್ ಚುನಾವಣೆಯಲ್ಲಿಯೂ ಮತದಾನ ಮಾಡಿದ್ದರು. ಇವರು ಪರಿಶಿಷ್ಟ ಪಂಗಡಕ್ಕೆ ಸೇರಿದವರಲ್ಲ ಎಂದು ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಹೀಗಾಗಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯದ ಆದೇಶ ಇನ್ನೂ ಚಾಲ್ತಿಯಲ್ಲಿದೆ.
ಹೀಗಿರುವಾಗ ಗ್ರಾ.ಪಂ 15 ಸದಸ್ಯರ ಪೈಕಿ ಒಬ್ಬರನ್ನು ಬಿಟ್ಟು ಕಳೆದೊಂದು ವರ್ಷದಿಂದ 14 ಸದಸ್ಯರಿಗೆ ಮಾತ್ರ ಸಭೆಗೆ ನೋಟೀಸ್ ನೀಡಲಾಗುತ್ತಿದೆ. ಹೀಗಾಗಿ ಪರಿಶಿಷ್ಟ ಜಾತಿ ಸದಸ್ಯರ ಆಯ್ಕೆ ಮಾನ್ಯತೆ ಕುರಿತು ಜಿಜ್ಞಾಸೆ ಮೂಡಿದ್ದು, ಅಧಿಕಾರಿಗಳು ಸ್ಪಷ್ಟ ನಿರ್ಣಯ ನೀಡುತ್ತಿಲ್ಲ. ಹಾಗಾಗಿ ಸದಸ್ಯರು 15ನೇ ಸದಸ್ಯರ ಬಗ್ಗೆ ಅನರ್ಹತೆ ಇಲ್ಲವೇ ಅರ್ಹತೆ ಬಗ್ಗೆ ಆದೇಶ ನೀಡಬೇಕೆಂದು ಪಟ್ಟು ಹಿಡಿದರು. ಆದರೆ ಈ ವಿಷಯದ ಅರಿವಿಲ್ಲದಂತೆ ವರ್ತಿಸಿದ ಉಪಕಾರ್ಯದರ್ಶಿ ಸದಸ್ಯರ ಅಹವಾಲುಗಳಿಗೆ ಯಾವುದೇ ಮನ್ನಣೆ ನೀಡಿಲ್ಲ. ಅಲ್ಲದೆ ಸಮಸ್ಯೆ ಹಾಗೂ ಪ್ರಶ್ನೆಗಳಿಗೆ ಪರಿಹಾರ ನೀಡದೇ ಸಭೆಯಿಂದ ಹೊರ ನಡೆದು ತಮ್ಮ ವಾಹನ ಏರಿದರು. ಇದರಿಂದ ಆಕ್ರೋಶಗೊಂಡ ಸದಸ್ಯರು ವಾಹನದ ಎದುರು ನಿಂತು ಪ್ರತಿಭಟನೆ ನಡೆಸಿದರು. ತಾವೇ ಬಂದು ಸಭೆ ನಡೆಸಿದ್ದೀರಿ. ನಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಿ ಎಂದು ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಸರ್ಕಾರಿ ವಾಹನದಿಂದ ಕೆಳಗಿಳಿದ ಅಧಿಕಾರಿ ಓಡಿಹೋಗಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಖಾಸಗಿ ವಾಹನವನ್ನು ತರಿಸಿ ಪರಾರಿಯಾದರು.
ಬರ್ಗಿ ಗ್ರಾ.ಪಂ ನಲ್ಲಿ ಕಳೆದೊಂದು ವರ್ಷದಿಂದ ಸದಸ್ಯರ ಅನರ್ಹತೆಯ ಪ್ರಹಸನ ಮುಂದುವರೆದುಕೊಂಡು ಬಂದಿದ್ದು, 15ನೇ ಸದಸ್ಯರ ನೇಮಕಾತಿ ಕುರಿತು ಗ್ರಾ.ಪಂ ಸದಸ್ಯರ ಬೇಡಿಕೆ ಔಚಿತ್ಯಪೂರ್ಣವಾಗಿದೆ. ಹೀಗಿದ್ದರೂ ಅಧಿಕಾರಿಗಳು ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳದೇ ಕಾಲಹರಣ ಮಾಡುತ್ತಿದ್ದಾರೆ. ಹೀಗಾಗಿ ಈ ಸಮಸ್ಯೆಗೆ ಮೇಲಾಧಿಕಾರಿಗಳು ತಕ್ಷಣ ಪರಿಹಾರ ದಿರಕಿಸಿಕೊಡಬೇಕಾಗಿದೆ.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ವಿಶಾಲಾಕ್ಷಿ ಪಟಗಾರ್, ಉಪಾಧ್ಯಕ್ಷೆ ಭಾರತಿ ಹರಿಕಾಂತ, ಸದಸ್ಯರಾದ ರಾಮಾ ಪಟಗಾರ್, ರವಿ ನಾಯ್ಕ, ಸಂತೋಷ ಹರಿಕಾಂತ್, ಶಿವರಾಮ ಹರಿಕಾಂತ್ರ, ಮಂಗಲಾ ನಾಯಕ್, ಇಶಾಖ್ ಕೊತ್ವಾಲ್, ದಾವೂದ್ ಗಾರಿಯಾ, ಕುಳುಸುಂದಿ ಮೊನ್ನ, ಮಾರುತಿ ಆಗೇರ್, ಮಹಾಲಕ್ಷ್ಮೀ ಶೆಟ್ಟಿ, ನವೀನ್ ಪಟಗಾರ್, ವಿಠೋಬ್ ಗಾವಡಿ, ಮುಬಾರಕ್ ಬೇಗಮ್ ಇತರರು ಇದ್ದರು.