ಕಾರವಾರ: ರಾಜ್ಯದಲ್ಲಿ 200 ಯುನಿಟ್ ಉಚಿತ ವಿದ್ಯುತ್ ನೀಡುವ ಮುನ್ನವೇ ವಿದ್ಯುತ್ ಬಿಲ್ ನಲ್ಲಿ ಬೆಲೆ ಏರಿಕೆಯಾಗುವ ಮೂಲಕ ಜನರು ಕಂಗಾಲಾಗುವಂತೆ ಮಾಡಿದೆ. ಪ್ರತಿ ತಿಂಗಳು ಬರುತ್ತಿದ್ದ ಬಿಲ್ ಗಿಂತ ದುಪ್ಪಟ್ಟು ಬಿಲ್ ಈ ಬಾರಿ ಬಂದಿರುವುದಕ್ಕೆ ಜನರು ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಿದೆ. ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನ ಘೋಷಣೆ ಮಾಡಿತ್ತು. ಅದರಲ್ಲಿ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡುವ ಘೋಷಣೆ ಸಹ ಆಗಿತ್ತು. ಸದ್ಯ ಕಾಂಗ್ರೆಸ್ ನುಡಿದಂತೆ ಉಚಿತ ವಿದ್ಯುತ್ ಕೊಡುವ ತಯಾರಿಯಲ್ಲಿದೆ. ಇದರ ನಡುವೆ ವಿದ್ಯುತ್ ಬಿಲ್ ಈ ಬಾರಿ ಏರಿಕೆಯಾಗಿದ್ದು ಜನರ ಸಿಟ್ಟಿಗೆ ಕಾರಣವಾಗಿದೆ. ವಿದ್ಯುತ್ ನಿಗಮಗಳು ಪ್ರತಿ ಯುನಿಟ್ ಗೆ ಬೆಲೆ ಏರಿಕೆ ಮಾಡಿದೆ. 71 ಪೈಸೆ ಹೆಚ್ಚಳ ಮಾಡಿದ್ದು ಜೊತೆಗೆ ನಿಗದಿತ ಶುಲ್ಕದಲ್ಲಿ ಸಹ ಹೆಚ್ಚಳ ಮಾಡಿದ್ದು ಇದರಿಂದ ವಿದ್ಯುತ್ ಬಿಲ್ ನಲ್ಲಿ ಧಿಡೀರ್ ಏರಿಕೆಕಂಡಿದೆ. ಪ್ರತಿ ತಿಂಗಳು ಬರುತ್ತಿದ್ದ ಬಿಲ್ ಗಿಂತ ದುಪ್ಪಟ್ಟು ಬಿಲ್ ಬಂದಿದ್ದು ಜನರು ಕಂಗಾಲಾಗುವಂತೆ ಮಾಡಿದೆ.
ವಿದ್ಯುತ್ ಬಿಲ್ ಹೆಚ್ಚಳಕ್ಕೆ ಕಳೆದ ಮಾರ್ಚ್ ತಿಂಗಳಿನಲ್ಲಿಯೇ ಪ್ರಸ್ತಾವ ಸಲ್ಲಿಸಲಾಗಿದ್ದು ಚುನಾವಣೆ ಹಿನ್ನಲೆಯಲ್ಲಿ ಹೆಚ್ಚಳ ಮಾಡಿರಲಿಲ್ಲ. ಸದ್ಯ ಹೊಸ ಸರ್ಕಾರ ಬಂದಿದ್ದು ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿ ಬೆಲೆ ಏರಿಕೆ ಸಹ ಆಗಿದೆ. ಉಚಿತ ವಿದ್ಯುತ್ ಕೊಡುವ ಮುನ್ನವೇ ಧಿಡೀರ್ ಬಿಲ್‍ನಲ್ಲಿ ಏರಿಕೆ ಕಂಡಿರುವುದು ಸಾರ್ವಜನಿಕರಿಗೆ ನುಂಗಲಾರದ ತುತ್ತಾಗಿದೆ. ಇನ್ನು ವಿದ್ಯುತ್ ಬಿಲ್‍ನಲ್ಲಿ ಏರಿಕೆ ಕಂಡಿರುವುದು ಮಧ್ಯಮ ವರ್ಗ ಹಾಗೂ ಬಡ ವರ್ಗದವರ ಆಕ್ರೋಶ ಹೆಚ್ಚಾಗುವಂತೆ ಮಾಡಿದೆ. ಬಹುತೇಕ ಎಲ್ಲಾ ಕಡೆಯೂ ಈ ಬಾರಿ ಬಿಲ್ ನಲ್ಲಿ ದುಬಾರಿ ಮೊತ್ತ ನಮೂದಾಗಿ ಬಂದಿದ್ದು ಒಮ್ಮೆಲೇ ಇಷ್ಟೊಂದು ಬೆಲೆ ಏರಿಕೆ ಅಗತ್ಯವಾದರು ಇತ್ತಾ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ವಿದ್ಯುತ್ ಬಿಲ್ ಹೆಚ್ಚಳಕ್ಕೆ ಅನುಮೋದನೆ ಮಾಡಿ ಹೋಗಲಾಗಿತ್ತು ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ ಸದ್ಯ ಆಡಳಿತಕ್ಕೆ ಬಂದ ಸರ್ಕಾರ ಈ ಬೆಲೆ ಏರಿಕೆಯನ್ನ ತಡೆಯಬೇಕಿತ್ತು. ಉಚಿತ ಕೊಡುವ ಮುನ್ನವೇ ಈ ರೀತಿ ಬೆಲೆ ಏರಿಕೆ ಮಾಡಿದರೆ ಜನರು ದುಬಾರಿ ಮೊತ್ತವನ್ನ ಹೇಗೆ ಕಟ್ಟುವುದು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ವಿದ್ಯುತ್ ಬಿಲ್ ನಲ್ಲಿ ಏರಿಕೆ ಮಾಡಿರುವುದು ವಿರೋಧ ಪಕ್ಷ ಬಿಜೆಪಿಗೆ ಅಸ್ತ್ರ ಸಿಕ್ಕಂತಾಗಿದೆ. ಬೆಲೆ ಏರಿಕೆಯ ವಿರುದ್ದ ಕಾಂಗ್ರೆಸ್ ಸದಾ ಧ್ವನಿ ಎತ್ತುತ್ತಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ತಕ್ಷಣ ಬೆಲೆ ಏರಿಕೆಯಾಗಿದ್ದು ಇದನ್ನೇ ರಾಜಕೀಯವಾಗಿ ಬಳಸಿಕೊಳ್ಳಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಸಾರ್ವಜನಿಕ ವಲಯದಲ್ಲೂ ಈ ಬೆಲೆ ಏರಿಕೆ ವಿರುದ್ದ ಅಸಮಾಧಾನ ವ್ಯಕ್ತವಾಗುತ್ತಿದ್ದು ಕಾಂಗ್ರೆಸ್ ಈ ಬಗ್ಗೆ ಗಮನ ಹರಿಸಬೇಕಾಗಿದೆ.