ಕುಮಟಾ: ಮಿರ್ಜಾನ್ ಶಾಖಾಮಠದ ಪೂಜ್ಯರಾದ ಬ್ರಹ್ಮಚಾರಿ ಶ್ರೀ ನಿಶ್ಚಲಾನಂದನಾಥಜೀಯವರ ಮಾರ್ಗದರ್ಶನದೊಂದಿಗೆ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಬಿಜಿಎಸ್ ಸೆಂಟ್ರಲ್ ಸ್ಕೂಲಿನಲ್ಲಿ ಶಾಲಾ ಸಂಸತ್ ಚುನಾವಣೆ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕುಮಟಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಷಯದ ವಿಭಾಗ ಮುಖ್ಯಸ್ಥರಾದ ಕೃಷ್ಣ ನಾಯಕ್ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಇಂದಿನ ಮಕ್ಕಳೇ ನಾಳಿನ ಪ್ರಜೆಗಳಾಗುವುದರಿಂದ ಶಾಲಾ ಕಲಿಕೆಯ ಜೊತೆಜೊತೆಗೆ ಪ್ರಜಾಪ್ರಭುತ್ವದ ಮೂಲಾಂಶಗಳನ್ನು ಬೆಳೆಸಿದರೆ ಭವಿಷ್ಯದಲ್ಲಿ ಉತ್ತಮ ನಾಗರಿಕರನ್ನು ದೇಶಕ್ಕೆ ಕಾಣಿಕೆಯಾಗಿ ನೀಡಬಹುದು. ಶಾಲೆಯ ಪ್ರತಿಯೊಂದು ಚಟುವಟಿಕೆ ಮತ್ತು ಕಾರ್ಯಕ್ರಮಗಳಲ್ಲಿ ಮಕ್ಕಳ ಭಾಗವಹಿಸುವಿಕೆ ಮತ್ತು ಅಭಿವ್ಯಕ್ತಿ ಪ್ರಕ್ರಿಯೆ ಅತ್ಯಂತ ಮಹತ್ವದ್ದು. ಮಕ್ಕಳು ಮಕ್ಕಳಿಂದ ಮಕ್ಕಳಿಗಾಗಿ ಆಯ್ಕೆಯಾದ ಸದಸ್ಯರ ಸಂಸತ್ತೇ ಶಾಲಾ ಸಂಸತ್ ಆಗಿದೆ. ಮಕ್ಕಳು ಯಾವುದೇ ಆಮಿಷಕ್ಕೆ ಒಳಗಾಗದೇ ಯೋಗ್ಯ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಆಯ್ಕೆ ಮಾಡಿ ಎಂದು ಹೇಳಿ ಭಾರತದಲ್ಲಿ ಮತದಾನದ ಮಹತ್ವದ ಬಗ್ಗೆ, ಸಂವಿಧಾನದ ವಿಧಿಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ಬಿಜಿಎಸ್ ಸೆಂಟ್ರಲ್ ಸ್ಕೂಲಿನ ಪ್ರಾಂಶುಪಾಲೆ ಶ್ರೀಮತಿ ಅರ್ಚನಾ ಭಟ್ ಸರ್ವರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿ ಮಕ್ಕಳಿಗೆ ಚುನಾವಣೆಯ ಮಹತ್ವವನ್ನು ತಿಳಿಸಿದರು. ಉಪಪ್ರಾಂಶುಪಾಲೆ ಶ್ರೀಮತಿ ಅನುರಾಧ ಗುನಗ, ಹಿರಿಯ ಶಿಕ್ಷಕ ಎಂ.ಜಿ.ಹಿರೇಕುಡಿ, ಕನ್ನಡ ಉಪನ್ಯಾಸಕ ಶ್ರೀಧರ ಹೆಚ್.ಆರ್. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬಿಜಿಎಸ್ ಸೆಂಟ್ರಲ್ ಸ್ಕೂಲಿನಲ್ಲಿ ವಿದ್ಯಾರ್ಥಿಗಳು ಶಾಲಾ ಸಂಸತ್ ಚುನಾವಣೆಯಲ್ಲಿ ತುಂಬಾ ಉತ್ಸಾಹದಿಂದ ಭಾಗವಹಿಸಿ, ಮೊಬೈಲ್ನಿಂದ ಗೂಗಲ್ ಫಾರ್ಮ್ ಬಳಕೆ ಮಾಡುವ ಮೂಲಕ ಮತದಾನ ಮಾಡಿದರು. ಶಾಲಾ ಸಂಸತ್ತಿನಲ್ಲಿ ಒಟ್ಟು 14 ಸ್ಥಾನಗಳಿಗೆ ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ಮತದಾನ ನಡೆಯಿತು. ಇದಕ್ಕೂ ಮೊದಲು ಚುನಾವಣೆ ವೇಳಾಪಟ್ಟಿ ಮತ್ತು ಚುನಾವಣಾ ನೀತಿನಿಯಮಾವಳಿಗಳನ್ನು ಪ್ರಕಟಿಸಿ ಕಟ್ಟುನಿಟ್ಟಿನ ಚುನಾವಣಾ ನೀತಿ ಸಂಹಿತೆಯನ್ನು ಜಾರಿಗೊಳಿಸಲಾಗಿತ್ತು. .ಶಾಲಾ ಪ್ರತಿನಿಧಿ, ಕ್ರೀಡಾ ವಿಭಾಗ ಪ್ರತಿನಿಧಿ, ಶಿಸ್ತುಪಾಲನಾ ವಿಭಾಗಪ್ರತಿನಿಧಿ ಹಾಗೂ ಸಾಂಸ್ಕತಿಕ ವಿಭಾಗ ಪ್ರತಿನಿಧಿಗಳ ಮತ್ತು ಉಪಪ್ರತಿನಿಧಿಗಳ ಒಟ್ಟು 14 ಸ್ಥಾನಗಳಿಗೆ 25 ನಾಮಪತ್ರಗಳು ಸಲ್ಲಿಕೆಯಾಗಿದ್ದವು.ಮುಖ್ಯ ಚುನಾವಣಾ ಆಯುಕ್ತರಾದ ಶ್ರೀಮತಿ ಅರ್ಚನಾ ಭಟ್, ಚುನಾವಣಾ ಆಯುಕ್ತರಾದ ಎಂ. ಜಿ. ಹಿರೇಕುಡಿ, ಉಪಚುನಾವಣಾ ಆಯುಕ್ತರಾದ ಶ್ರೀಮತಿ ಅನುರಾದ ಗುನಗರವರ ಉಪಸ್ಥಿತಿಯಲ್ಲಿ, ಚುನಾವಣಾ ಅಧೀಕ್ಷಕರಾದ ನಾಗರತ್ನ ನಾಯಕ ಮತ್ತು ಎಲ್ಲಾ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಮೊಬೈಲ್ ಅಪ್ಲೀಕೇಷನ್ ಮೂಲಕ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು. ವಿದ್ಯಾರ್ಥಿಗಳು ಪ್ರತ್ಯೇಕ ಸರದಿಯಲ್ಲಿ ನಿಂತು ಶಾಲಾ ಗುರುತಿನ ಚೀಟಿ ಹಿಡಿದು ತಮ್ಮ ಹಕ್ಕು ಚಲಾಯಿಸಿರು. ಮತದಾನದ ಸಮಯದಲ್ಲಿ ವಿದ್ಯಾರ್ಥಿಗಳ ಎಡಗೈ ತೋರು ಬೆರಳಿಗೆ ಶಾಹಿ ಹಚ್ಚಲಾಯಿತು. ಭದ್ರತಾ ಸಿಬ್ಬಂದಿ ಮುಖ್ಯಸ್ಥೆ ಶ್ರೀಮತಿ ನಾಗರತ್ನ ನಾಯ್ಕರವರ ಉಪಸ್ಥಿತಿಯಲ್ಲಿ ವಿದ್ಯಾರ್ಥಿಗಳೇ ಸಶಸ್ತ್ರಪಡೆಯ ಭದ್ರತಾ ರಕ್ಷಕರಾಗಿ ಕಾರ್ಯನಿರ್ವಹಿಸಿ ಚುನಾವಣೆ ಸುಸೂತ್ರವಾಗಿ ನಡೆಯಲು ಸಹಕರಿಸಿದರು. ಎಲ್ಲ ಶಿಕ್ಷಕ ವೃಂದ ಮತ್ತು ಬೋಧಕೇತರ ಸಿಬ್ಬಂದಿಗಳು ಚುನಾವಣಾ ಸಿಬ್ಬಂದಿಗಳಾಗಿ ಕಾರ್ಯನಿರ್ವಹಿಸಿ ಶಾಲಾ ಸಂಸತ್ ಚುನಾವಣೆಯನ್ನು ಯಶಸ್ವಿಗೊಳಿಸಿದರು. ಒಟ್ಟು ಶೇಕಡಾ 100 ಮತದಾನ ಆಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತರು ಘೋಷಿಸಿದರು.
ವಿದ್ಯಾರ್ಥಿಗಳ ಶಾಲಾ ಪ್ರತಿನಿಧಿಯ ಬಾಲಕರ ವಿಭಾಗದಲ್ಲಿ ಕೃಷ್ಣಪ್ರಸಾದ ಗುನಗ ಬಾಲಕಿಯರ ವಿಭಾಗದಲ್ಲಿ ಎನ್. ಶ್ರೇಯಾ, ಕ್ರೀಡಾ ವಿಭಾಗದ ಬಾಲಕರ ವಿಭಾಗದಲ್ಲಿ ಶ್ರೀಧರ್ ಕಾಮತ್, ಬಾಲಕಿಯರ ವಿಭಾಗದಲ್ಲಿ ರಿಶ್ಮಿತಾ, ಶಿಸ್ತುಪಾಲನಾ ವಿಭಾಗದ ಬಾಲಕರ ವಿಭಾಗದಲ್ಲಿ ಪೃಥ್ವಿರಾಜ್ ಖಾರ್ವಿ, ಬಾಲಕಿಯರ ವಿಭಾಗದಲ್ಲಿ ಆದರ್ಶಿನಿ ತೇಗೂರ್ ಹಾಗೂ ಸಾಂಸ್ಕೃತಿಕ ವಿಭಾಗದ ಬಾಲಕರ ವಿಭಾಗದಲ್ಲಿ ಅಶ್ವಿನ್ ನಾಯ್ಕ ಹಾಗೂ ಬಾಲಕಿಯರ ವಿಭಾಗದಲ್ಲಿ ಸ್ಪಂದನಾ ನಾಯಕ ವಿಜೇತರಾದರು.
ಉಪಕ್ರೀಡಾ ವಿಭಾಗದ ಬಾಲಕರ ವಿಭಾಗದಲ್ಲಿ ಹರ್ಷಿತ್ ನಾಯ್ಕ, ಬಾಲಕಿಯರ ವಿಭಾಗದಲ್ಲಿ ಆಲ್ಫಿಯಾ ಖಾನ್, ಉಪಶಿಸ್ತುಪಾಲನಾ ವಿಭಾಗದ ಬಾಲಕರ ವಿಭಾಗದಲ್ಲಿ ಪ್ರಜ್ವಲ್ ವಿ. ರಾಯ್ಕರ್, ಬಾಲಕಿಯರ ವಿಭಾಗದಲ್ಲಿ ನಿಶಾ ನಾಯಕ ಹಾಗೂ ಸಾಂಸ್ಕೃತಿಕ ವಿಭಾಗದ ಬಾಲಕರ ವಿಭಾಗದಲ್ಲಿ ತಿಲಕ್ ಶೇಟ್ ಹಾಗೂ ಬಾಲಕಿಯರ ವಿಭಾಗದಲ್ಲಿ ಹೆಚ್. ಆರ್. ಈಶಾನಿ ವಿಜೇತರಾದರು. ಸ್ವಯಂ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕಿ ರಮ್ಯಾ ಭಟ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಗೀತಾ ನಾಯ್ಕ ವಂದಿಸಿದರು.