ಯಲ್ಲಾಪುರ: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಮೂಳೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು.
ಪಟ್ಟಣದ 60 ವರ್ಷದ ಮಹಿಳೆಯೊಬ್ಬರು ಬಿದ್ದು ಕೈಮೂಳೆ ಹಾಗೂ ಕಾಲು ಮೂಳೆ ಮುರಿದು ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯ ಎಲುಬು, ಕೀಲು ತಜ್ಞ ಡಾ. ಭರತ.ಸಿ.ಪಿ, ಅರವಳಿಕೆ ತಜ್ಞೆ ಡಾ.ಗಗನಾ, ಡಾ.ಧನ್ಯಾ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಶುಶ್ರೂಷಕ ಅಧಿಕಾರಿಗಳಾದ ಸುಗಂಧಾ ನಾಯ್ಕ, ಹನುಮಂತ ಸೇಬಣ್ಣವರ್, ಸಿಬ್ಬಂದಿ ಇಂದಿರಾ ಮಾದರ್ ಸಹಾಯಕರಾಗಿ ಕಾರ್ಯನಿರ್ವಹಿಸಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸಿಜೇರಿಯನ್, ಉದರದರ್ಶಕ ಸಂತಾನಹರಣ ಶಸ್ತ್ರಚಿಕಿತ್ಸೆ, ಕಣ್ಣಿನ ಶಸ್ತ್ರಚಿಕಿತ್ಸೆ ನಡೆಯುತ್ತಿದ್ದು, ಇದೀಗ ಅವುಗಳ ಸಾಲಿಗೆ ಮೂಳೆ ಶಸ್ತ್ರಚಿಕಿತ್ಸೆಯೂ ಸೇರಿದೆ. ತಾಲೂಕಿನ ಜನರು ಮೂಳೆ ಶಸ್ತ್ರಚಿಕಿತ್ಸೆಗಾಗಿ ದೂರದ ಊರುಗಳಿಗೆ ಹೋಗುವ ಬವಣೆ ತಪ್ಪಿದಂತಾಗಿದೆ.