ಶಿರಸಿ: ಎಂಇಎಸ್ ನ ಎಂಎಂ ಕಲಾ ಮತ್ತು ವಿಜ್ಞಾನ ಮಹಾ ವಿದ್ಯಾಲಯದ ಗಣಿತಶಾಸ್ತ್ರ ಸ್ನಾತಕೋತ್ತರ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವು ವಿದ್ಯಾರ್ಥಿ, ಉಪನ್ಯಾಸಕರ ಭಾವ,ಬಾಂಧವ್ಯದ ಸಮ್ಮಿಳಿತಕ್ಕೆ ಸಾಕ್ಷಿಯಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ಟಿ ಎಸ್ ಹಳೆಮನೆ ಈ ವರ್ಷ ನಮ್ಮ ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೂ ಉದ್ಯೋಗ ದೊರಕಿರುವುದು ಖುಷಿಯ ಸಂಗತಿ. ನಮ್ಮ ಮಹಾವಿದ್ಯಾಲಯದ ಮೂಲ ಆಶಯವೇ ಉತ್ತಮವಾದಂತಹ ಶಿಕ್ಷಣವನ್ನ ಒದಗಿಸುವುದಲ್ಲದೆ ಕೌಶಲ್ಯ ಅಭಿವೃದ್ಧಿ ಪಡಿಸುವುದಾಗಿದೆ. ಈ ನಿಟ್ಟಿನಲ್ಲಿ ಎಂಇಎಸ್ ಸಂಸ್ಥೆ ಕಾರ್ಯಪ್ರವೃತ್ತವಾಗಿದ್ದು ಸ್ಕಿಲ್ ಲ್ಯಾಬ್ ಅನ್ನು ಸ್ಥಾಪಿಸಿದೆ. ಇದರ ಉಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಕೌಶಲ್ಯ ಇಂದಿನ ಪ್ರಮುಖ ಆದ್ಯತೆಯಾಗಿದೆ. ನಿಮ್ಮ ಮುಂದಿನ ಜೀವನ ಉತ್ತಮವಾಗಿರಲಿ ಎಂದು ಹಾರೈಸುತ್ತೇನೆ ಎಂದರು.
ಪ್ರೊ. ಮಹಿಮಾ ಗಾಯತ್ರಿ ಮಾತನಾಡಿ, ಈ ವರ್ಷದಲ್ಲಿ ಜನನ, ಮರಣ ಎರಡನ್ನೂ ಕಂಡಿದ್ದೇನೆ. ಈ ಎರಡು ಸಂದರ್ಭದಲ್ಲೂ ನೀವು ಜೊತೆ ನಿಂತಿದ್ದೀರಿ. ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಪಾತ್ರ ನಿರ್ವಹಿಸಿದ್ದೀರಿ ಎನ್ನುತ್ತಾ ತಮ್ಮ ನೆನಪುಗಳನ್ನು ಹಂಚಿಕೊಂಡರು.
ಸಂಗೀತ ವಿಭಾಗದ ಮುಖ್ಯಸ್ಥ ಕೆ.ಜಿ.ಭಟ್ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ವಿದ್ಯಾರ್ಥಿ ಪ್ರಭು ಮಾತನಾಡಿ, ಪಿಯುಸಿಯಿಂದ ಎಂಇಎಸ್ ಸಂಸ್ಥೆಯ ವಿದ್ಯಾರ್ಥಿಯಾಗಿದ್ದು,ಈ ವರ್ಷ ಸಂಸ್ಥೆಯ ಜೊತೆಗಿನ ಪ್ರಯಾಣ ಮುಗಿಯುತ್ತಿದೆ.ಇಷ್ಟು ವರ್ಷ ಪ್ರತಿ ಹೆಜ್ಜೆಯಲ್ಲೂ ಜೊತೆ ನಿಂತ ಎಲ್ಲರಿಗೂ ಧನ್ಯವಾದ ಎಂದು ತಮ್ಮ ನುಡಿಗಳನ್ನಾಡಿದರು.
ಇನ್ನೋರ್ವ ವಿದ್ಯಾರ್ಥಿನಿ ಛಾಯಾ ಮಾತನಾಡಿ, ಬೇರೆ ಊರಿನಿಂದ ಬಂದು, ಎರಡು ವರ್ಷದಿಂದ ಇಲ್ಲಿ ಓದುತ್ತಿದ್ದೇವೆ.ಒಂದು ದಿನವೂ ಬೇರೆ ಜಾಗ,ಬೇರೆ ಜನ ಎಂಬ ಭಾವನೆ ಬರದಂತೆ ಎಲ್ಲರೂ ಪ್ರೀತಿ,ಕಾಳಜಿ,ಪ್ರೋತ್ಸಾಹ ನೀಡಿದ್ದಾರೆ. ಪ್ರೊ.ಮಹಿಮಾ ತೋರಿದ ಕಾಳಜಿಗೆ ತಾಯಿ ಸ್ಥಾನವನ್ನೇ ನೀಡಿದ್ದೇವೆ ಎಂದು ಹೇಳಿದರು. ಪ್ರೊ.ಮಾನಸಾ ತಮ್ಮ ವಿದ್ಯಾರ್ಥಿಗಳಿಗಾಗಿ ಹಾಡಿದ ಹಾಡು ಪ್ರತಿಯೊಬ್ಬರ ಕಣ್ಣಂಚನ್ನೂ ತೇವವಾಗಿಸಿತು.
ಈ ಸಂದರ್ಭದಲ್ಲಿ ಸಂಚಾಲಕ ಎಂ ಎಸ್ ನರೇಂದ್ರ ,ಪ್ರೊ ಗೋಪಾಲಕೃಷ್ಣ ಹೆಗಡೆ, ಪ್ರೊ ಮಹಿಮಾ ಗಾಯತ್ರಿ, ಪ್ರೊ ಅನುಷ ನಾಯಕ್, ಪ್ರೊ ಮಾನಸ ಹೆಗಡೆ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ತಮ್ಮ ನೆಚ್ಚಿನ ಗುರುವೃಂದಕ್ಕೆ ವಿದ್ಯಾರ್ಥಿಗಳು ನೆನಪಿನ ಕಾಣಿಕೆ ನೀಡಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಿಯಾಂಕಾ ಸ್ವಾಗತಿಸಿದರೆ, ಮಿಥುನ್ ಅಚ್ಚುಕಟ್ಟಾಗಿ ನಿರ್ವಹಿಸಿದರು.ಸುಷ್ಮಾ ವಂದಿಸಿದರು.