ಯಲ್ಲಾಪುರ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಆನಗೋಡಿನ ಸಮೂಹ ಸಂಪನ್ಮೂಲ ಕೇಂದ್ರ ಹಾಗೂ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಇವರ ಆಶ್ರಯದಲ್ಲಿ ಆನಗೋಡ ಮತ್ತು ದೇಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಶಾಲಾ ಮಕ್ಕಳ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಶೀಲ್ದಾರ ಶ್ರೀಕೃಷ್ಣ ಕಾಮ್ಕರ ಮಾತನಾಡಿ, ಪ್ರತಿಭಾ ಕಾರಂಜಿ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಕಲ್ಪಿಸಿದೆ. ಮಕ್ಕಳು ಸ್ಪರ್ಧಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಸಾಂಸ್ಕೃತಿಕ ಮನೋಭಾವನೆ ವ್ಯಕ್ತಿಯ ವ್ಯಕ್ತಿತ್ವದ ನಿರ್ಮಾಣಕ್ಕೆ ಸಹಕಾರಿ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ಮಾತನಾಡಿ, ಕೋವಿಡ್ ಕಾರಣಾಂತರದಿಂದಾಗಿ ಎರಡು ವರ್ಷ ಯಾವುದೇ ಸ್ಪರ್ಧಾ ಕಾರ್ಯಕ್ರಮನಡೆದಿರಲಿಲ್ಲ. ಮಕ್ಕಳಲ್ಲಿ ಬೌದ್ಧಿಕ, ಸಾಂಸ್ಕೃತಿಕ ಮನೋಲ್ಲಾಸಕ್ಕೆ ತೊಂದರೆಯಾಗಿತ್ತು. ಈ ಪ್ರತಿಭಾ ಕಾರಂಜಿಯ ಮೂಲಕ ಮಕ್ಕಳಲ್ಲಿ ಸ್ಪರ್ಧಾ ಮನೋಭಾವನೆ ಜೊತೆಗೆ ಸಮುದಾಯ ಶಾಲಾ ಚಟುವಟಿಕೆಗಳಲ್ಲಿ ಭಾಗವಹಿಸಲು ವೇದಿಕೆಯಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಮುಖ್ಯಮಂತ್ರಿಗಳಿಂದ ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತರಾದ ತಹಶೀಲ್ದಾರ ಶ್ರೀಕೃಷ್ಣ ಕಾಮ್ಕರ್, ಯಲ್ಲಾಪುರ ಹಾಗೂ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸುಧಾಕರ್ ಗಣಪತಿ ನಾಯಕ್ ಹಾಗೂ ಕಟ್ಟಿಗೆ ಶಾಲೆಯ ಶಿಕ್ಷಕ ಗಣಪತಿ ಭಟ್ ದೆಹಳ್ಳಿ ಶಾಲೆಯ ಶಿಕ್ಷ ಚಂದ್ರಶೇಖರ್ ನಾಯಕ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ನಾಗೇಂದ್ರ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಆನಗೋಡ ಗ್ರಾ.ಪಂ ಅಧ್ಯಕ್ಷ ಪರಮೇಶ್ವರ್ ಗಾಂವ್ಕರ್, ಉಪಾಧ್ಯಕ್ಷೆ ಭಾರತಿ ನಾಯ್ಕ, ಬಿಆರ್‌ಸಿ ಸಂಯೋಜಕ ಶ್ರೀರಾಮ್ ಹೆಗಡೆ, ರಾಜ್ಯ ಮಟ್ಟದ ಆದರ್ಶ ಶಿಕ್ಷಕ ಸುಧಾಕರ ನಾಯಕ ವೇದಿಕೆ ಮೇಲಿದ್ದರು. ಪ್ರಾರಂಭದಲ್ಲಿ ಸಿಆರ್ ಪಿ ಸಂಜೀವಕುಮಾರ್ ಹೊಸ್ಕೇರಿ ಸ್ವಾಗತಿಸಿದರು. ಶಿಕ್ಷಕಿ ಸವಿತಾ ಹೆಗಡೆ ವಂದಿಸಿದರು, ಶಿಕ್ಷಕ ಮಾರುತಿ ಆಚಾರಿ ನಿರ್ವಹಿಸಿದರು.