ಹೊನ್ನಾವರ: ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಹಾಗೂ ಶಿರೂರು ಟೋಲ್‌ಗೇಟ್ ಬಳಿ ಸಂಭವಿಸಿದ ಅಂಬ್ಯುಲೆನ್ಸ್ ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ ತಲಾ 30ಲಕ್ಷ ಪರಿಹಾರಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಶನಿವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ಪಟ್ಟಣ ಪಂಚಾಯಿತಿ ಆವರಣದಲ್ಲಿ ಹಿರಿಯ ವಕೀಲ ಡಿ.ಎ.ಕಾಮತ್ ಅವರು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಹೋರಾಟಕ್ಕೆ ಚಾಲನೆ ನೀಡಿದರು. ಈ ವೇಳೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕೆ ಬೇಕು ಎಂಬ ಘೋಷಣೆ ಮೊಳಗಿತು. ಪ್ರತಿಭಟನಾಕಾರರು ತಹಶೀಲ್ದಾರ್ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಿದರು.
ಸಾಮಾಜಿಕ ಹೋರಾಟಗಾರ ಆರ್.ಜಿ.ನಾಯ್ಕ, ಇದು ನಮ್ಮ ಬದುಕಿಗಾಗಿ, ನಮ್ಮ ಮುಂದಿನ ಪೀಳಿಗೆಗಾಗಿ ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಬೇಕು ಎಂಬ ಬಗ್ಗೆ ನಡೆಸುತ್ತಿರುವ ಹೋರಾಟವಾಗಿದೆ. ವಿಶೇಷ ಆದ್ಯತೆ ನೀಡಿ ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಅತೀ ಶೀಘ್ರವಾಗಿ ನಿರ್ಮಾಣವಾಗಬೇಕು. ಇಲ್ಲಸಲ್ಲದ ಸಬೂಬು ಹೇಳುವ ಅಗತ್ಯವಿಲ್ಲ. ಜನಪ್ರತಿನಿಧಿಗಳು ನಮ್ಮ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದರು.
ಪಕ್ಷಾತೀತವಾಗಿ, ಜಾತ್ಯಾತೀತವಾಗಿ ನಾವು ನಿಮ್ಮನ್ನು ಕೇಳಿಕೊಳ್ಳುತ್ತಿದ್ದೇವೆ. ಶಾಸಕರು, ಸಚಿವರು, ಮಂತ್ರಿಗಳು ಇನ್ನಾದರೂ ಜನರ ಜೀವ ಉಳಿಸಲು ಮುಂದೆ ಬನ್ನಿ. ಒಂದಾನು ವೇಳೆ ಹೋರಾಟಕ್ಕೆ ಸ್ಪಂದಿಸದೇ ಇದ್ದಲ್ಲಿ ಮುಂದಿನ ಸಾರ್ವತ್ರಿಕ ಚುನಾವಣೆಗೆ ಬಹಿಷ್ಕಾರ ಹಾಕುವುದು ಶತಸಿದ್ಧ. ನಾವು ಭಿಕ್ಷೆ ಬೇಡುತ್ತಿಲ್ಲ. ಇದು ನಮ್ಮ ಹಕ್ಕು, ನಮ್ಮ ಹಕ್ಕನ್ನು ನಮಗೆ ಕೊಡಿ. ಐಆರ್‌ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿಯಿಂದಲೂ ಜನ ತಮ್ಮ ಪ್ರಾಣ ಕಳೆದುಕೊಳ್ಳುತ್ತಿರುವುದು ದುರಂತ ಎಂದು ಕಿಡಿ ಕಾರಿದರು.
ಸಂಘಟನೆಯ ಪ್ರಮುಖ ರಾಜು ಮಾಸ್ತಿಹಳ್ಳ ಮಾತನಾಡಿ, ಸ್ವಾತಂತ್ರ‍್ಯ ಸಿಕ್ಕಿ ಇಷ್ಟು ವರ್ಷವಾದರೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂಬ ಬಗ್ಗೆ ಹೋರಾಟ ನಡೆಸುತ್ತಿರುವುದು ನಮ್ಮ ದೌರ್ಭಾಗ್ಯವಾಗಿದೆ. ಬೇಡಿಕೆ ಈಡೇರದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಚುನಾವಣೆ ಸಂದರ್ಭದಲ್ಲಿ ಮತಯಾಚನೆಗೆ ಬಂದಾಗ ಪ್ರತೀ ಮಹಿಳೆಯರ ಕೈಯಲ್ಲಿ ಪೊರಕೆ ಇರುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಶಿವಾನಂದ ಹೆಗಡೆ ಕಡತೋಕಾ, ರತ್ನಾಕರ ನಾಯ್ಕ, ಜಗದೀಪ ತೆಂಗೇರಿ, ಪುಷ್ಪಾ ನಾಯ್ಕ ಸೇರಿದಂತೆ ವಿವಿಧ ಸಂಘಟನೆಯ ಪ್ರಮುಖರು ಹಾಜರಿದ್ದರು.
ವೀರವಿನಯ ನಮ್ಮಲ್ಲಿ ಬರಬೇಕು. ನಾವು ದೀರ್ಘ ನಿದ್ರೆಯಲ್ಲಿದ್ದೇವೆ. ಜನಪ್ರತಿನಿಧಿಗಳು ನಮ್ಮ ಸೇವಕರು. ನಮ್ಮದು ನರಿಯ ಕೂಗು ಆಗಬಾರದು. ಸಿಂಹ ಘರ್ಜನೆ ಆಗಬೇಕು. ಪ್ರತಿಯೊಬ್ಬನ ಜೀವಕ್ಕೂ ಬೆಲೆಯಿದೆ. ಕೆಲಸ ಪೂರ್ಣಗೊಳ್ಳುವವರೆಗೂ ಹೋರಾಟ ನಿಲ್ಲಬಾರದು.
ಡಾ.ಎನ್.ಆರ್.ನಾಯಕ, ಹಿರಿಯ ಜಾನಪದ ವಿದ್ವಾಂಸ
ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ವಾಣಿಜ್ಯ ಬಂದರು ನಿರ್ಮಾಣ ಮಾಡಲು ಸರ್ಕಾರಕ್ಕೆ ಹಣವಿದೆ. ಕೇವಲ ೧೫೦ ಕೋಟಿ ರೂ. ವ್ಯಯಿಸಿ ಜಿಲ್ಲೆಗೊಂದು ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ಯೋಗ್ಯತೆ ಇಲ್ಲವೆ?
ಸೂರಜ್ ನಾಯ್ಕ ಸೋನಿ, ಜೆಡಿಎಸ್ ಮುಖಂಡ