ಶಿರಸಿ: ಪ್ರಕೃತಿ ಎದುರು ಮಾನವ ಕ್ಷಣ ಮಾತ್ರ. ಪ್ರಕೃತಿ ಯ ಎದುರು ಯಾರ ಆಟವು ನಡೆಯುವುದಿಲ್ಲ. ಆದರೇ ಇಂತಹ ಸಂದರ್ಭಗಳಲ್ಲಿ ನಾವು ಹೇಗೆ ವಿಪತ್ತನ್ನು ತಡೆಯಬಹುದು ಎಂಬುದನ್ನು ತಿಳಿಸಿ ಕಾರ್ಯೋನ್ಮುಖವಾಗಿ ಕಾರ್ಯನಿರ್ವಹಿಸಲು ಸ್ವಯಂಸೇವಕರನ್ನು ನೇಮಿಸಿ ಅವರಿಂದ ಸಹಾಯ ಮಾಡುವ ಕಾಯಕಕ್ಕಾಗಿಯೇ ಈ ವಿಪತ್ತು ಮಿತ್ರ ಯೋಜನೆ ಜಾರಿಗೊಳಿಸಿದೆ ಎಂದು ಉಪವಿಭಾಗಾಧಿಕಾರಿ ದೇವರಾಜ ಹೇಳಿದರು.
ಅವರು ಇಲ್ಲಿನ ಅರಣ್ಯ ಮಹಾವಿದ್ಯಾಲಯದಲ್ಲಿ ವಿಪತ್ತು ಮಿತ್ರ ಯೋಜನೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂದು ಪ್ರಕೃತಿ ವಿಕೋಪ ಅನ್ನುವುದು ಯಾರನ್ನು ಕೇಳಿ ಬರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಒಂದು ನಿಮಿಷವು ಅತ್ಯಂತ ಅಮೂಲ್ಯವಾಗಿದ್ದು, ಸ್ಥಳೀಯರು ತಕ್ಷಣ ಕಾರ್ಯೊನ್ಮುಖವಾದರೇ ಹೆಚ್ಚಿನ ಅನಾಹುತ ತಪ್ಪಿಸಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿಯೇ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ಈ ವಿಪತ್ತು ಮಿತ್ರ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಿ.ಎಸ್.ಪಿ. ರವಿ ಡಿ. ನಾಯ್ಕ ಮಾತನಾಡಿ ಯಾವುದೇ ಸಂದರ್ಭದಲ್ಲಿ ತಕ್ಷಣವೇ ಸ್ಪಂದಿಸುವ ಕಾರ್ಯಕ್ಕಾಗಿಯೇ ಇಂತಹ ಒಂದು ಉತ್ತಮ ಕಾರ್ಯಕ್ರಮ ಅನೂಕುಲವಾಗುತ್ತದೆ. ಇದರಿಂದ ಅಪಾರ ಹಾನಿ ಸಂಭವಿಸುವುದು ತಪ್ಪುತ್ತದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಅಗ್ನಿಶಾಮಕ ಜಿಲ್ಲಾ ಅಧಿಕಾರಿ ಮಂಜುನಾಥ ಸಾಲಿ ಕಾರವಾರ, ಮಾತನಾಡಿ ಎಲ್ಲೆ ವಿಪತ್ತು ನಡೆದರು ತಕ್ಷಣವೇ ಅಲ್ಲಿನ ಸ್ಥಳೀಯ ಜನರೇ ವಿಪತ್ತಿಗೆ ಸ್ಪಂದಿಸಿದರೇ ಅದೇಷ್ಟೋ ಜೀವ ಉಳಿಯಲು ಸಾಧ್ಯವಾಗುತ್ತದೆ. ಅದಕ್ಕಾಗಿ ಕೇಂದ್ರ ಸರ್ಕಾರ ವಿಪತ್ತು ಮಿತ್ರ ಯೋಜನೆ ಜಾರಿಗೆ ಗೊಳಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯಲ್ಲಾಪುರ ಅಗ್ನಿಶಾಮಕ ಠಾಣಾಧಿಕಾರಿ ಶಂಕರ ಅಂಗಡಿ, ಶಿರಸಿ ಸಹಾಯಕ ಠಾಣಾಧಿಕಾರಿ ಲಂಬೋದರ ಪಟಗಾರ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಈ ತರಬೇತಿಯು ಸೋಮವಾರದಿಂದ 12 ದಿನ ನಗರದ ಅರಣ್ಯ ಮಹಾವಿದ್ಯಾಲಯದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ನಾಗರಾಜ ನಿರೂಪಿಸಿದರು.