ಯಲ್ಲಾಪುರ: ದೇಶಕ್ಕೆ ವಿದ್ಯುತ್ ನೀಡಲು ತ್ಯಾಗ ಮಾಡಿದ ಉತ್ತರ ಕನ್ನಡದ ಜಿಲ್ಲೆಯ ಜನರಿಗೆ ಗುಣಮಟ್ಟದ ವಿದ್ಯುತ್ ಕೊಡುವಲ್ಲಿ ತಾರತಮ್ಯ ಆಗಬಾರದು ಎಂದು ಹೆಸ್ಕಾಂ ಅಧ್ಯಕ್ಷ ಸೈಯ್ಯದ್ ಅಜ್ಜಂಪೀರ್ ಖಾದ್ರಿ ಹೇಳಿದರು.
ಅವರು ಪಟ್ಟಣದ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಆವಾರದಲ್ಲಿ ಇ-ಸ್ಟಾಂಪ್ ಹಾಗೂ ಏಕರೂಪ ದರಪಟ್ಟಿ ಬಿಡುಗಡೆಗೊಳಿಸಿ, ಸಂಘದಿಂದ ನೀಡಿದ ನಾಗರಿಕ ಸನ್ಮಾನ ಸ್ವೀಕರಿಸಿ, ಮಾತನಾಡಿದರು. ಎಲ್ಲ ಪವರ್ ಮೆನ್, ಎಸ್ ಒ, ಎಇಇ ಅಧಿಕಾರಿಗಳು ಒಟ್ಟಾಗಿ ದುಡಿದರೆ ಗುಣಮಟ್ಟದ ಕೆಲಸ ಮಾಡಲು ಸಾಧ್ಯವಾಗುತ್ತದೆ. ಪವರ್ ಮೆನ್ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಸಲುವಾಗಿ ಸರ್ಕಾರದ ಗಮನ ಸೆಳೆಯಲಾಗಿದೆ ಎಂದರು. ಜಿಲ್ಲೆಗೆ 24 ಗಂಟೆ ವಿದ್ಯುತ್ ಕೊಡುತ್ತೇವೆ. ಜಿಲ್ಲೆಯ ಎಲ್ಲ 33 ಕೆವಿ ಸ್ಟೇಶನ್ ಅಪಗ್ರೇಡ್ ಮಾಡಲಿದ್ದೇವೆ ಎಂದರು.
ಸಂಘದ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಅಧ್ಯಕ್ಷತೆ ವಹಿಸಿದ್ದರು. 2025-26 ನೇ ಸಾಲಿನಲ್ಲಿ ಏಕರೂಪ ದರಪಟ್ಟಿಯನ್ನು ವಿದ್ಯುತ್ ಪರಿವೀಕ್ಷಕ ವಿಶ್ವನಾಥ ಅಂಗಡಿ ಬಿಡುಗಡೆಗೊಳಿಸಿದರು. ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ಹೆಸ್ಕಾಂ ಎಇಇ ರಮಾಕಾಂತ ನಾಯ್ಕ, ಸಾಮಾಜಿಕ ಕಾರ್ಯಕರ್ತ ಎನ್.ಕೆ.ಭಟ್ಟ, ಸಂಘದ ಮಾರ್ಗದರ್ಶಿ ಸಮಿತಿ ಸದಸ್ಯ ತುಶಾರ ಬದ್ದಿ, ಗುತ್ತಿಗೆದಾರ ವೀರಸ್ವಾಮಿ ಮಠಪತಿ ಇತರರಿದ್ದರು. ಶಾಂತಾರಾಮ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಬಲ್ ನಾಗೇಶ ನಿರ್ವಹಿಸಿದರು.