ಅಂಕೋಲಾ: ಯುಗಾದಿ ಉತ್ಸವ ಮತ್ತು ಆಲೆಮನೆ ಹಬ್ಬ ಸಮಿತಿ, ಶ್ರೀದೇವಿ ಮತ್ತು ಗೋಪಾಲಕೃಷ್ಣ ದೇವಸ್ಥಾನ ಕಮಿಟಿ, ಗೋಪಾಲಕೃಷ್ಣ ಯುವಕ ಮಂಡಲ, ಶಾರದಾಂಬಾ ಯುವತಿ ಮಂಡಲ ಇವರ ಸಂಯುಕ್ತಾಶ್ರಯದಲ್ಲಿ ಕಲ್ಲೇಶ್ವರ ದೇವಸ್ಥಾನದ ಆವಾರದಲ್ಲಿ ಯುಗಾದಿ ಉತ್ಸವ ಹಾಗೂ ಆಲೆಮನೆ ಹಬ್ಬವನ್ನು ಅತ್ಯಂತ ಯಶಸ್ವಿಯಾಗಿ, ಅಚ್ಚುಕಟ್ಟಾಗಿ ನಡೆಸಲಾಯಿತು.
ವೇ.ಮೂ ಮಂಜುನಾಥ ಗಾಂವಕರ್ ಪಂಚಾಂಗ ಪಠಣೆ ಮಾಡಿದರು. ದತ್ತಾತ್ರೇಯ ಭಟ್ಟ ಬೌದ್ಧಿಕ, ಲಲಿತಾ ಕೂರ್ಸೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಂತರ ಎಲ್ಲರಿಗೂ ಬೇವು ಬೆಲ್ಲ ವಿತರಿಸಿದರು.
ಸಭಾ ಕಾರ್ಯಕ್ರಮ ಮುಗಿದ ಬಳಿಕ ಮಹಿಳೆಯರಿಂದ ಭಜನಾ ಕಾರ್ಯಕ್ರಮ, ಸಂಗೀತ, ಭಜನೆ, ಭರತನಾಟ್ಯ ಕಾರ್ಯಕ್ರಮಗಳು ನಡೆದವು. ಇದಕ್ಕೂ ಪೂರ್ವ ರಾಮನಗುಳಿ ಶ್ರೀರಾಮಪಾದುಕಾ ದೇವಸ್ಥಾನದಿಂದ ಕಲ್ಲೇಶ್ವರ ಶ್ರೀ ಗೋಪಾಲಕೃಷ್ಣ ದೇವಸ್ಥಾನದವರೆಗೆ ಕಾಲ್ನಡಿಗೆಯ ಮೂಲಕ ಶೋಭಾಯಾತ್ರೆ ನಡೆಸಲಾಯಿತು. ಸತತ 5 ನೇ ವರ್ಷ ಆಲೆಮನೆ ಹಬ್ಬವನ್ನು ನಡೆಸಿಕೊಂಡು ಬರಲಾಗುತ್ತಿದ್ದು ಸ್ಥಳದಲ್ಲಿ ಉಚಿತವಾಗಿ ಕುಡಿಯಲು ಕಬ್ಬಿನ ಹಾಲು, ಮಿರ್ಚಿ, ಮಂಡಕ್ಕಿಯನ್ನು ನೀಡಲಾಯಿತು. ಕಬ್ಬಿನ ಹಾಲಿನ ಬಾಟಲ್‌ಗಳು, ತೋಡೆದೇವು, ಬೆಲ್ಲ ಮಾರಾಟಕ್ಕೆ ಲಭ್ಯವಿದ್ದವು. ಊರವರ ಸಹಕಾರದಿಂದ ಯಶಸ್ವಿಯಾಗಿ ಆಲೆಮನೆ ಹಬ್ಬವನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ಪ್ರಕಾಶ ಹೆಗಡೆ ಕಲ್ಲೇಶ್ವರ ಹೇಳಿದರು.