ದಾಂಡೇಲಿಗೆ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಅಗತ್ಯ ಕ್ರಮ : ರಾಮಲಿಂಗಾ ರೆಡ್ಡಿ
ದಾಂಡೇಲಿ : ಸಾರಿಗೆ ಇಲಾಖೆ ಹಂತ ಹಂತವಾಗಿ ಪ್ರಗತಿಯೆಡೆಗೆ ಸಾಗುತ್ತಿದೆ. ಸಾರಿಗೆ ಸಂಸ್ಥೆಗೆ 10,000 ಚಾಲಕ / ನಿರ್ವಾಹಕರ ನೇಮಕಾತಿಯನ್ನು ಮಾಡಲಾಗಿದೆ. ದಾಂಡೇಲಿಗೆ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೂ ಅಗತ್ಯ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಹೇಳಿದರು.
ಅವರು ಶುಕ್ರವಾರ ನಗರದ ಅಂಬೇವಾಡಿಯಲ್ಲಿ ರೂ. 5 ಕೋಟಿ ಮೊತ್ತದಲ್ಲಿ ನೂತನವಾಗಿ ನಿರ್ಮಾಣಗೊಂಡ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು. ರಾಜ್ಯದಲ್ಲಿ 32 ಹೊಸದಾಗಿ ಸ್ವಯಂ ಚಾಲಿತ ವಾಹನ ಪರೀಕ್ಷಾ ಕೇಂದ್ರಗಳ ನಿರ್ಮಾಣವಾಗುತ್ತಿದೆ. ಶಕ್ತಿ ಯೋಜನೆ ಜಾರಿಯಾದ ನಂತರ ಪ್ರತಿದಿನ ರಾಜ್ಯದ ಸಾರಿಗೆ ಬಸ್ ನಲ್ಲಿ ಒಂದು ಕೋಟಿಗೂ ಅಧಿಕ ಜನ ಪ್ರಯಾಣಿಸುತ್ತಿದ್ದಾರೆ. ಶಕ್ತಿ ಯೋಜನೆ ಜಾರಿಯಾದ ನಂತರದ ಒಂದು ಮುಕ್ಕಾಲು ವರ್ಷದಲ್ಲಿ ರಾಜ್ಯದಲ್ಲಿ ಈವರೆಗೆ 425 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. 10 ಪಲ್ಲಕ್ಕಿ ಬಸ್ ಸೇರಿದಂತೆ 30 ಬಸ್ ಗಳನ್ನು ಈಗಾಗಲೇ ಖರೀದಿಸಲಾಗಿದೆ. ಒಟ್ಟು 2,000 ಚಾಲಕ ಮತ್ತು ನಿರ್ವಾಹಕರ ನಿಯೋಜನೆಗೆ ಅನುಮತಿ ದೊರೆತಿದ್ದು, ಈ ಪೈಕಿ 1000 ಚಾಲಕ /ನಿರ್ವಾಹಕರನ್ನು ಈಗಾಗಲೇ ಆಯ್ಕೆ ಮಾಡಿದ್ದು, ಮೇ ತಿಂಗಳಲ್ಲಿ ಸೇವೆಗೆ ಸೇರ್ಪಡೆಯಾಗಲಿದ್ದಾರೆ. 2016 ರಿಂದ ಚಾಲಕ/ ನಿರ್ವಾಹಕರ ನೇಮಕಾತಿಯಾಗಿರಲಿಲ್ಲ. ನಮ್ಮ ಸರಕಾರ ಬಂದ ಮೇಲೆ 9000 ಸಿಬ್ಬಂದಿಗಳನ್ನು ನೇಮಕಗೊಳಿಸಲಾಗಿದೆ. ಇನ್ನುಳಿದಂತೆ ಅನುಕಂಪದ ಆಧಾರದಡಿ 1000 ಸಿಬ್ಬಂದಿಗಳನ್ನು ನೇಮಕಾತಿ ಮಾಡಲಾಗಿದೆ. 2000 ಸಾರಿಗೆ ಬಸ್ ಖರೀದಿಸಲು ಸರಕಾರ ಅನುಮತಿಯನ್ನು ನೀಡಿ, 134 ಕೋಟಿ ರೂಪಾಯಿ ಹಣವನ್ನು ಮೊದಲ ಹಂತದಲ್ಲಿ ನೀಡಿದೆ. ಆ ಹಣದಲ್ಲಿ 300 ಬಸ್ ಗಳನ್ನು ಖರೀದಿಸಿ ಆ 300 ಬಸ್ ಗಳನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ನೀಡಲಾಗುತ್ತದೆ. ಉಳಿದ 1,700 ಬಸ್ ಗಳನ್ನು ಮುಂದಿನ ಹಂತಗಳಲ್ಲಿ ಖರೀದಿಸಿ ಆಯಾಯ ನಿಗಮಳಿಗೆ ಹಂಚಿಕೆ ಮಾಡಲಾಗುತ್ತದೆ ಎಂದರು. ರಾಜ್ಯದ ಹಿರಿಯ ಶಾಸಕರಾದ ಆರ್.ವಿ.ದೇಶಪಾಂಡೆ ಅವರು ದಾಂಡೇಲಿಗೆ ನೂತನ ಬಸ್ ನಿಲ್ದಾಣ ನಿರ್ಮಿಸಲು ಬೇಡಿಕೆಯಿಟ್ಟಿದ್ದಾರೆ. ಈ ಬೇಡಿಕೆಯ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಆದಷ್ಟು ಶೀಘ್ರ ಅಗತ್ಯ ಕ್ರಮವನ್ನು ಕೈಗೊಳ್ಳಲಾಗುವುದು ಎಂದರು. ಅದೇ ರೀತಿ ದೇಶಪಾಂಡೆಯವರು ಕ್ಷೇತ್ರದ ದೇವಸ್ಥಾನಗಳ ಅಭಿವೃದ್ಧಿಗೆ 3 ಕೋಟಿ ಅನುದಾನವನ್ನು ಕೇಳಿದ್ದು, ಆ ಬಗ್ಗೆಯೂ ಅಗತ್ಯ ಕ್ರಮವನ್ನು ಕೈಗೊಳ್ಳುವುದಾಗಿ ಹೇಳಿದರು. ಕ್ಷೇತ್ರದ ಬಗ್ಗೆ ಹಾಗೂ ರಾಜ್ಯದ ಬಗ್ಗೆ ಆರ್.ವಿ. ದೇಶಪಾಂಡೆ ಅವರಿಗೆ ಇರುವ ಕಾಳಜಿ ಸ್ಮರಣೀಯವಾಗಿದೆ ಎಂದು ನೂತನ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಾರ್ಯಾಲಯವು ಈ ಭಾಗದ ಜನರಿಗೆ ಅನುಕೂಲಕರವಾಗಲಿ ಎಂದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಸಕರಾದ ಆರ್.ವಿ. ದೇಶಪಾಂಡೆ, ರಾಮಲಿಂಗಾ ರೆಡ್ಡಿ ಅವರು ಅತ್ಯುತ್ತಮ ಸಚಿವರಾಗಿ ಇಲಾಖೆಯನ್ನು ಸಮರ್ಥ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ನಮ್ಮ ಬೇಡಿಕೆಗಳಿಗೆ ಸಕಾಲದಲ್ಲಿ ಸ್ಪಂದಿಸುತ್ತಿದ್ದಾರೆ ಎಂದು ಹೇಳಿ ದಾಂಡೇಲಿಗೆ ಹೊಸ ಬಸ್ ನಿಲ್ದಾಣ ಮತ್ತು ಕ್ಷೇತ್ರದ ದೇವಸ್ಥಾನಗಳ ಅಭಿವೃದ್ಧಿಗೆ 3 ಕೋಟಿ ರೂಪಾಯಿ ಅನುದಾನವನ್ನು ನೀಡುವಂತೆ ವಿನಂತಿಸಿದರು.
ವೇದಿಕೆಯಲ್ಲಿ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇಲಾಖೆಯ ಆಯುಕ್ತರಾದ ಯೋಗೀಶ್.ಎ.ಎಂ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗ ಎಂ., ಅಪರ ಸಾರಿಗೆ ಆಯುಕ್ತರಾದ ಕೆ.ಟಿ.ಹಾಲಸ್ವಾಮಿ, ಜಂಟಿ ಸಾರಿಗೆ ಆಯುಕ್ತರಾದ ಎಂ.ಪಿ.ಓಂಕಾರೇಶ್ವರಿ, ಹುಬ್ಬಳ್ಳಿ ಸಾರಿಗೆ ಸಂಸ್ಥೆಯ ಮುಖ್ಯ ಕಾಮಗಾರಿ ಅಭಿಯಂತರ ದಿವಾಕರ ಯರಗೊಪ್ಪ, ನಗರಸಭೆಯ ಅಧ್ಯಕ್ಷರಾದ ಅಷ್ಪಾಕ್ ಶೇಖ, ಉಪಾಧ್ಯಕ್ಷೆ ಶಿಲ್ಪಾ ಕೋಡೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಧಾ ರಾಮಲಿಂಗ ಜಾಧವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೋಹನ ಹಲವಾಯಿ, ಡಿವೈಎಸ್ಪಿ ಶಿವಾನಂದ ಮದರಖಂಡಿ, ತಹಶೀಲ್ದಾರ್ ಶೈಲೇಶ್ ಪರಮಾನಂದ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಟಿ.ಸಿ.ಹಾದಿಮನಿ, ನಗರಸಭೆಯ ಪೌರಾಯಕ್ತರಾದ ವಿವೇಕ್ ಬನ್ನೆ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಾರಿಗೆ ಇಲಾಖೆಯ ವತಿಯಿಂದ ಗಣ್ಯರನ್ನು ಹಾಗೂ ಕಟ್ಟಡ ನಿರ್ಮಾಣದ ಗುತ್ತಿಗೆದಾರರನ್ನು ಸನ್ಮಾನಿಸಲಾಯಿತು. ಬಂಗೂರನಗರ ಸ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಗೂ ನಾಡಗೀತೆಯನ್ನು ಹಾಡಿದರು. ಜಂಟಿ ಸಾರಿಗೆ ಆಯುಕ್ತರಾದ ಎಂ.ಪಿ.ಓಂಕಾರೇಶ್ವರಿ ಅವರು ಸ್ವಾಗತಿಸಿದರು. ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಲ್ಲಿಕಾರ್ಜುನಪ್ಪ ಕಪ್ಪರದ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರದ ಎಆರ್‌ಟಿಓ ಕಚೇರಿಯ ಕಚೇರಿ ಅಧೀಕ್ಷಕರಾದ ಎಸ್.ಎಂ. ಖಾಜಿ ಅವರು ವಂದಿಸಿದರು. ಪತ್ರಕರ್ತ ಸಂದೇಶ ಎಸ್.ಜೈನ್ ಕಾರ್ಯಕ್ರಮವನ್ನು ನಿರೂಪಿಸಿದರು.