ಹೊನ್ನಾವರ : ಧರ್ಮಸ್ಥಳದ ನಿತ್ಯಾನಂದನಗರದ ಶ್ರೀರಾಮಕ್ಷೇತ್ರ ಮಹಾಸಂಸ್ಥಾನದಲ್ಲಿ ಮಾರ್ಚ್ ೩೦ ರಿಂದ ಏಪ್ರಿಲ್ ೬ ರವರೆಗೆ ೬೫ ನೇ ವರ್ಷದ ಶ್ರೀರಾಮ ನಾಮ ಸಪ್ತಾಹ ಹಾಗೂ ಏಪ್ರಿಲ್ ೮ ರಂದು ಮಹಾ ಬ್ರಹ್ಮರಥೋತ್ಸವ ನಡೆಯಲಿದ್ದು ಸಪ್ತಾಹದಲ್ಲಿ ಹೊನ್ನಾವರ ತಾಲೂಕಿನಿಂದ ನಾಮಧಾರಿ ಸಮಾಜದ ಭಕ್ತರು ವಿವಿಧ ತಂಡಗಳ ಮೂಲಕ ಭಜನಾ ಸೇವೆ ಗೈಯ್ಯುವರು ಎಂದು ಶ್ರೀರಾಮ ಕ್ಷೇತ್ರ ಸೇವಾ ಸಮಿತಿಯ ತಾಲೂಕಾಧ್ಯಕ್ಷ ವಾಮನ ನಾಯ್ಕ ತಿಳಿಸಿದರು.
ಪಟ್ಟಣದ ನಾಮಧಾರಿ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಶ್ರೀಮಠಾಧೀಶ ಮಹಾಮಂಡಲೇಶ್ವರ ೧೦೦೮ ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ತಾಲೂಕಿನ ಕರ್ಕಿ. ನವಿಲಗೋಣ, ಜಲವಳ್ಳಿ, ಮಂಕಿ ಮುಂತಾದ ಭಾಗಗಳಿಂದ ತಂಡಗಳು ಸಪ್ತಾಹದ ವಿವಿಧ ದಿನಗಳಲ್ಲಿ ಭಜನಾ ಸೇವೆ ನಡೆಸುವರು. ರಾಜ್ಯದ ಬೇರೆ ಬೇರೆ ಭಾಗಗಳಿಂದ ನಿತ್ಯ ಭಜನಾ ಸೇವೆ ನಡೆಯಲಿದೆ. ದೀಪದ ಸುತ್ತಲೂ ಅಹೋರಾತ್ರಿ ಶ್ರೀ ರಾಮ ಜಯರಾಮ ಜಯಜಯ ರಾಮ ಭಜನೆ ಮಾತ್ರ ನಡೆಯಲಿದೆ ಎಂದು ತಿಳಿಸಿದರು.
ಮಾರ್ಚ್ ೩೦ರಂದು ಶ್ರೀರಾಮ ತಾರಕಮಂತ್ರ ಸಪ್ತಾಹ ಹಾಗೂ ಜಾತ್ರೋತ್ಸವದ ಉದ್ಘಾಟನಾ ಸಮಾರಂಭ, ಮಾ.೩೧ರಂದು ಸದ್ಗುರು ಶ್ರೀ ನಿತ್ಯಾನಂದಸ್ವಾಮಿ, ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಶಿರಡಿ ಸಾಯಿಬಾಬಾ ಗುರುಗಳ ಉತ್ಸವ ಮೂರ್ತಿಯ ಬಲಿ ಉತ್ಸವ, ಎಪ್ರಿಲ್ ೧ರಂದು ಶ್ರೀರಾಮ ದೇವರ ರಜತ ಪಾಲಕಿ ಉತ್ಸವ, ಎ.೨ರಂದು ಶ್ರೀ ಅನ್ನಪೂರ್ಣೇಶ್ವರೀ ದೇವಿಯ ಬಲಿಉತ್ಸವ ಮತ್ತು ಪುಷ್ಪ ರಥೋತ್ಸವ, ಎ.೩ರಂದು ಶ್ರೀ ದುರ್ಗಾಪರಮೇಶ್ವರೀ ಮೂರ್ತಿ ಬಲಿಉತ್ಸವ ಮತ್ತು ಚಂದ್ರಮಂಡಲ ರಥೋತ್ಸವ, ಎ.೪ರಂದು ಶ್ರೀಗೋಪಾಲಕೃಷ್ಣ ದೇವರ ಬಲಿಉತ್ಸವ ಮತ್ತು ಬೆಳ್ಳಿರಥೋತ್ಸವ, ಎ.೫ರಂದು ಶ್ರೀ ದತ್ತಾತ್ರೆಯಮೂರ್ತಿ, ಶ್ರೀಆಂಜನೇಯ ಮೂರ್ತಿ ಬಲಿಉತ್ಸವ ಮತ್ತು ಶ್ರೀ ಹನುಮಾನ ರಥೋತ್ಸವ, ಎ.೬ರಂದು ಶ್ರೀರಾಮತಾರಕ ಮಂತ್ರಯಜ್ಞ ಸಂಪನ್ನ, ಶ್ರೀದೇವರ ಪಾಲಕಿ ಬಲಿಉತ್ಸವ, ರಾತ್ರಿ ನೇಮೋತ್ಸವ ರಾತ್ರಿ.೧೦ ಗಂಟೆಗೆ ಮಹಾ ಬ್ರಹ್ಮರಥೋತ್ಸವ ನಡೆಯಲಿದೆ.
ಎಪ್ರಿಲ್ ೮ರಂದು ಆದಿ ಪಜಿರಡ್ಕ ಶ್ರೀದೇವಲಿಂಗೇಶ್ವರ ದೇವಸ್ಥಾನದ ಜಾತ್ರಾಮಹೋತ್ಸವ ನಡೆಯಲಿದೆ ಎಂದು ತಿಳಿಸಿದರು.
ತಾಲೂಕಾ ಕಾರ್ಯದರ್ಶಿ ಟಿ.ಟಿ.ನಾಯ್ಕ ಸ್ವಾಗತಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಮಂಜುನಾಥ ನಾಯ್ಕ, ಆರ್.ಎಂ.ನಾಯ್ಕ, ರಾಮಪ್ಪ ನಾಯ್ಕ, ನೀಲಕಂಠ ನಾಯ್ಕ, ಪುಷ್ಪಾ ನಾಯ್ಕ, ಸೀತಾರಾಮ ನಾಯ್ಕ, ಎಸ್.ಕೆ.ನಾಯ್ಕ, ಚಂದ್ರಹಾಸ ನಾಯ್ಕ, ಸುಭಾಸ ನಾಯ್ಕ, ತುಕಾರಾಮ ನಾಯ್ಕ, ಲಂಬೋದರ ನಾಯ್ಕ, ಗೋವಿಂದ ನಾಯ್ಕ, ಗಣೇಶ ಜಿ.ನಾಯ್ಕ, ಮಾದೇವ ನಾಯ್ಕ, ನಾಗೇಶ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.