- ಸಂದೇಶ್ ಎಸ್.ಜೈನ್, ದಾಂಡೇಲಿ
ದಾಂಡೇಲಿ : ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತ ನಿಧಿ ಸ್ಥಾಪನೆ ಮಾಡಬೇಕೆಂಬುವುದು ನಗರದ ಜನತೆಯ ಬಹು ವರ್ಷಗಳ ಬೇಡಿಕೆಯಾಗಿತ್ತು. ಜನತೆಯ ಬಹು ವರ್ಷಗಳ ಬೇಡಿಕೆಗೆ ನಗರದ ಸಾರ್ವಜನಿಕ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯಲ್ಲಿ ರಕ್ತ ನಿಧಿ ಕೇಂದ್ರವನ್ನು ಸ್ಥಾಪಿಸಿ, ದಿನಾಂಕ : 29-10-2024 ರಂದು ಅದನ್ನು ಲೋಕಾರ್ಪಣೆಗೊಳಿಸಲಾಗಿತ್ತು.
ರಕ್ತ ನಿಧಿ ಕೇಂದ್ರಕ್ಕೆ ನಿಯಮಾವಳಿಯ ಪ್ರಕಾರ ಓರ್ವ ರಕ್ತ ಕೇಂದ್ರ ವೈದ್ಯಾಧಿಕಾರಿ, ಓರ್ವ ತಾಂತ್ರಿಕ ಮೇಲ್ವಿಚಾರಕ, ನಾಲ್ವರು ತಾಂತ್ರಿಕ ಸಿಬ್ಬಂದಿಗಳು, ಇಬ್ಬರು ಸ್ಟಾಪ್ ನರ್ಸ್ ಮತ್ತು ಓರ್ವ ಅಟೆಂಡರ್ ಇರಬೇಕು. ಇಷ್ಟು ಸಿಬ್ಬಂದಿಗಳಿದ್ದಲ್ಲಿ ಮಾತ್ರ ರಕ್ತ ನಿಧಿ ಕೇಂದ್ರವನ್ನು ಸ್ಥಾಪಿಸಲು ಪರವಾನಿಗೆಯನ್ನು ನೀಡಲಾಗುತ್ತದೆ. ನಿಯಮದಂತೆ ಸಿಬ್ಬಂದಿಗಳ ನಿಯೋಜನೆ ಆಗದೇ ಇದ್ದರೂ ರಕ್ತನಿಧಿ ಕೇಂದ್ರ ನಡೆಸಲು ಅನುಮತಿ ದೊರೆತಿದೆ. ರಕ್ತ ನಿಧಿ ಕೇಂದ್ರ ಪ್ರಾರಂಭವಾದಾಗಿನಿಂದ ಈವರೆಗೆ ಇಲ್ಲಿ ಒಟ್ಟು 226 ರಕ್ತದ ಯೂನಿಟ್ ಗಳು ಸಂಗ್ರಹವಾಗಿದೆ.
ಇಲ್ಲಿ ರಕ್ತ ನಿಧಿ ಕೇಂದ್ರ ಆರಂಭವಾದಾಗಿನಿಂದಲೂ ತಾಂತ್ರಿಕ ಮೇಲ್ವಿಚಾರಕರೊಬ್ಬರೇ ರಕ್ತ ನಿಧಿ ಕೇಂದ್ರವನ್ನು ನಿರ್ವಹಣೆ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ರಕ್ತದಾನಿಗಳು ರಕ್ತ ನೀಡುವ ಸಂದರ್ಭದಲ್ಲಿ ಅದರದ್ದೇ ಆದ ರೀತಿಯ ಪರೀಕ್ಷೆಗಳು ನಡೆಯಬೇಕಾಗಿರುವ ಹಿನ್ನಲೆಯಲ್ಲಿ ರಕ್ತ ನಿಧಿ ಕೇಂದ್ರಕ್ಕೆ ನಿಯಮದಂತೆ ಸಿಬ್ಬಂದಿಗಳ ನಿಯೋಜನೆ ಅತಿ ಅಗತ್ಯವಾಗಿಬೇಕಾಗಿದೆ. ಇಲ್ಲಿ ಸಿಬ್ಬಂದಿಗಳ ಕೊರತೆಯಿರುವುದರಿಂದ ಈಗಲೂ ಹೊರ ಜಿಲ್ಲೆಯ ರಕ್ತ ನಿಧಿ ಕೇಂದ್ರದವರು ಬಂದು ನಗರದಲ್ಲಿ ರಕ್ತದಾನ ಶಿಬಿರ ಮಾಡುವ ಸ್ಥಿತಿ ಇನ್ನೂ ಮುಂದುವರೆದಿದೆ.
ಸಿಬ್ಬಂದಿಗಳ ನಿಯೋಜನೆಗೆ ಸುಧೀರ ಶೆಟ್ಟಿ ಆಗ್ರಹ:
ದಾಂಡೇಲಿ ಹಾಗೂ ದಾಂಡೇಲಿಯ ಸುತ್ತಮುತ್ತಲ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೂಡಲೇ ರಕ್ತನಿಧಿ ಕೇಂದ್ರಕ್ಕೆ ನಿಯಮಾವಳಿಯ ಪ್ರಕಾರ ಸಿಬ್ಬಂದಿಗಳನ್ನು ನಿಯೋಜಿಸಬೇಕೆಂದು ರಕ್ತದಾನಿ ಹಾಗೂ ನಗರದ ಸೇವಾ ಸಂಕಲ್ಪ ತಂಡದ ರೂವಾರಿ ಸುಧೀರ ಶೆಟ್ಟಿ ಅವರು ಆಗ್ರಹಿಸಿದ್ದಾರೆ.