ಉಡುಪಿ: ಕಲ್ಯಾಣಪುರದಲ್ಲಿರುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪದವಿ ಪೂರ್ವ ಕಾಲೇಜಿನಲ್ಲಿ ಸ್ಪೂರ್ತಿಮಾತು ಸರಣಿ 10 ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಜೆಸಿಐ ತರಬೇತುದಾರರೂ ಖ್ಯಾತವ್ಯಾಗ್ಮಿಗಳಾಗಿರುವ ಕೆ. ರಾಜೇಂದ್ರ ಭಟ್ ಇವರು “ಕಲಿಯುವುದು ಒಂದು ಹಬ್ಬ ಸಂಭ್ರಮಿಸೋಣ” ಎಂಬ ಶೀರ್ಷಿಕೆಯಡಿಯಲ್ಲಿ ಉಪನ್ಯಾಸ ನೀಡಿದರು.
ಜಗತ್ತಿನಲ್ಲಿ ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ನಮ್ಮ ಇಚ್ಛಾಶಕ್ತಿಯೇ ಶ್ರೇಷ್ಠವಾದದ್ದು, ಅನೇಕ ಅದ್ಭುತಗಳು ಸೃಷ್ಟಿಯಾಗಿರುವುದು ಭಿನ್ನ ಯೋಚನೆ ಮತ್ತು ಯೋಜನೆಗಳಿಂದ ಆದ್ದರಿಂದ ಕಲಿಕೆ ಒಂದು ಸಂಭ್ರಮವಾಗಬೇಕು.ಒತ್ತಡ ಮುಕ್ತ ಕಲಿಕೆಯಿಂದ ಸಾಧನೆಯಾಗುತ್ತದೆ ಎಂದು.ಅನೇಕ ದೃಷ್ಟಾಂತಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬಿದರು. ನಮ್ಮ ಮೆದುಳಿನ ಶಕ್ತಿಯನ್ನು ದುರುಪಯೋಗಪಡಿಸಿಕೊಳ್ಳದೆ, ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಪ್ರಾಂಶುಪಾಲರಾದ ರಾಮಕೃಷ್ಣ ಹೆಗಡೆ ಸರ್ವರನ್ನು ಸ್ವಾಗತಿಸುವುದರ ಜೊತೆಗೆ ಪ್ರಾಸ್ತಾವಿಕ ನುಡಿಗಳಾಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದ, ವಸತಿ ನಿಲಯ ಪಾಲಕರು ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಆದರ್ಶ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಲ್ಯಾಣಪುರ ತ್ರಿಶಾ ಕಾಲೇಜ್ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಮಾತು ಕಾರ್ಯಕ್ರಮ
