Slide
Slide
Slide
previous arrow
next arrow

ಗೋವಾ ಗಡಿಯಲ್ಲಿ ಎಚ್ಚರಿಕೆ ವಹಿಸಿ: ಗೃಹ ಸಚಿವ ಡಾ.ಜಿ. ಪರಮೇಶ್ವರ್

300x250 AD

ಕಾರವಾರ: ಜಿಲ್ಲೆಯ ಗೋವಾ ಗಡಿ ಪ್ರದೇಶದ ಮೂಲಕ ರಾಜ್ಯಕ್ಕೆ ಮಾದಕ ವಸ್ತುಗಳ ಸಾಗಾಟ ನಡೆಯುವ ಬಗ್ಗೆ ಮತ್ತು ಅನಧಿಕೃತವಾಗಿ ಮದ್ಯ ಸಾಗಾಟವಾಗುವ ಬಗ್ಗೆ ಪರಿಶೀಲಿಸಿ, ಅತ್ಯಂತ ಕಟ್ಟಿನಿಟ್ಟಿನ ಪರಿಶೀಲನಾ ಕ್ರಮಗಳನ್ನು ಕೈಗೊಳ್ಳುವಂತೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸೂಚನೆ ನೀಡಿದರು.

ಅವರು ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನಡೆದ ಪೊಲೀಸ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಸಿ ಮಾತನಾಡಿದರು.
ರಾಜ್ಯ ಸರ್ಕಾರವು ರಾಜ್ಯದಲ್ಲಿ ಮಾದಕ ವಸ್ತುಗಳ ನಿರ್ಮೂಲನೆ ಕುರಿತು ಯುದ್ದ ಸಾರಿದ್ದು, ಗಡಿಯ ಮೂಲಕ ರಾಜ್ಯದೊಳಗೆ ಮಾದಕ ವಸ್ತುಗಳ ಸರಬರಾಜು ನಡೆಯದಂತೆ ಪೊಲೀಸ್ ಇಲಾಖೆ ಹೆಚ್ಚು ಜಾಗೃತವಾಗಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು. ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ಪೊಲೀಸ್ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ನಿರಂತರವಾಗಿ ಭೇಟಿ ಮಾಡಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳು ಪತ್ತೆಯಾದಲ್ಲಿ ಸಂಬಂಧಪಟ್ಟ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

300x250 AD

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೇದ 2.5 ವರ್ಷದಲ್ಲಿ ರಸ್ತೆ ಅಪಘಾತಗಳಿಂದ 589 ಜನ ಮರಣಹೊಂದಿದ್ದು, 3899 ಮಂದಿ ಗಾಯಾಳುಗಳಾಗಿದ್ದಾರೆ, ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದ್ದು, ಹೆದ್ದಾರಿಯಲ್ಲಿನ ಬ್ಲಾಕ್ ಸ್ಟಾಟ್ ಗಳಲ್ಲಿ ಅಗತ್ಯ ದುರಸ್ತಿಗಳನ್ನು ಮತ್ತು ಅಗತ್ಯವಿರುವಲ್ಲಿ ಸೂಚನಾ ಫಲಕಗಳನ್ನು ಅಳವಡಿಸುವ ಕಾರ್ಯಕ್ರಮವನ್ನು ಪೊಲೀಸ್ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದ ಮೂಲಕ ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಸೂಚಿಸಿದ ಸಚಿವರು, ಅಪಘಾತದಲ್ಲಿ ಮರಣ ಹೊಂದಿದವರ ಮತ್ತು ಗಾಯಗೊಂಡವರ ಬಗ್ಗೆ ತೀವ್ರ ಮರುಕ ವ್ಯಕ್ತಪಡಿಸಿದರು.
ಸೈಬರ್ ಕ್ರೈಂ ಅಪರಾಧಗಳ ಬಗ್ಗೆ ಜಿಲ್ಲೆಯಲ್ಲಿ ದಾಖಲಾಗಿರುವ ಪ್ರಕರಣಗಳು ಕಡಿಮೆ ಇದ್ದು, ಸೈಬರ್ ಅಪರಾಧಗಳ ವ್ಯಾಪ್ತಿಯನ್ನು ಅಧಿಕಾರಿಗಳು ಸರಿಯಗಿ ಅರ್ಥ ಮಾಡಿಕೊಂಡು ಪ್ರಕರಣಗಳನ್ನು ದಾಖಲಿಸುವಂತೆ ಮತ್ತು ಯಾವುದೇ ಠಾಣೆಗಳಲ್ಲಿ ಪ್ರಕರಣ ದಾಖಲಿಸಲು ವಿಳಂಬ ಮಾಡದಂತೆ ಹಾಗೂ ಎಲ್ಲಾ ಠಾಣೆಗಳಲ್ಲಿ ಸೈಬರ್ ಪ್ರಕರಣಗಳನ್ನು ದಾಖಲಿಸಿಕೊಳ್ಳುವಂತೆ ಸೂಚನೆ ನೀಡಿದ ಅವರು ಪೋಕ್ಸೋ ಪ್ರಕರಣಗಳು ನ್ಯಾಯಾಲಯದಲ್ಲಿ ಬೇಗನೆ ಇತ್ಯರ್ಥವಾಗಿ ಅಪರಾಧಿಗಳಿಗೆ ಶಿಕ್ಷೆಯಾಗುವ ನಿಟ್ಟಿನಲ್ಲಿ ಸರಕಾರಿ ಅಭಿಯೋಜಕರು ಕಾರ್ಯನಿರ್ವಹಿಸಬೇಕು..
ಸಮಾಜದಲ್ಲಿ ತಪ್ಪು ಸಂದೇಶ ಹರಡುವ ಫೇಕ್ ಸಂದೇಶಗಳ ಬಗ್ಗೆ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದ ಅವರು, ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸೋಷಿಯಲ್ ಮಿಡಿಯಾ ಮಾನಿಟರಿಂಗ್ ಸೆಲ್ ಹೆಚ್ಚು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು. ರಾಜ್ಯದಲ್ಲಿನ ಅಂಕಿ ಅಂಶಗಳ ಮಾಹಿತಿಯಂತೆ ಉತ್ತರ ಕನ್ನಡ ಜಿಲ್ಲೆಯು ಫೇಕ್ ನ್ಯೂಸ್ ಹರಡುವಿಕೆಯಲ್ಲಿ 2 ಸ್ಥಾನದಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿರುವ ಅಧಿಕೃತ ಮತ್ತು ಅನಧಿಕೃತ ಹೋಂ ಸ್ಟೇ ಗಳ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸುವಂತೆ ಸೂಚಿಸಿದ ಸಚಿವರು ಅನಧಿಕೃತ ಹೋ ಸ್ಟೇ ಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಹಾಗೂ ಎಲ್ಲಾ ಹೋಂ ಸ್ಟೇ ಗಳಲ್ಲಿ ಮದ್ಯ ಸರಬರಾಜು ಮಾಡಲು ಸೂಕ್ತ ಅನುಮತಿ ಪಡೆದಿರುವ ಬಗ್ಗೆ ಪರಿಶೀಲಿಸಿ, ಜಿಲ್ಲೆಯಲ್ಲಿರುವ ವಿದೇಶಿ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಅವರಲ್ಲಿರುವ ಅಧಿಕೃತ ದಾಖಲೆಗಳನ್ನು ಪರಿಶೀಲಿಸಿ. ಹೋಂ ಸ್ಟೇ , ರೆಸಾರ್ಟ್ಗಳಲ್ಲಿ ನಡೆಯುವ ಪಾರ್ಟಿಗಳಲ್ಲಿ ಮಾದಕ ವಸ್ತು ಬಳಕೆಯಾಗುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದರು.
ಅಗ್ನಿಶಾಮಕ ಇಲಾಖೆಗೆ ಶೀಘ್ರದಲ್ಲಿ ಹೊಸ ವಾಹನ ನೀಡಲಾಗುವುದು, ಕಾರವಾರದಲ್ಲಿರುವ ಜಿಲ್ಲಾ ಕಾರಾಗೃಹವನ್ನು ಸ್ಥಳಾಂತರಿಸಿ ಅಂಕೋಲ ಬಳಿ ಈಗಾಗಲೇ ಗುರುತಿಸಿರುವ ಜಾಗದಲ್ಲಿ ಹೊಸ ಕಾರಾಗೃಹ ನಿರ್ಮಾಣ ಮಾಡುವ ಬಗ್ಗೆ ಸೂಕ್ತ ಪ್ರಸ್ತಾವನೆಯಲ್ಲಿ ಸಲ್ಲಿಸುವಂತೆ ಸೂಚಿಸಿದರು.
ಪೊಲೀಸ್ ಇಲಾಖೆಯ ಪ್ರತಿಯೊಂದು ಠಾಣಾ ವ್ಯಾಪ್ತಿಯಲ್ಲಿ ನಡೆಯುವ ಪ್ರಕರಣಗಳಿಗೆ ಠಾಣೆಯ ಅಧಿಕಾರಿಗಳೇ ಜವಾಬ್ದಾರರು ಆದ್ದರಿಂದ ಠಾಣಾ ವ್ಯಾಪ್ತಿಯಲ್ಲಿ ಬೀಟ್ ವ್ಯವಸ್ಥೆಯನ್ನು ಬಿಗಿಗೊಳಿಸಿ, ಗಂಭೀರ ಪ್ರಕರಣಗಳ ಸಂದರ್ಭದಲ್ಲಿ ಶಾಂತಿ ಸಭೆಗಳನ್ನು ನಡೆಸಿ ಸಾರ್ವಜನಿಕರ ಮನವೊಲಿಸಿ, ಮಟ್ಕಾ, ಮೈಕ್ರೋ ಪೈನಾನ್ಸ್ ಮತ್ತು ಮೀಟರ್ ಬಡ್ಡಿ ಹಾವಳಿ ಪ್ರಕರಣಗಳು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಿ, ಜನಸ್ನೇಹಿಯಾಗಿ ಕಾನೂನು ಪ್ರಕಾರ ಕೆಲಸ ಮಾಡಿ, ಸರ್ಕಾರ ಮತ್ತು ಕಾನೂನು ಸದಾ ನಿಮ್ಮ ನೆರವಿಗೆ ಇರುತ್ತದೆ ಎಂದು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯಲ್ಲಿ ಸಂಭವಿಸಿದ ಶಿರೂರು ಗುಡ್ಡ ಕುಸಿತ ಮತ್ತು ಕಾಳಿ ನದಿ ಸೇತುವೆ ಕುಸಿತ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ಅವರು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರೊಂದಿಗೆ ಉತ್ತಮ ಒಡನಾಟ ಇಟ್ಟುಕೊಳ್ಳುವ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದು ರಾಜ್ಯದ ಎಲ್ಲಾ ಅಧಿಕಾರಿಗಳಿಗೆ ಉತ್ತಮ ಮಾದರಿಯಾಗಿದೆ ಈ ಹಿಂದೆ ಕೋಲಾರದಲ್ಲಿ ಎಸ್ಪಿ ಯಾಗಿದ್ದಾಗಲೂ ಸಹ ಇದೇ ರೀತಿ ಉತ್ತಮ ಬಾಂಧವ್ಯ ಹೊಂದಿದ್ದು ಉತ್ತಮವಾಗಿ ಕಾರ್ಯನಿರ್ವಹಿಸಿದ್ದು ಅವರನ್ನು ಅಭಿನಂದಿಸುತ್ತೇನೆ ಎಂದರು.
ಸಭೆಯಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ, ಕರ್ನಾಟಕ ರಾಜ್ಯ ಮಾರ್ಕೇಟಿಂಗ್ ಕನ್ಸಲೆಂಟ ಅಂಡ್ ಏಜೆನ್ಸಿಸ್ ಅಧ್ಯಕ್ಷ ಸತೀಶ್ ಕೆ. ಸೈಲ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸತೀಶ ನಾಯ್ಕ, ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕ ಅಮೀತ್ ಸಿಂಗ್, ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.
ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಹಾಜರಿದ್ದರು.

Share This
300x250 AD
300x250 AD
300x250 AD
Back to top