ಶಿರಸಿ: ನಗರದ ಹುಬ್ಬಳ್ಳಿ ರಸ್ತೆಯಲ್ಲಿ ನೂತನವಾಗಿ ಆರಂಭಗೊಂಡ ಅರ್ಬನ್ ಕ್ಯಾಪಿಟಲ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯು ಗಣ್ಯರ ಸಮ್ಮುಖದಲ್ಲಿ ಮಂಗಳವಾರ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು.
ಉದ್ಘಾಟನೆಯನ್ನು ನೆರವೇರಿಸಿ, ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಬಡವರಿಗೆ ಹಾಗೂ ರೈತರಿಗೆ ಆರ್ಥಿಕ ಶಕ್ತಿ ನೀಡುವಲ್ಲಿ ಸಹಕಾರಿ ಸಂಘಗಳು ಹಾಗೂ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಗಳು ಪ್ರಮುಖ ಪಾತ್ರ ವಹಿಸಿವೆ. ನಮ್ಮ ಜಿಲ್ಲೆಯಲ್ಲಿ ಹಿರಿಯರ ಪರಿಶ್ರಮದಿಂದ ಸಹಕಾರಿ ತತ್ವ ಬಲಿಷ್ಠಗೊಳ್ಳಲು ಕಾರಣವಾಗಿದೆ. ಸಹಕಾರಿ ಸಂಘಗಳು ಬಡವರಿಗೆ ಹಣಕಾಸಿನ ನೆರವು ನೀಡಿ, ಅವರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಎಲ್ಲರಂತೆ ಜೀವನ ಸಾಗಿಸಲು ಅವಕಾಶ ಕಲ್ಪಿಸಿದೆ ಎಂದು ಹೇಳಿದರು.
ಠೇವಣಿ ಸಂಗ್ರಹಿಸುವುದು ಒಂದೆಡೆಯಾದರೆ, ಸಾಲ ನೀಡುವುದು ಮುಖ್ಯವಾಗಿರುತ್ತದೆ. ನೀಡಿದ ಸಾಲದ ವಸೂಲಾತಿಯೂ ಕ್ರಮ ಬದ್ಧವಾಗಿ ನಡೆಯಬೇಕು ಎಂದ ಅವರು, ಗದಗ ಜಿಲ್ಲೆಯಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಜನ್ಮತಾಳಿದ ಸಹಕಾರಿಯು ಆ ನಂತರ ರಾಜ್ಯದ ಅನೇಕ ಜಿಲ್ಲೆಗಳಿಗೂ ವಿಸ್ತರಣೆಯಾಗಿ, ಉತ್ತರಕನ್ನಡ ಜಿಲ್ಲೆಯಲ್ಲಿ ಹಿರಿಯರ ತ್ಯಾಗ, ಪರಿಶ್ರಮದಿಂದ ಸಹಕಾರಿ ಸಂಘಗಳು ಹೆಮ್ಮರವಾಗಿ ಬೆಳೆದು ನಿಂತಿದೆ ಎಂದರು.
ಬೆಂಗಳೂರಿನಲ್ಲಿ ಬ್ಯಾಂಕ್ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದ ವಿಜಯೇಂದ್ರ ತಮ್ಮ ಹುಟ್ಟೂರಿನಲ್ಲಿ ಜನರಿಗೆ ಸೇವೆ ಹಾಗೂ ಬಡವರಿಗೆ ಆರ್ಥಿಕ ಶಕ್ತಿ ಒದಗಿಸಲು ಶಿರಸಿಯಲ್ಲಿ ಅರ್ಬನ್ ಕ್ಯಾಪಿಟಲ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಸ್ಥಾಪಿಸಿರುವುದು ಅಭಿಮಾನದ ಸಂಗತಿ ಎಂದರು.
ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮೋಹನದಾಸ ನಾಯಕ ಮಾತನಾಡಿ, ಉತ್ತರಕನ್ನಡದಲ್ಲಿ ಸಹಕಾರಿ ಸಂಘಗಳ ತವರೂರು. ಜಿಲ್ಲೆಯಲ್ಲಿ ಸಹಕಾರಿ ರಂಗ ಉತ್ತಮವಾಗಿದೆ. ಇತ್ತೀಚಿನ ದಿನಗಳಲ್ಲಿ ಸೌಹಾರ್ದ ಸೊಸೈಟಿಗಳು ಹೆಚ್ಚಳಗೊಂಡು ಅನಾರೋಗ್ಯಕರ ಸ್ಪರ್ಧೆ ಏರ್ಪಟ್ಟಿವೆ. ಠೇವಣಿದಾರರು ಸಿಗಬಹುದು. ಪ್ರಾಮಾಣಿಕ ಸಾಲಗಾರರು ಸಿಗುವುದು ಕಷ್ಟ ಎಂದರು.
ಸೌಹಾರ್ದ್ ಅಭಿವೃದ್ಧಿ ಅಧಿಕಾರಿ ಸಂತೋಷಕುಮಾರ ಎಂ.ಜೆ, ಉದ್ಯಮಿ ಮುಕುಂದ ಪ್ರಭು, ಜನತಾ ಟ್ರಾನ್ಸಪೊರ್ಟ್ ಮಾಲಕ ನಿಸ್ಸಾರ ಅಹಮ್ಮದ್ ಜವಳಿ, ಸೌಹಾರ್ದ ಅಧ್ಯಕ್ಷ ವೆಂಕಟೇಶ ನಾಯ್ಕ, ಸ್ಕೊಡ್ ವೆಸ್ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ, ಸಿಇಓ ವಿಜಯೇಂದ್ರ ನಾಯ್ಕ ಉಪಸ್ಥಿತರಿದ್ದರು.
ಸಂಮ್ಜೋತಾ ವಾಜ್ ಸ್ವಾಗತಿಸಿದರು. ಮಂಜು ಶೆಟ್ಟಿ ನಿರೂಪಿಸಿದರು.