ಟಿಎಸ್ಎಸ್ ಗೆ ಸಾಲ ತುಂಬಲು ಸದಾ ಬದ್ಧ | ಸಹಕಾರಿ ಸಂಸ್ಥೆಯಲ್ಲಿ ದ್ವೇಷಸಾಧನೆಯಿಂದ ಸಂಸ್ಥೆ ಅಧೋಗತಿ
ಶಿರಸಿ: ರೈತರ ಜೀವನಾಡಿಯಾಗಿರುವ ಟಿಎಸ್ಎಸ್ ಸಂಸ್ಥೆಯಲ್ಲಿ ನಾನು 42 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಹಗಲು ರಾತ್ರಿಯೆನ್ನದೇ ಅದರ ಏಳ್ಗೆಗಾಗಿ ನಾವೆಲ್ಲರೂ ಜೊತೆಗೂಡಿ ಶ್ರಮಿಸಿದ್ದೇವೆ. ನಾನು ಎಲ್ಲಿಯೂ ಸಾಲದ ಹಣ ಕಟ್ಟುವುದಿಲ್ಲ ಎಂದು ಹೇಳಿಲ್ಲ. ಟಿಎಸ್ಎಸ್ಗೆ ಹಣ ಸಂದಾಯ ಮಾಡಲು ಎಂದಿಗೂ ಬದ್ದನಿದ್ದೇನೆ ಎಂದು ಟಿಎಸ್ಎಸ್ನ ಮಾಜಿ ಸಿಬ್ಬಂದಿ ಅನಿಲಕುಮಾರ ಮುಷ್ಟಗಿ ಹೇಳಿದರು.
ಅವರು ಶುಕ್ರವಾರ ನಗರದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ಟಿಎಸ್ಎಸ್ಗೆ 1980 ರಲ್ಲಿ, ಶ್ರೀಪಾದ ಹೆಗಡೆ ಕಡವೆಯವರ ಸಹಾಯಕನಾಗಿ ಸೇವೆಗೆ ಸೇರಿ ಸುಮಾರು 42 ವರ್ಷಗಳ ಸೇವೆಯನ್ನು ಸಲ್ಲಿಸಿ, ನಂತರದ ದಿನಗಳಲ್ಲಿ ಶಾಂತಾರಾಮ ಹೆಗಡೆಯವರ ಮಾರ್ಗದರ್ಶನದಲ್ಲಿ ಸಂಸ್ಥೆಯ ಅಡಿಕೆ ಮಾರಾಟ ವಿಭಾಗದಲ್ಲಿ ವಿಭಾಗೀಯ ಮುಖ್ಯಸ್ಥನಾಗಿ ಸೇವೆ ಸಲ್ಲಿಸಿದ್ದೇನೆ. ನಿವೃತ್ತಿಯ ನಂತರ ಸ್ವಂತ ಉದ್ಯಮಗಳನ್ನು ಪ್ರಾರಂಭಿಸಿದ್ದೇನೆ. ಕೃಷಿ ಜಮೀನು ಖರೀದಿ ಹಾಗೂ ಮಾರಾಟ ಸಲುವಾಗಿ ಟಿಎಸ್ಎಸ್ನಲ್ಲಿ ಸಾಲವನ್ನು ಪಡೆದಿದ್ದೇನೆ. ಆ ವ್ಯವಹಾರವು 2 ವರ್ಷಗಳು ಯಾವುದೇ ತೊಡಕುಗಳಿಲ್ಲದೇ ನಡೆಯುತ್ತ ಬಂದಿದೆ. ಕಾಲಕಾಲಕ್ಕೆ ಬಡ್ಡಿ ಮತ್ತು ಅಸಲು ಸೇರಿ 13.65 ಕೋಟಿ ರೂ. ನನ್ನ ಸಾಲಕ್ಕೆ ಮರುಪಾವತಿ ಮಾಡಿದ್ದೇನೆ. ಉಳಿದ ಬಾಕಿ ಮೊತ್ತವನ್ನು ನನ್ನ ಲೇಔಟ್ ನಿವೇಶನಗಳನ್ನು ಟಿಎಸ್ಎಸ್ ಮುಖಾಂತರ ಮಾರಾಟ ಮಾಡಿ ಬಂದ ಹಣದ ಶೇ.50 ರಷ್ಟು ಮೊತ್ತವನ್ನು ನನ್ನ ಸಾಲದ ಮೊತ್ತಕ್ಕೆ ಜಮಾ ಮಾಡುವುದಾಗಿ ಹಾಗೂ ಮಾರಾಟದ ಮೊತ್ತದಲ್ಲಿ ಟಿಎಸ್ಎಸ್ ಸಂಸ್ಥೆಗೆ ಶೇ.5 ರಷ್ಟು ರಾಯಲ್ಟಿಯನ್ನು ನೀಡುವ ಜಂಟಿ ಒಪ್ಪಂದ ಪತ್ರ ಇದ್ದರೂ ನನ್ನ ಮೇಲೆ ವೈಯಕ್ತಿಕ ದ್ವೇಷ ಸಾಧನೆಗಾಗಿ ಈಗಿನ ಆಡಳಿತ ಮಂಡಳಿಯವರು ನನ್ನ ಸ್ವಾಧೀನದಲ್ಲಿರುವ ಆಸ್ತಿಯನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದ ಕಚ್ಚಾ ಜಪ್ತಿಯನ್ನು ಮಾಡುವ ಸಲುವಾಗಿ ಕಾರವಾರದ ಉಪ ನಿಬಂಧಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಬಾಕಿಯಾಗಿರುವ ಅಸಲು ಮೊತ್ತವನ್ನು ಪ್ರತಿ ನಿವೇಶನ ಮಾರಾಟ ಮಾಡಿದ ತಕ್ಷಣ ಮಾರಾಟ ಮೊತ್ತದ ಶೇ.5 ರಷ್ಟು ರಾಯಲ್ಟಿಯನ್ನೂ ಮತ್ತು ನಿವೇಶನ ಮಾರಾಟ ಮಾಡಿದ ಮೊತ್ತದ ಶೇ.50 ರಷ್ಟು ಮೊತ್ತವನ್ನು ಅಸಲಿನ ಬಾಬು ಪಾವತಿಸತಕ್ಕದ್ದು ಪ್ರತಿ ಪಾವತಿಯ ಸಂದರ್ಭದಲ್ಲಿ ಬಾಕಿ ಇರುವ ಒಟ್ಟಾರೆ ಮೊತ್ತಕ್ಕೆ ಶೇ.4ರಷ್ಟು ಬಡ್ಡಿಯನ್ನು ಟಿಎಸ್ಎಸ್ ಗೆ ಪಾವತಿ ಮಾಡಬೇಕು ಎಂದು ಆದೇಶವಾಗಿದೆ. ನ್ಯಾಯಾಲಯದ ಆದೇಶವಿದ್ದರೂ ಅದನ್ನು ಉಲ್ಲಂಘಿಸಿ, ಜೂನ್ ತಿಂಗಳಿನಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ನನ್ನ ಬಳಿ ಇರುವ ಸೂಕ್ತ ದಾಖಲೆಪತ್ರಗಳನ್ನು ತನಿಖಾಧಿಕಾರಿಗೆ ನೀಡಿದ್ದೇನೆ ಎಂದು ಹೇಳಿದರು.
ನಾನು 44 ಕೋಟಿ ರೂ. ಮರು ಪಾವತಿ ಮಾಡಲು ತಯಾರಿದ್ದೇನೆ. ಸಾಲ ಮರುಪಾವತಿ ಮಾಡುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಸಂಸ್ಥೆ ಉಳಿಯಬೇಕು. ಹಾಲಿ ಆಡಳಿತ ಮಂಡಳಿಯವರು 123 ಕೋಟಿ ರೂ. ನಷ್ಟ ತೋರಿಸಿದರೆ ಯಾವುದೇ ಬ್ಯಾಂಕ್ ಸಾಲ ನೀಡುವುದಿಲ್ಲ. ನಾನು 44 ಕೋಟಿ ರೂ. ಸಾಲ ಪಡೆದಿರುವುದು ಅವ್ಯವಹಾರ ಎಂದು ಹೇಗೆ ಹೇಳುತ್ತಾರೆ. ಶಿರಸಿಯಲ್ಲಿ ಮೂರು ಕಡೆಗಳಲ್ಲಿ ಲೇಔಟ್ ಮಾಡಿದ್ದೇನೆ. ಇಲ್ಲಸಲ್ಲದ ಪ್ರಕಟಣೆ ನೀಡಿ, ಅದನ್ನು ಖರೀದಿ ಮಾಡದಂತೆ ಪ್ರಕಟಣೆ ನೀಡಿ, ನಷ್ಟಕ್ಕೆ ನನ್ನನ್ನು ದೂಡುತ್ತಿದ್ದಾರೆ ಎಂದು ಆರೋಪಿಸಿದರು.
ಅಧ್ಯಕ್ಷರಿಗೆ ಸಂಸ್ಥೆ ಹಿತಕ್ಕಿಂತ ವೈಯಕ್ತಿಕ ದ್ವೇಷ ಸಾಧನೆ ಮುಖ್ಯ :
ನನ್ನ ಲೇಔಟ್ ಗಾಗಿ ಸಾಲ ಮಾಡಿರುವಾಗ ಅದರಲ್ಲಿನ ಸೈಟ್ ಮಾರಾಟ ಆದ ಹಾಗೆ ಟಿಎಸ್ಎಸ್ ಗೆ ಲಾಭ ಹೆಚ್ಚು. ಸೊಸೈಟಿಯಲ್ಲಿ ನನ್ನ ಸಾಲವೂ ಕಮ್ಮಿ ಆಗುತ್ತದೆ. ಸಂಸ್ಥೆಯ ಅಧ್ಯಕ್ಷ ಆದವರು ಸಂಸ್ಥೆಗೆ ಸಾಲ ಮರುಪಾವತಿ ಬಗ್ಗೆ ಯೋಚಿಸಬೇಕು. ನನಗೆ ಕಿರುಕುಳ ನೀಡುವುದರಿಂದ ಅವರಿಗೆ ಖುಷಿ ದೊರೆಯುತ್ತದೆ ಎನಿಸುತ್ತದೆ. ಅವರಿಗೆ ನಾನು ಸಂಸ್ಥೆಗೆ ಹಣ ತುಂಬುವುದು ಬೇಕಿಲ್ಲ. ವಯಕ್ತಿಕ ದ್ವೇಷಕ್ಕಾಗಿ ನನ್ನ ಜಾಗದ ಕುರಿತಾಗಿ ಆಗಾಗ ಪತ್ರಿಕಾ ಪ್ರಕಟಣೆ ನೀಡುತ್ತಿದ್ದಾರೆ. ಅವರ ಈ ನಡೆ ರೈತ ಸಮುದಾಯದ ಸಂಸ್ಥೆಗೆ ಹಿತವಲ್ಲ. ರೈತರೇ ಎಚ್ಚೆತ್ತುಕೊಂಡು ಅಧ್ಯಕ್ಷರನ್ನು ಪ್ರಶ್ನಿಸುವಂತಾಗಬೇಕು.
ನನ್ನ ಖಾತೆ ಪ್ರಕಾರ ನಾನು ಇನ್ನೂ ಸೊಸೈಟಿಗೆ ತುಂಬಬೇಕಾಗಿದ್ದು ಕೇವಲ 1,860 ರೂ.
ನಾನು ಟಿಎಸ್ಎಸ್ ನಲ್ಲಿ ಸಾಲ ಮಾಡಿದ್ದೇನೆ. ಅದರ ಮರುಭರಣವನ್ನೂ ಮಾಡುತ್ತಿದ್ದೇನೆ. ಆದರೆ ಈಗಿನ ಆಡಳಿತ ಮಂಡಳಿ ಸಾಲವನ್ನು ಅವ್ಯವಹಾರ ಎಂದು ಪ್ರಕರಣ ದಾಖಲಿಸಿದರೆ ಹೇಗಾಗುತ್ತದೆ ? ನಾನೂ ಕಾನೂನು ಹೋರಾಟಕ್ಕೆ ಸಿದ್ಧ. ನನ್ನ ಆಸಾಮಿ ಖಾತೆಗೆ 31-03-2024 ರಂದು ಎರಡು ಕಂತಿನಲ್ಲಿ ಒಟ್ಟೂ 44 ಕೋಟಿಯಷ್ಟು ಸೊಸೈಟಿಯವರೇ ಜಮಾ ನೀಡಿ ಮರು ಲೆಕ್ಕ ಪರಿಶೋಧನೆಯ ಪ್ರಕಾರ ಅವ್ಯವಹಾರದ ಬಾಬ್ತು ಎಂದು ಆ ಖಾತೆಗೆ ಈ ಹಣವನ್ನು ಏರಿಸಿರಬೇಕು. ಯಾಕೆ ಹಾಗೆ ಮಾಡಿದ್ದಾರೋ ನನಗೆ ಗೊತ್ತಿಲ್ಲ. ಹಾಗೆ ಮಾಡುವುದಕ್ಕೆ ಯಾವ ಕಾನೂನಿನಲ್ಲಿ ಅವಕಾಶವಿದೆ ? ಇಷ್ಟು ದೊಡ್ಡ ಮೊತ್ತದ ಹಣ ಅವ್ಯವಹಾರ ಎಂದು ಪರಿಗಣಿಸುವಾಗ ಇಲಾಖೆಯ ಅನುಮತಿ, ರಾಜ್ಯ ಸಚಿವ ಸಂಪುಟದಲ್ಲಿ ಇದು ಪಾಸ್ ಆಗಬೇಕೆಂದು ಹೇಳುತ್ತಾರೆ. ಹೀಗೆ ನನ್ನೊಬ್ಬನದ್ದೇ ಅಲ್ಲ. ಮಾಜಿ ಜಿಎಂ ರವೀಶ ಹೆಗಡೆ, ಪ್ರವೀಣ ಹೆಗಡೆ, ಮಾಬ್ಲೇಶ್ವರ ಹೆಗಡೆ ಇವರದ್ದು ಹೀಗೆ ಮಾಡಿದ್ದಾರೆ ಎಂಬ ಮಾಹಿತಿಯಿದೆ. ಹೀಗೆ ಮಾಡಿದರೆ ಸಂಸ್ಥೆ ಗತಿ ಏನಾಗಬೇಕು ? ಸದಸ್ಯರು ಈ ನಿಟ್ಟಿನಲ್ಲಿ ಎಚ್ಚರಾಗಬೇಕು ಎಂದು ಅನಿಲ ಮುಷ್ಠಗಿ ಟಿಎಸ್ಎಸ್ ವೆಬ್ಸೈಟಿನಲ್ಲಿ ಆನ್ಲೈನ್ ಮೂಲಕ ತಮ್ಮ ಆಸಾಮಿ ಖಾತೆಯ ಪೂರ್ಣ ವ್ಯವಹಾರದ ಮಾಹಿತಿಯನ್ನು ಪತ್ರಕರ್ತರಿಗೆ ತೋರಿಸಿದ್ದಾರೆ.