ಶಿರಸಿ: ಮಹಿಳೆಯರು ತಮ್ಮ ದೈನಂದಿನ ಚಟುವಟಿಕೆಗಳ ಜತೆಗೆ ಆದಾಯದ ಮೂಲವಾಗಿ ಹೊಲಿಗೆ ವೃತ್ತಿಯನ್ನು ತೊಡಗಿಸಿಕೊಂಡಲ್ಲಿ ಆರ್ಥಿಕವಾಗಿ ಸದೃಢತೆ ಹೊಂದಬಹುದಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಎ. ಬಾಬು ನಾಯ್ಕ್ ಹೇಳಿದರು.
ಅವರು ನಗರದ ಪ್ರಣತಿ ಹೊಲಿಗೆ ತರಬೇತಿ ಕೇಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಅಡಿಯಲ್ಲಿ ಹಮ್ಮಿಕೊಂಡಿದ್ದ ಹೊಲಿಗೆ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಹಿಳೆಯರಿಗೆ ಸ್ವ ಉದ್ಯೋಗ ಕಲ್ಪಿಸಿಕೊಡುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಹೊಲಿಗೆ ತರಬೇತಿಗೆ ಆದ್ಯತೆ ನೀಡಲಾಗಿದ್ದು ಇದನ್ನು ನಿಮ್ಮ ಮುಂದಿನ ದಿನಗಳಲ್ಲಿ ಮುಂದುವರೆಸಿಕೊಂಡು ಈ ತರಭೇತಿಯನ್ನು ಅರ್ಥಪೂರ್ಣಗೊಳಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆನರಾ ಬ್ಯಾಂಕ್ ಉದ್ಯೋಗಿ ಸಮೀಕ್ಷಾ ಪಾಯ್ದೆ ಮಾತನಾಡಿ, ರಚನಾತ್ಮಕತೆಯಿಂದ ವ್ಯಕ್ತಿಯ ವ್ಯಕ್ತಿತ್ವದ ವಿಕಸನವಾಗುತ್ತದೆ. ತರಬೇತಿ ಹೊಂದುವ ಶಿಬಿರಾರ್ಥಿಗಳು ತಾವು ತೊಡಗಿಸಿಕೊಳ್ಳುವ ವೃತ್ತಿಯಲ್ಲಿ ಸೃಜನಶೀಲತೆ ಅವಶ್ಯಕವಾಗಿದೆ. ಮಹಿಳೆಯರು ಗ್ರಾಮಾಭಿವೃದ್ದಿ ಯೋಜನೆಯು ನೀಡುತ್ತಿರುವ ತರಬೇತಿಗಳ ಸದುಪಯೋಗ ಪಡೆದುಕೊಂಡಲ್ಲಿ ಉಜ್ವಲ ಜೀವನ ಹೊಂದಬಹುದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಣತಿ ಹೊಲಿಗೆ ತರಬೇತಿ ಕೇಂದ್ರದ ತರಬೇತುದಾರೆ ಶ್ರೀಕಲಾ, ಮುಖ್ಯ ಅತಿಥಿಯಾಗಿದ್ದ ಸಮಾಜ ಸೇವಕ ಶಿವಾನಂದ ದೇಶಳ್ಳಿ ಮಾತನಾಡಿದರು. ಶಿಬಿರಾರ್ಥಿಗಳಾದ ಪ್ರೇಮಾ ಹಾಗೂ ಸುಮಿತ್ರಾ ಶಿಬಿರದ ಅನಿಸಿಕೆ ತಿಳಿಸಿದರು.
ಈ ಸಂದರ್ಭದಲ್ಲಿ ಹೊಲಿಗೆ ಶಿಬಿರದಲ್ಲಿ ತರಬೇತಿ ಪಡೆದ 19 ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಮಲ್ಲಿಕಾ ಶೆಟ್ಟಿ ನಿರೂಪಿಸಿದರು. ಶಿಬಿರಾರ್ಥಿ ಮಾಲಾಶ್ರೀ ಪ್ರಾರ್ಥಿಸಿದರು. ಸುಜಾತ ಸ್ವಾಗತಿಸಿದರು. ಸಾವಿತ್ರಿ ವಂದಿಸಿದರು.