Slide
Slide
Slide
previous arrow
next arrow

ವಿಶ್ವ ಯೋಗ ದಿನಾಚರಣೆ; ಭಾರತ ತನ್ನ ಜ್ಞಾನದ ಕಾರಣಕ್ಕೆ ವಿಶ್ವಗುರುವಾಗಿತ್ತು; ಸಂಸದ ಕಾಗೇರಿ

300x250 AD

ಶಿರಸಿ: ಸಹಸ್ರಾರು ವರ್ಷಗಳ ಇತಿಹಾಸ ಹೊಂದಿರುವ ಭಾರತ ತನ್ನ ಜ್ಞಾನ ಸಂಪತ್ತಿನಿಂದ ವಿಶ್ವಕ್ಕೆ ಗುರುವಾಗಿತ್ತು. ಆದರೆ ಪರಕೀಯರ ದಾಳಿಗಳಿಂದಾಗಿ ನಮ್ಮ ಜ್ಞಾನದ ಮೌಲ್ಯಗಳನ್ನು ಕಳೆದುಕೊಂಡಿದ್ದೇವೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಅವರು ನಗರ ನೆಮ್ಮದಿ ಆವರಣದ ರಂಗಧಾಮದಲ್ಲಿ ಆಯೋಜಿಸಲಾಗಿದ್ದ 10ನೇ ವರ್ಷದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ಪುಣ್ಯಭೂಮಿಯಲ್ಲಿ ಆಗಿಹೋಗಿರುವ ಹಲವಾರು ಋಷಿಮುನಿಗಳ ಯೋಗ ಸಾಧನೆಯಿಂದ, ಜ್ಞಾನ ಸಂಪತ್ತಿನಿಂದ ಭಾರತ ಗುರುವಿನ ಸ್ಥಾನ‌ ಪಡೆದಿತ್ತು. ಆದರೆ ನಮ್ಮ ಮಣ್ಣಿನ ಮೂಲ ಸಾಧನೆಯನ್ನು, ಜ್ಞಾನವನ್ನು ಕಡೆಗಣಿಸಿ, ಗುರು ಸ್ಥಾನವನ್ನು ಕಳೆದುಕೊಳ್ಳುವ ಪರಿಸ್ಥಿತಿ ಬಂದೊದಗಿತ್ತು. ಆದರೆ ಪ್ರಧಾನಿ ಮೋದಿಯವರು ಪ್ರಾರಂಭಿಸಿದ ಈ ಯೋಗ ದಿನಾಚರಣೆಯಿಂದ ಪುನಃ ನಮ್ಮೆಲ್ಲರನ್ನಷ್ಟೇ ಅಲ್ಲದೇ, ಇಡೀ ವಿಶ್ವವನ್ನೇ ಯೋಗ ಪದ್ಧತಿಗೆ ಅಳವಡಿಸಿಕೊಳ್ಳುವಂತೆ ಮಾಡಿರುವುದು, ಭಾರತ ಪುನಃ ವಿಶ್ವಗುರುವಾಗಲು ಇಟ್ಟ ಮೊದಲ‌ ಹೆಜ್ಜೆಯಾಗಿದೆ ಎಂದರು. ಈ ದಿನ ವಿಶೇಷವಾಗಿದ್ದು ಯೋಗ ದಿನಾಚರಣೆ ದಶಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಆದರೆ ಯೋಗ ಎನ್ನುವುದು ಒಂದು ದಿನದ ಆಚರಣೆಯಾಗದೇ, ದಿನಚರಿಯಲ್ಲಿ ಅಳವಡಿಸಿಕೊಳ್ಳೋಣ. ಯೋಗದ ಮೂಲಕ ದೈಹಿಕ, ಮಾನಸಿಕ, ಸಾಮಾಜಿಕ ಆರೋಗ್ಯ ಕಾಪಾಡಿಕೊಳ್ಳೋಣ ಎಂದರು.

ಸಿದ್ದಾಪುರದ ಶಿರಳಗಿ ಶ್ರೀ ಚೈತನ್ಯ ರಾಜಾರಾಮ ಕ್ಷೇತ್ರದ ಶ್ರೀ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿಗಳು ರಾಷ್ಟ್ರೋನ್ನತಿಗಾಗಿ ಯೋಗದ ಮೂಲಕ ವಯಕ್ತಿಕ ಕೊಡುಗೆ ವಿಷಯದಲ್ಲಿ ಆಶೀರ್ವಚನ ನೀಡಿ, ಯೋಗ ಎಂಬುದು ದಿನದ ಅಭ್ಯಾಸವಲ್ಲ, ಯೋಗ ಒಂದು ಜೀವನ ಶೈಲಿ. ಭಾರತೀಯ ಸನಾತನ ಜೀವನ ಕ್ರಮದ ಅವಿಭಾಜ್ಯ ಅಂಗ. ಜೀವಾತ್ಮವನ್ನು ಪರಮಾತ್ಮನಲ್ಲಿ ಸೇರಿಸುವುದೇ ಯೋಗ. ಇಂದಿನ ಪೀಳಿಗೆಗಳು ಸಂಯಮವನ್ನು ಕಳೆದುಕೊಂಡು, ದಾರಿ‌ ತಪ್ಪುತ್ತಿರುವಂತಹ‌ ಘಟನೆಗಳು ನಡೆಯುತ್ತಿದೆ. ಮಕ್ಕಳಿಗೆ ಅಷ್ಟಯೋಗಗಳ ಜ್ಞಾನ ನೀಡಿ,ಬದುಕನ್ನು ಎದುರಿಸಲು, ಕಟ್ಟಿಕೊಳ್ಳಲು ಬೇಕಾದ ಯಮ-ನಿಯಮಗಳ ಪರಿಕಲ್ಪನೆಯನ್ನು ನೀಡಬೇಕಾಗಿದೆ ಎಂದರು.

300x250 AD

ಒಂದು ರಾಷ್ಟ್ರದ ಪ್ರಗತಿ ಎಂದರೆ ಕೇವಲ ಭೌತಿಕ ಬೆಳವಣಿಗೆಯಲ್ಲ. ಅಂತಃಕರಣ ಶುದ್ಧಿ, ಆಂತರಿಕ ಸುಖ, ನೆಮ್ಮದಿಯ ಸಾಧನೆಯು ರಾಷ್ಟ್ರೋನ್ನತಿಗೆ ಮುಖ್ಯ ಕಾರಣವಾಗುತ್ತದೆ. ಬಾಹ್ಯ ಸುಖ‌-ಸಮೃದ್ಧಿಗಿಂತ ಆಂತರಿಕ ಸುಖ, ಶಾಂತಿ, ನೆಮ್ಮದಿ ಮುಖ್ಯ. ತನ್ನನ್ನು ತಾನು ಸಂಪೂರ್ಣವಾಗಿ ಅರಿತುಕೊಂಡರೆ ಏನನ್ನು ಬೇಕಾದರೂ ಸಾಧಿಸಬಹುದು ಎಂದು ನಮ್ಮ ಋಷಿಮುನಿಗಳು ಯೋಗ ಸಾಧನೆಯ ದಾರಿ ಆಯ್ಕೆ ಮಾಡಿಕೊಂಡಿದ್ದರು. ಆದರೆ ಇಂದಿನ ಚಂಚಲ ಮನಸ್ಥಿತಿಯ ಕಾರಣಗಳಿಂದ ಕಷ್ಟಗಳನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ. ಜೀವನವನ್ನು ಸಮಸ್ಥಿತಿಯಲ್ಲಿ ಎದುರಿಸಲು ಪ್ರತಿಯೊಬ್ಬರಿಗೂ ಯೋಗ, ಧ್ಯಾನದ ಅಭ್ಯಾಸದಿಂದ ಸಾಧ್ಯ ಎಂದರು.

ಕಾರ್ಯಕ್ರಮವನ್ನು ಆಯೋಜಿಸಿದ್ದ ವಿವಿಧ ಸಂಘಟನೆಗಳ ಪರವಾಗಿ ಶ್ರೀಗಳಿಗೆ ಫಲ-ತಾಂಬೂಲವನ್ನು ಸಮರ್ಪಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಆಯುಷ್ ವೈದ್ಯಾಧಿಕಾರಿ ಡಾ. ಪೂರ್ಣಿಮಾ ಯೋಗವನ್ನು ನಡೆಸಿಕೊಟ್ಟರು. ಕಾರ್ಯಕ್ರಮವನ್ನು ಜನಾರ್ಧನ ಆಚಾರ್ಯ ನಿರೂಪಿಸಿದರೆ, ಅನಿಲ್ ಕರಿ ಸ್ವಾಗತಿಸಿದರು.

Share This
300x250 AD
300x250 AD
300x250 AD
Back to top