ಶಿರಸಿ: ಶಿರಸಿ ತೋಟಗಾರಿಕೆ ಇಲಾಖೆಯಿಂದ ಅನುಷ್ಠಾನವಾಗುವ ಯೋಜನೆಗಳಡಿ ಸೌಲಭ್ಯ ಪಡೆಯಲು ಅರ್ಹ ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ತೋಟಗಾರಿಕೆ ಬೆಳೆಗಳ (ಅನಾನಸ್, ಗೇರು, ಕಾಳುಮೆಣಸು, ಬೆಣ್ಣೆಹಣ್ಣು, ಹಲಸು, ಹೈಬ್ರಿಡ್ ತರಕಾರಿ) ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ ವಿವಿಧ ಘಟಕಗಳ ನಿರ್ಮಾಣಕ್ಕೆ ಸಹಾಯಧನ ಪಡೆಯಲು ಹೆಸರು ನೋಂದಾಯಿಸಬಹುದಾಗಿದೆ. ಉತ್ಕೃಷ್ಟ ಗುಣಮಟ್ಟದ ವಿವಿಧ ತೋಟಗಾರಿಕೆ ಚಟುವಟಿಕೆಗಳಿಗೆ ಬಳಸಲಾಗುವ ಯಂತ್ರೋಪಕರಣಗಳಿಗೆ ಹಾಗೂ ಸೋಲಾರ್ ಪಂಪ್ಸೆಟ್ ಅಳವಡಿಕೆಗೆ ಸಹಾಯಧನ ಪಡೆಯಲು ಅವಕಾಶವಿದ್ದು ತಮಗೆ ಅಗತ್ಯವೆನಿಸಿದ ಯಂತ್ರಗಳನ್ನು ಖರೀದಿಸಲು ಹೆಸರು ನೋಂದಾಯಿಸಬಹುದಾಗಿದೆ.
ತಾಳೆ ಬೆಳೆ ಅಭಿವೃದ್ಧಿ ಯೋಜನೆಯಡಿ ತಾಳೆ ಬೆಳೆ ಪ್ರದೇಶ ವಿಸ್ತರಣೆಗೆ ಅವಕಾಶವಿದ್ದು, ಉತ್ತಮ ಗುಣಮಟ್ಟದ ತಾಳೆ ಸಸಿಗಳನ್ನು ರೈತರಿಗೆ ಉಚಿತವಾಗಿ ಪೂರೈಸಲಾಗುವುದು. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿಗೆ ಸಹಾಯಧನ ಲಭ್ಯವಿದ್ದು ಅನುಮೋದಿತ ಸಂಸ್ಥೆಗಳಿಂದ ದರ ಪಟ್ಟಿ ಪಡೆದು ಅರ್ಜಿ ಸಲ್ಲಿಸುವುದು. ಮಧುವನ ಮತ್ತು ಜೇನು ಕೃಷಿ ಅಭಿವೃದ್ಧಿ ಯೋಜನೆಯಡಿ ಜೇನು ಪೆಟ್ಟಿಗೆ, ಜೇನು ಕುಟುಂಬ ಮತ್ತು ಸ್ಟಾಂಡ್ಗೆ, ಜೇನು ತುಪ್ಪ ತೆಗೆಯುವ ಯಂತ್ರಕ್ಕೆ ಹಾಗೂ ಮಧುವನ ಸ್ಥಾಪನೆಗೆ ಸಹಾಯಧನಕ್ಕೆ ಹೆಸರು ನೋಂದಾಯಿಸಲು ಅವಕಾಶವಿದೆ.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಅನುಷ್ಠಾನವಾಗುವ ವಿವಿಧ ಅಳತೆಯ ನೀರು ಸಂಗ್ರಹಣಾ ಘಟಕ ಸ್ಥಾಪನೆಗೆ, ಕಡಿಮೆ ವೆಚ್ಚದ ಹಣ್ಣು ಮಾಗಿಸುವ ಘಟಕ ಸ್ಥಾಪನೆಗೆ, ಲಘು ಪೋಷಕಾಂಶಕ್ಕೆ, ನೀರಿನಲ್ಲಿ ಕರಗುವ ಗೊಬ್ಬರದ ಸಹಾಯಧನಕ್ಕೆ ಮತ್ತು ಸೋಲಾರ್ ಪಂಪ್ಸೆಟ್ ಖರೀದಿಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಆಸಕ್ತರೈತರು ಜೂನ್ 30ರೊಳಗೆ ಹೆಸರು ನೋಂದಾಯಿಸಬೇಕೆಂದು ತೋಟಗಾರಿಕೆ ಅಧಿಕಾರಿ ಸತೀಶ ಹೆಗಡೆ ತಿಳಿಸಿದ್ದಾರೆ.