ಶಿರಸಿ: ಅರಸರು ಕೊಡುವ ಕನಕದ ಕಂಕಣಕ್ಕಿಂತ ಸಜ್ಜನರು ನೀಡುವ ಸನ್ಮಾನ ಎಂಬ ಆನಂದದ ಕಂಕಣವು ತುಂಬಾ ಶ್ರೇಷ್ಠ. ಅಭಿಜಾತ ಕಲಾವಿದರಿಗೆ ಅಭಿಮಾನಿಗಳ ಹಾರೈಕೆಯೇ ಶ್ರೀರಕ್ಷೆ. ಗೋಡೆ ನಾರಾಯಣ ಹೆಗಡೆ ಅವರಂತಹ ಕಲಾವಿದರನ್ನು ಸನ್ಮಾನಿಸುವ ಘಳಿಗೆ ಅಂದರೆ ಅದು ನಾವು ಪಡೆದ ಭಾಗ್ಯ ವಿಶೇಷ ಎಂದು ನಿವೃತ್ತ ಪ್ರಾಚಾರ್ಯ ಯಕ್ಷಗಾನ ವಿದ್ವಾಂಸ ಡಾ|| ಜಿ.ಎ. ಹೆಗಡೆ ಸೋಂದಾ ನುಡಿದರು.
ಅವರು ಸಂಪ್ರದಾಯ ಬಳಗ ಶಿರಸಿ, ಪಾಟಕ ಯಕ್ಷ ಸಂಸ್ಕೃತಿ (ರಿ.) ಬೆಂಗಳೂರು ಮತ್ತು ನಾಧಾವಧಾನ ಕುಂದಾಪುರ (ರಿ.) ಅವರ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ರಂಗಧಾಮದಲ್ಲಿ ನಡೆದ ಯಕ್ಷಗಾನ ಗಾಯನ, ಯಕ್ಷಗಾನ ಕಾರ್ಯಕ್ರಮದ ನಡೆದ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ಗೋಡೆ ನಾರಾಯಣ ಹೆಗಡೆಯವರನ್ನು ಅಭಿನಂದಿಸಿ ಮಾತನಾಡುತ್ತಿದ್ದರು. ಗೋಡೆ ಅವರು ನಿರ್ವಹಿಸಿದ ಬ್ರಹ್ಮ ಕಪಾಲದ ಬ್ರಹ್ಮ, ಗಧಾಪರ್ವದ ಕೌರವ ನಳ ಚರಿತ್ರೆಯ ಋತುಪರ್ಣ, ರಾಮನಿರ್ಯಾಣದ ಲಕ್ಷಣ ಇಂತಹ ಹತ್ತಾರು ಪಾತ್ರಗಳು ಮುಂದಿನ ಯಕ್ಷ ಪೀಳಿಗೆಯವರಿಗೆ ಸಿದ್ಧಮಾದರಿಯ ಪಾತ್ರಗಳಾಗಿ ತೆರೆದಿಟ್ಟ ಗ್ರಂಥವಾಗಿದೆ ಎಂದರು. ರಾಷ್ಟ್ರ ಪ್ರಶಸ್ತಿಯು ಗೋಡೆಯವರನ್ನು ಅರಸಿ ಬಂದಲ್ಲಿ ಅದು ಕಲೆಯ ಭಾಗ್ಯ ಎಂದರು.
ಯಕ್ಷಗಾನದ ಮಟ್ಟು ತಿಟ್ಟುಗಳ ಮರುಹುಟ್ಟು ಕಲ್ಪನೆಯನ್ನು ಪ್ರಸ್ತಾಪಿಸಿ ತೆಂಕು, ಬಡಗು, ಬಡಾಬಡಗು ತಿಟ್ಟುಗಳು ಯಕ್ಷಗಾನದ ಮೂಲ ಪ್ರಕಾರಗಳು ತಿಟ್ಟು ಅಂದರೆ ಭಾಗವತರು ಹಾಡುವ ಶೈಲಿ ಅಲ್ಲ. “ರಾಗ-ಹಾಡು-ಭಾವ-ಛಂದಸ್ಸು-ಪರಿಣಾಮ-ಪ್ರಭಾವ-ಕಲಾಸಂವಹನ ಇವೆಲ್ಲದರ ಒಟ್ಟಂದವು ಸೇರಿ ನೀಡುವ ಪರಿಣಾಮ ವಿಶೇಷತೆಯೆ ಯಕ್ಷಗಾನದ ಮಟ್ಟು ಎಂದರು.”
ಮುಖ್ಯ ಅತಿಥಿಯಾಗಿ ಮಾತನಾಡಿದ ಯಕ್ಷ ವಿಮರ್ಶಕ ನಿತ್ಯಾನಂದ ಹೆಗಡೆ ಮೂರೂರು ಇತ್ತೀಚೆಗೆ ಯಕ್ಷಗಾನದಲ್ಲಿ ವಿಪರೀತ ಕುಣಿತ, ಅಗತ್ಯಕ್ಕಿಂತ ಹೆಚ್ಚಿನ ಆಲಾಪ, ಪ್ರೇಕ್ಷಕರ ಚಪ್ಪಾಳೆಗಾಗಿ ಕಲಾವಿದರಿಂದ ಹತ್ತು ಹಲವು ಕಸರತ್ತುಗಳು ನಡೆಯುತ್ತಿದ್ದು ಇದು ಪ್ರಜ್ಞಾವಂತ ಪ್ರೇಕ್ಷಕರಿಗೆ ಯಕ್ಷಗಾನ ಹೀಗೇಕೆ ಎಂದು ಅನಿಸುವ ಹಾಗೆ ಆಗಿದೆ ಎಂದರು.
ಯಕ್ಷಗಾನದ ಹಳೆಯ ಮಟ್ಟುಗಳನ್ನು ಸಂಶೋಧಿಸಿ, ಸಂರಕ್ಷಿಸಿ ಅದನ್ನು ಯಕ್ಷಗಾನದ ಸಂವರ್ಧನೆಗಾಗಿ ಮುಂದಿನ ತಲೆಮಾರಿಗೆ ಹಸ್ತಾಂತರಿಸಬೇಕಾಗಿದೆ ಎಂದು ಚಿಂತಕರಾದ ಅಜಿತ ಕಾರಂತ ಬೆಂಗಳೂರು ನುಡಿದರು.
ಅಧ್ಯಕ್ಷತೆ ವಹಿಸಿದ್ದ ನಿಕಟಪೂರ್ವ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ ಕುಮಟಾ ಮಾತನಾಡಿ ಯಕ್ಷಗಾನವು ಮಹಾ ಸಾಗರವಿದ್ದಂತೆ ‘ಕಲೆಯ ಸಂವಹನಾ ಪಥದಲ್ಲಿ ಕಲ್ಲೂ ಇದೆ. ಮುಳ್ಳೂ ಇದೆ. ಹೂವೂ ಇದೆ. ಎಲ್ಲವನ್ನು ಸ್ವೀಕರಿಸುತ್ತಲೇ ಸಾಗಬೇಕು. ಯಕ್ಷಗಾನ ಹಳೆಯ ಮಟ್ಟಿನ ರಕ್ಷಣೆ ಮತ್ತು ಸಂವರ್ಧನೆಯ ಆಶಯ ಹೊತ್ತ ಕಲಾಪ್ರೇಮಿ ಶಿರಸಿಯ ಸಂಪ್ರದಾಯ ಬಳಗದ ರೂವಾರಿ ಆರ್.ಎಂ.ಹೆಗಡೆ ಹಂದಿಮನೆ ಅವರ ಪರಿಶ್ರಮ ಸ್ತುತ್ಯಾರ್ಹ ಎಂದರು. ಸಹನಾ ಕಾನಮೂಲೆ, ಭಾರತಿ ಬೊಮ್ನಳ್ಳಿ ನಿರ್ವಹಿಸಿದರು. ಗಿರಿಧರ ಕಬ್ನಳ್ಳಿ ವಂದಿಸಿದರು. ಸಂಪ್ರದಾಯದ ವಿಘ್ನೇಶ್ವರ ಹೆಗಡೆ ಬೆಳ್ಳಹದ್ದ ಸಹಕಾರ ನೀಡಿದರು. ವಿ.ಪಿ. ಹೆಗಡೆ ವೈಶಾಲಿ, ಯಕ್ಷಗುರು ಎ.ಪಿ. ಪಾಟಕ್, ಎನ್.ಜಿ. ಹೆಗಡೆ ಯಲ್ಲಾಪುರ ಅವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಮೊದಲು ನಾದಾವಧಾನ ಮತ್ತು ಪಾಟಕ್ ಯಕ್ಷಸಂಸ್ಕೃತಿ ವಿದ್ಯಾರ್ಥಿಗಳಿಂದ ನಡೆದ ಹಳೆಯ ಮಟ್ಟಿನ ಪದ್ಯಗಳ ಪ್ರಾತ್ಯಕ್ಷಿಕೆ ಮತ್ತು ಅಜಿತ ಕಾರಂತರ ವಿಶ್ಲೇಷಣೆ ಗಮನ ಸೆಳೆಯಿತು. ಆ ಮೇಲೆ ಹಳ್ಳಿಯ ಮಟ್ಟು ತಿಟ್ಟುಗಳ ಕಲ್ಪನೆಯಲ್ಲಿ ಶ್ರೀ ಕೃಷ್ಣಸಂಧಾನ ಯಕ್ಷಗಾನ ನಡೆದು ಪ್ರೇಕ್ಷಕರಿಗೆ ಮುದ ನೀಡಿತು.
“ಸನ್ಮಾನ ಸಂತಸವನ್ನು ತಂದಿದೆ. ಕಲಾವಿದರಿಗೆ ಕಲೆಯೇ ದೇವರು. ಕಲೆಯನ್ನು ಆರಾಧಿಸಿದರೆ ಮಾತ್ರ ಕಲಾಸಿದ್ಧಿ. ಪ್ರೇಕ್ಷಕರಿಗೆ ಸಾತ್ವಿಕ ಸಂತಸವನ್ನು ಉಣಬಡಿಸುವುದು ಕಲಾವಿದರ ಹೊಣೆ. ಕಲೆಯ ಜೊತೆಗೆ ಸಾತ್ವಿಕ ಕಲಾವಿದರಿಗೆ ನೀಡುವ ಸನ್ಮಾನ ಮನ್ನಣೆಯ ಮಣೆ.”
– ಗೋಡೆನಾರಾಯಣ ಹೆಗಡೆ
ರಾಜ್ಯ ಪ್ರಶಸ್ತಿ ವಿಜೇತ ಯಕ್ಷಗಾನ ಕಲಾವಿದರು.