ಮುಂಡಗೋಡ: ಅರಣ್ಯ ಪ್ರದೇಶದಲ್ಲಿರುವ ಕೆರೆ ಗುಂಡಿಗಳಲ್ಲಿ ನೀರು ಸಂಪೂರ್ಣ ಬತ್ತಿರುವುದರಿಂದ ಕಾಡು ಪ್ರಾಣಿಗಳ ಬಾಯಾರಿಕೆ ನೀಗಿಸಲು ಅರಣ್ಯ ಇಲಾಖೆ ವತಿಯಿಂದ ಅರಣ್ಯದಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗುತ್ತಿದೆ.
ಕಳೆದ ಸಾಲಿನಲ್ಲಿ ತಾಲೂಕಿನಲ್ಲಿ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದ್ದು ಎಲ್ಲಡೆ ನೀರಿಗೆ ಹಾಹಾಕಾರ ಉಂಟಾಗಿ ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೇವಲ ಮನುಷ್ಯರಲ್ಲದೆ ಪ್ರಾಣಿ ಪಕ್ಷಿಗಳಿಗೂ ನೀರಿಲ್ಲದೆ ತೊಂದರೆ ಉಂಟಾಗಿದೆ. ನೀರಿನ ದಾಹ ತೀರಿಸಿಕೊಳ್ಳಲು ಕಾಡಿನಿಂದ ನಾಡಿಗೆ ಬರುವ ಕಾಡು ಪ್ರಾಣಿಗಳ ಮೇಲೆ ನಿರಂತರವಾಗಿ ದಾಳಿಗಳು ಹೆಚ್ಚುತ್ತಿವೆ. ಕಾಡು ಪ್ರಾಣಿಗಳು ಕುಡಿಯುವ ನೀರಿಗಾಗಿ ಜಲಾಯಶ ಹಾಗೂ ಗದ್ದೆಗಳಿಗೆ ಬರುತ್ತಿವೆ. ಇದನ್ನು ಕಂಡು ನಾಯಿಗಳ ಗುಂಪು ಕಾಡು ಪ್ರಾಣಿಗಳ ಮೇಲೆ ದಾಳಿ ನಡೆಸಿ ಗಾಯಗೊಳಿಸುತ್ತಿರುವ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯು ಕಾಡಿನಲ್ಲೆ ನೀರಿನ ತೊಟ್ಟಿಗಳನ್ನು ನಿರ್ಮಿಸಿ ನೀರು ಒದಗಿಸಲು ಮುಂದಾಗಿದೆ.
ಈಗಾಗಲೇ ತಾಲೂಕಿನ ಚವಡಳ್ಳಿ, ಇಂದೂರ, ಸನವಳ್ಳಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಸಿಮೆಂಟ್ ತೊಟ್ಟಿಗಳನ್ನು ತಯಾರಿಸಿ ಟ್ಯಾಂಕರ್ ಮೂಲಕ ನೀರನ್ನು ತುಂಬಿಸಲಾಗುತ್ತಿದೆ. ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಬಾಯಾರಿಕೆ ನೀಗಿಸಲು ಕೃತಕ ನೀರಿನ ತೊಟ್ಟಿಗಳನ್ನು ನಿರ್ಮಿಸಿ ನೀರು ಸಂಗ್ರಹಿಸುತ್ತಿದ್ದಾರೆ. ಇದರಿಂದ ಕಾಡು ಪ್ರಾಣಿಗಳಿಗೆ ಕಾಡಿನಲ್ಲೆ ನೀರನ್ನು ಒದಗಿಸುವುದರ ಜೊತೆಗೆ ಅವುಗಳ ರಕ್ಷಣೆಯು ಮಾಡಲಾಗುತ್ತಿದೆ.