ಕಾರವಾರ; ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಮುದಾಯ ಆರೋಗ್ಯ ಅಧಿಕಾರಿಗಳ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆ. 15ರಂದು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಅಧಿಕಾರಿಗಳಿಂದ ಅನಿರ್ದಿಷ್ಟ ಮುಷ್ಕರ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘದ ಜಿಲ್ಲಾ ಅಧ್ಯಕ್ಷ ರವಿ ನಾಯ್ಕ ತಿಳಿಸಿದರು.
ಅವರು ನಗರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. 11 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಮುಷ್ಕರ ನಡೆಸಲಾಗುತ್ತಿದೆ. ರಾಜ್ಯದ 6,192 ಸಮುದಾಯ ಆರೋಗ್ಯ ಅಧಿಕಾರಿಗಳು ಮುಷ್ಕರದಲ್ಲಿ ಪಾಲ್ಗೊಳ್ಳುವರು. ಜಿಲ್ಲೆಯ ಸಮುದಾಯ ಆರೋಗ್ಯ ಅಧಿಕಾರಿಗಳು ಕೂಡಾ ಪಾಲ್ಗೊಳ್ಳಲಿದ್ದೇವೆ. 2022ರಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿತ್ತು. ಆದರೆ ನಮ್ಮ ಬೇಡಿಕೆಗಳು ಈಡೇರಿಲ್ಲ. ಹೀಗಾಗಿ ಪುನಃ ಮುಷ್ಕರ ಮಾಡಬೇಕಾದ ಪರಿಸ್ಥಿತಿಯಿದೆ ಎಂದರು. ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಕುಡಿಯುವ ನೀರು, ಶೌಚಾಲಯ, ಸ್ವಚ್ಛತಾ ಸೇವೆಯಂತಹ ಇತರೆ ಉಪಕರಣಗಳು ಹಾಗೂ ಔಷದವನ್ನು ಕಡ್ಡಾಯವಾಗಿ ಒದಗಿಸಬೇಕು. ನವೆಂಬರ್ 2022ರಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಮುದಾಯು ಆರೋಗ್ಯ ಅಧಿಕಾರಿಗಳು ಮುಷ್ಕರ ನಡೆಸಿರುವುದಕ್ಕೆ ಒಂದು ದಿನದ ವೇತನ ಕಡಿತ ಮಾಡಲಾಗಿದೆ. ಅದನ್ನು ಪಾವತಿಸಬೇಕು. 15ನೇ ಹಣಕಾಸು ಆಯೋಗ ಅಡಿಯಲ್ಲಿ ಬರುವ 13 ಜಿಲ್ಲೆಯ ಸಮುದಾಯ ಆರೋಗ್ಯ ಅಧಿಕಾರಿಗಳ ಮೂರು ತಿಂಗಳ ವೇತನ ಪಾವತಿಯಾಗಿಲ್ಲ. ಕೂಡಲೇ ಬಾಕಿ ವೇತನ ಬಿಡಿಗಡೆ ಮಾಡಬೇಕು. ಸಿಪಿಎಚ್‌ಸಿ, ಯುಎಚ್ಸಿ ಮಾರ್ಗಸೂಚಿ ಅನ್ವಯ ಆರು ವರ್ಷ ಸೇವೆ ಪೂರೈಸಿದ ಎಲ್ಲಾ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಖಾಯಂಗೊಳಿಸಬೇಕು ಎಂದರು.
ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ವರ್ಗಾವಣೆಗೆ ಅವಕಾಶ ಕಲ್ಪಿಸಬೇಕು. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಇತರೆ ಉದ್ಯೋಗಿಗಳಿಗೆ ನೀಡಿದ ಶೇ 15ರಷ್ಟು ವೇತನ ಹೆಚ್ಚಳವನ್ನು ಸಮುದಾಯ ಆರೋಗ್ಯ ಅಧಿಕಾರಿಗಳಿಗೂ ನೀಡಬೆಕು. ತಡೆ ಹಿಡಿದಿರುವ ಶೇ 5ರಷ್ಟಯ ವಾರ್ಷಿಕ ವೇತನ ಮತ್ತು ಶೇ 10 ಲಾಯಿ ಬೋನಸ್ ಕೂಡಲೇ ಬಿಡುಗಡೆ ಮಾಡಬೇಕು. ವಿನಾಕಾರಣ ವಜಾಗೊಳಿಸಿದ ಎಲ್ಲಾ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಕೂಡಲೇ ನೇಮಕ ಮಾಡಿಕೊಳ್ಳಬೇಕು. ಸಮುದಾಯ ಆರೋಗ್ಯ ಅಧಿಕಾರಿಗಳ ಕುಟುಂಬಕ್ಕೆ ಆರೋಗ್ಯ ವಿಮೆ ಹಾಗೂ ಪಿಎಫ್ ಸೌಲಭ್ಯ ಒದಗಿಸಬೇಕು. ಸಮುದಾಯ ಆರೋಗ್ಯ ಅಧಿಕಾರಿಗಳ ನೇಮಕಾತಿಯ ಷರತು ಹಾಗೂ ಕೇಂದ್ರ ಸರಕಾರದ ಮಾರ್ಗಸೂಚಿಯಂತೆ (ಕ್ಲಿನಿಕ್ ಕಾರ್ಯಗಳು, ಸಾರ್ವಜನಿಕ ಕಾರ್ಯಗಳು, ನಿರ್ವಹಣೆ ಕಾರ್ಯಗಳು) ಕಾರ್ಯನಿರ್ವಹಣೆ ಹಾಗೂ ಎಚ್‌ಡಬ್ಲ್ಯುಸಿ ಆಡಳಿತಕ್ಕೆ ಮಾತ್ರ ಸೀಮಿತಗೊಳಿಸಬೇಕು ಎಂದು ಆಗ್ರಹಿಸಿದರು.ಜಿಲ್ಲಾ ಸಂಘದ ಕಾರ್ಯದರ್ಶಿ ಸಂದೀಪಕುಮಾರ, ಪ್ರವೀಣ ಡಯಾಸ, ಈರಣ್ಣ ಪಾಟೀಲ್, ಕಿರಣಕುಮಾರ ಮೊದಲಾದವರು ಪತ್ರಿಕಾಗೋಷ್ಟಿಯಲ್ಲಿದ್ದರು.