Slide
Slide
Slide
previous arrow
next arrow

ಫೆ.3ಕ್ಕೆ ಮಾಗೋಡು ಆಲೆಮನೆ ಹಬ್ಬ

300x250 AD

ಯಲ್ಲಾಪುರ: ತಾಲೂಕಿನ ಮಾಗೋಡ ಕಾಲೋನಿಯಲ್ಲಿ 7 ನೇ ವರ್ಷದ ಆಲೆಮನೆ ಹಬ್ಬ ಫೆ.3 ರ ಸಂಜೆ ನಡೆಯಲಿದ್ದು, ಅದಕ್ಕಾಗಿ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಆಲೆಮನೆ ಹಬ್ಬ ಸಮಿತಿಯ ನೇತೃತ್ವದಲ್ಲಿ ಕಾರ್ಯಕರ್ತರು ಸಿದ್ಧತೆಯಲ್ಲಿ ತೊಡಗಿದ್ದಾರೆ. 
ಫೆ.3 ರಂದು ಸಂಜೆ 5 ರಿಂದ ರಾತ್ರಿ 11 ರವರೆಗೆ ಆಲೆಮನೆ ಹಬ್ಬ ನಡೆಯಲಿದೆ. ಸಮೀಪದ ಮಾರುತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಭವ್ಯ ಮೆರವಣಿಗೆ ನಡೆಯಲಿದ್ದು, ನಂತರ ಗೋಪೂಜೆ, ಸಭಾ ಪೂಜೆ, ಭಗವದ್ಗೀತಾ ಪಠಣ, ರಾಷ್ಟ್ರಗೀತೆಯೊಂದಿಗೆ ಆಲೆಮನೆ ಹಬ್ಬಕ್ಕೆ ಚಾಲನೆ ದೊರೆಯಲಿದೆ.
ಈ ಬಾರಿ 10 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. ಮೂರು ಗಾಣಗಳ ಮೂಲಕ ಕಬ್ಬಿನಹಾಲು ಸಿದ್ಧಪಡಿಸಿ, 4 ಕೌಂಟರ್ ಗಳಲ್ಲಿ ವಿತರಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಜತೆಗೆ ಹಳ್ಳಿಯ ಬಗೆ ಬಗೆಯ ತಿಂಡಿ-ತಿನಿಸುಗಳನ್ನೂ ಸಹ ನೀಡಲಾಗುತ್ತದೆ. ಮಹಾದ್ವಾರಕ್ಕೆ ಇಂದ್ರಲೋಕ ಎಂದು ಹೆಸರಿಡಲಾಗಿದೆ.‌ ಗ್ರಾಮೀಣ ಭಾಗದ ರೈತರ ಜೀವನವನ್ನು ಬಿಂಬಿಸುವ ಕೌಂಟರ್ ಗಳಲ್ಲಿ ಕಬ್ಬಿನಹಾಲು, ತಿಂಡಿಗಳನ್ನು ಉಚಿತವಾಗಿ ವಿತರಿಸುವ ವ್ಯವಸ್ಥೆ ಮಾಡಲಾಗಿದೆ. 
 ಕಬ್ಬಿನಹಾಲು ಸಿದ್ಧಪಡಿಸುವುದು, ಕೌಂಟರ್ ಗಳ ಮೂಲಕ ವಿತರಿಸುವುದು, ತಿಂಡಿಗಳನ್ನು ತಯಾರಿಸುವುದು, ಪಾರ್ಕಿಂಗ್ ವ್ಯವಸ್ಥೆ ಹೀಗೆ ವಿವಿಧ ಕಾರ್ಯಗಳನ್ನು ಸಮರ್ಪಕವಾಗಿ ನಿಭಾಯಿಸುವುದಕ್ಕೆ ಆಲೆಮನೆ ಹಬ್ಬ ಸಮಿತಿಯ ನೂರಾರು ಕಾರ್ಯಕರ್ತರು ಶ್ರಮಿಸಲಿದ್ದಾರೆ. ಕಬ್ಬಿನಹಾಲಿನಿಂದ ಸಿದ್ಧಪಡಿಸಿದ ಬೆಲ್ಲ, ತೊಡದೇವು ಮುಂತಾದ ಖಾದ್ಯಗಳ ಮಾರಾಟಕ್ಕೂ ವ್ಯವಸ್ಥೆ ಮಾಡಲಾಗುತ್ತಿದೆ. 

ಇಲ್ಲಿನ ಗೋವರ್ಧನ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ವೈಭವ ಅನಾವರಣಗೊಳ್ಳಲಿದೆ. ವಿವಿಧ ಜಾನಪದ ಕಲೆಗಳ ಪ್ರದರ್ಶನ ಈ ಬಾರಿಯ ವಿಶೇಷತೆಯಾಗಿದೆ. ಸ್ಥಳೀಯ ಕಲಾವಿದರಿಂದ ಕೋಲಾಟ, ಜಾನಪದ ನೃತ್ಯ, ಯಕ್ಷಗಾನ ಸಂಗೀತ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿವೆ.
ನರಸಿಂಹ ಭಟ್ಟ ಕುಂಕಿಮನೆ ಅವರ ಮಾರ್ಗದರ್ಶನದಲ್ಲಿ ವೆಂಕಟರಮಣ ಭಟ್ಟ ಕಿರಕುಂಭತ್ತಿ, ಗಣಪತಿ ಪಟಗಾರ ಹಾದಿಮನೆ, ಗಣಪತಿ ನಾಯ್ಕ, ಗಂಗಾಧರ.ಬಿ.ಎಸ್, ಗುರುಪ್ರಸಾದ ಭಾಗ್ವತ ಚಂದಗುಳಿ, ವೆಂಕಟರಮಣ ಹೆಬ್ಬಾರಮನೆ, ಶ್ರೀಧರ ಹೆಗಡೆ ಹೆಗ್ಗುಂಬಳಿ, ಮೂರ್ತಿ ಪಟಗಾರ, ನರಸಿಂಹ ಭಟ್ಟ ಕರಡಿಪಾಲ, ಸುದರ್ಶನ ಹೆಗಡೆ ದೇವಿತಗ್ಗು, ಗೋಪಾಲ‌ ಕಂಚಗಲ್ ಸೇರಿದಂತೆ 50 ಕ್ಕೂ ಹೆಚ್ಚು ಕಾರ್ಯಕರ್ತರು ಒಂದು ವಾರದಿಂದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ನಶಿಸುತ್ತಿರುವ ಆಲೆಮನೆ ಸಂಪ್ರದಾಯವನ್ನು ಉಳಿಸುವ ಪ್ರಯತ್ನವಾಗಿ, ಹಲವು ವಿಶೇಷತೆಗಳೊಂದಿಗೆ 7 ವರ್ಷಗಳ ಹಿಂದೆ ಆರಂಭವಾದದ್ದು ಮಾಗೋಡ ಆಲೆಮನೆ ಹಬ್ಬ. ವರ್ಷದಿಂದ ವರ್ಷಕ್ಕೆ ಮಾಗೋಡ ಆಲೆಮನೆ ಹಬ್ಬ ಜಿಲ್ಲಾದ್ಯಂತ ಜನಪ್ರಿಯತೆ ಪಡೆಯುತ್ತಿದೆ. ಅಚ್ಚುಕಟ್ಟಾದ ವ್ಯವಸ್ಥೆ, ಸಂಘಟನೆಯ ಶಿಸ್ತು ಪ್ರತಿ ವರ್ಷ ಆಲೆಮನೆ ಹಬ್ಬದ ಯಶಸ್ಸಿಗೆ ಕಾರಣವಾಗುತ್ತಿದೆ.

300x250 AD

ಮಾಗೋಡಿನ ಆಲೆಮನೆ ಹಬ್ಬದಿಂದ ಪ್ರೇರಿತರಾಗಿ ತಾಲೂಕಿನ ಬೇರೆ ಬೇರೆ ಗ್ರಾಮೀಣ ಭಾಗಗಳಲ್ಲಿಯೂ ಕಳೆದ 4-5 ವರ್ಷಗಳಿಂದ ಆಲೆಮನೆ ಹಬ್ಬ ನಡೆಯುತ್ತಿದೆ.‌

Share This
300x250 AD
300x250 AD
300x250 AD
Back to top