ಬೆಂಗಳೂರು: ವಿಜಯ ಕರ್ನಾಟಕ ಪತ್ರಿಕೆಯ ಸಹಾಯಕ ಸಂಪಾದಕ ಹಾಗೂ ಪೊಲಿಟಿಕಲ್ ಎಡಿಟರ್ ಶಶಿಧರ ಹೆಗಡೆ ನಂದಿಕಲ್ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ(KUWJ) 2022-23ನೇ ಸಾಲಿನ ವಾರ್ಷಿಕ ಪ್ರಶಸ್ತಿ ಲಭಿಸಿದೆ.
ಅತ್ಯುತ್ತಮ ರಾಜಕೀಯ ವಿಮರ್ಶೆ ವಿಭಾಗದಲ್ಲಿ ಶಶಿಧರ ಹೆಗಡೆ ಅವರನ್ನು ಖಾದ್ರಿ ಶಾಮಣ್ಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಶಶಿಧರ ಹೆಗಡೆ ಕಳೆದ 20 ವರ್ಷಗಳಿಂದಲೂ ವಿಕ ಬೆಂಗಳೂರು ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಂತ ಹಂತವಾಗಿ ಬೆಳೆಯುತ್ತ ಸುದ್ದಿಮನೆಯಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿದ್ದಾರೆ. ಪ್ರಸ್ತುತ ಸಹಾಯಕ ಸಂಪಾದಕರು ಮತ್ತು ಪೊಲಿಟಿಕಲ್ ಬ್ಯೂರೋ ಮುಖ್ಯಸ್ಥರು. ಇವರ ಪ್ರತಿ ವಾರದ ರಾಜ್ಯಕಾರಣ ಅಂಕಣ ಜನಪ್ರಿಯವಾದುದು.
ಕಳೆದ ವರ್ಷ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದರು. ಈಗ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿಯ ಶ್ರೇಯ. ದಾವಣಗೆರೆಯಲ್ಲಿ ಫೆ. 3, 4ರಂದು ಪತ್ರಕರ್ತ ಸಂಘದ ರಾಜ್ಯ ಮಟ್ಟದ 38ನೇ ಸಮ್ಮೇಳನ ನಡೆಯಲಿದ್ದು, ಈ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನವಾಗಲಿದೆ.