
ಸಿದ್ದಾಪುರ: ನಿತ್ಯ ನೂರಾರು ವಿವಾಹ, ಅದರ ಕರೆಯೋಲೆಗಳು ನೆಂಟರಿಷ್ಟರ, ಆಪ್ತರ ಹಾಗೂ ಹಿತೈಷಿಗಳ ಮನೆಯಲ್ಲಿ ಕಂಡುಬರುತ್ತದೆ. ವಿಶೇಷ ಎಂದರೆ ಅಪರೂಪಕ್ಕೆ ಎನ್ನುವಂತೆ ಇಲ್ಲೊಂದು ವಿವಾಹ ಮಹೋತ್ಸವದ ಕರೆಯೋಲೆಯನ್ನು ತಾಳೆ ಎಲೆ(ಗರಿ)ಯಲ್ಲಿ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಸಿದ್ದಾಪುರ ತಾಲೂಕಿನ ಕೊರ್ಸೆಯ ಶ್ರೀಪಾದ ಭಟ್ಟ ಹಾಗೂ ರಾಧಾ ದಂಪತಿ ಪುತ್ರಿ ಶ್ರೀಲತಾ ಹಾಗೂ ಮಂಚಾಲೆಯ ಜಯಪ್ರಕಾಶ ಹಾಗೂ ರಂಜನಾ ದಂಪತಿ ಪುತ್ರ ಲಕ್ಷ್ಮೀಶ ಅವರ ವಿವಾಹದ (25-12-2023)ಕರೆಯೋಲೆಯನ್ನು ತಾಳೆಗರಿಯಲ್ಲಿ ಮಾಡಿದ್ದಾರೆ.
ಸಾಮಾನ್ಯವಾಗಿ ಅರಳಿ ಎಲೆ, ವೆನಿಲ್ಲಾ ಎಲೆ, ಅಡಕೆ ಹಾಳೆ ಇವುಗಳ ಮೇಲೆ ವಿವಾಹದ ಹಾಗೂ ಉಪನಯನದ ಆಮಂತ್ರಣ ಪತ್ರಿಕೆ ಮಾಡಿದ್ದು ನೋಡಿದ್ದೇವೆ.
ರಾಮಾಯಣ, ಮಹಾಭಾರತವನ್ನು ತಾಳೆ ಎಲೆಯಲ್ಲಿ ಬರೆದಿದ್ದಾರೆ ಎಂದು ಪುರಾಣದಿಂದ ತಿಳಿದುಬರುತ್ತದೆ.ಈ ಕಲಿಯುಗದಲ್ಲಿಯೂ ಇಂತದ್ದೊಂದು ಸೃಷ್ಠಿಯಾಗಿದೆ. ಕೃಷ್ಣಮೂರ್ತಿ ಹೆಗಡೆ ಹೆಬ್ಗುಳಿ, ಸುರೇಶ ಹೆಗಡೆ ಚನ್ನಖಂಡ, ರವಿ ಬಿಳಗಿ ಇವರು ಮಹೇಶ ಹೆಗಡೆ ಹೀನಗಾರ ಅವರ ಜಮೀನಿನಲ್ಲಿರುವ ಅಪರೂಪಕ್ಕೆ ಅಪರೂಪ ಎನ್ನುವಂತಿರುವ ತಾಳೆಮರದ ಹೆಡೆಯನ್ನು ತಂದು ಅದನ್ನು ಒಣಗಿಸಿ(ಹದಮಾಡಿ) ಮಂಗಲ ಪತ್ರ ಸಿದ್ದವಾಗುವವರೆಗೂ ಅವರು ಶ್ರಮಿಸಿದ್ದಾರೆ. 1.5ಇಂಚು ಅಗಲ,8ಇಂಚು ಉದ್ದದಷ್ಟು ಕತ್ತರಿಸಿ ಅದರ ಮೇಲೆ ಅಕ್ಷರವನ್ನು ಬರೆಯಲಾಗಿದೆ.
ಕೈಬರಹ: ಸಿದ್ದಗೊಂಡ ತಾಳೆಗರಿಯ ಮೇಲೆ ವಿವಾಹಕ್ಕೆ ಸಂಬಂಧಪಟ್ಟ ಅಕ್ಷರಗಳನ್ನು ಬರೆಸುವುದಕ್ಕೆ ಶಿರಸಿ,ಸಾಗರ, ಶಿವಮೊಗ್ಗ ಸೇರಿದಂತೆ ಹಲವೆಡೆ ವಿಚಾರಿಸಿದರೂ ಯಾವ ಪ್ರಿಂಟಿಗ್ ಪ್ರೆಸ್ನಲ್ಲಿಯೂ ತಾಳೆ ಗರಿಯ ಮೇಲೆ ಅಚ್ಚು ಹಾಕುವವರು ಸಿಗದಿದ್ದಾಗ ಸ್ವತಃ ಮದುಮಗಳು ಶ್ರೀಲತಾ, ತಂದೆ ತಾಯಿಗಳಾದ ಶ್ರೀಪಾದ ಭಟ್ಟ ಹಾಗೂ ರಾಧಾ ಭಟ್ಟ ಕೈಬರಹದ ಮೂಲಕ 150 ಆಮಂತ್ರಣ ಪತ್ರಿಕೆಯನ್ನು ತಯಾರಿಸಿದರು. ಇದನ್ನು ನೋಡಿದ ಸಿದ್ದಾಪುರದ ಉಧ್ಯಮಿ ದಿನೇಶ ಪಟೇಲ್( ರಾಜಾರಾಮ ಹಾರ್ಡವೇರ್ ಮಾಲೀಕ) ತಾಳೆ ಗರಿಯ ಮೇಲೆ ತಾನು ಅಚ್ಚುಹಾಕಿಸಿಕೊಡುತ್ತೇನೆಂದು ಹೇಳಿ ಹುಬ್ಬಳ್ಳಿಯ ಪ್ರಿಟಿಂಗ್ ಪ್ರೆಸ್ನಲ್ಲಿ ಅಚ್ಚುಹಾಕಿಸಿಕೊಟ್ಟು ಅದಕ್ಕೊಂದು ಮೆರಗು ನೀಡಿದರು. ಈಗ ಈ ವಿವಾಹ ಮಹೋತ್ಸವದ ಕರೆಯೋಲೆ ಶ್ರೀಪಾದ ಭಟ್ಟ ಕೊರ್ಸೆ ಅವರ ನೆಂಟರಿಷ್ಟರ, ಆಪ್ತರ ಮನೆಯಲ್ಲಿ ಕಂಗೊಳಿಸುತ್ತಿದೆ.
ತಾಳೆಗರಿಯಲ್ಲಿ ವಿವಾಹ ಮಹೋತ್ಸವದ ಆಮಂತ್ರಣವನ್ನು ಮಾಡಬೇಕೆಂದಾಗ ಕೃಷ್ಣಮೂರ್ತಿ ಹೆಗಡೆ ಹೆಬ್ಗುಳಿ, ಸುರೇಶ ಹೆಗಡೆ ಚನ್ನಖಂಡ, ರವಿ ಬಿಳಗಿ ಹಾಗೂ ಊರವರು ಸಂಪೂರ್ಣ ಸಹಕಾರ ನೀಡಿದ್ದಲ್ಲದೇ ಶ್ರಮಿಸಿದ್ದಾರೆ. ಸಿದ್ದಾಪುರದ ದಿನೇಶ ಪಟೇಲ್ ಅವರು ತಾಳೆ ಗರಿಯ ಮೇಲೆ ಪ್ರೀಂಟ್ ಮಾಡಿಸಿದ ಹಣವನ್ನು ತೆಗೆದುಕೊಂಡಿಲ್ಲ. ಎಲ್ಲರ ಶ್ರಮದಿಂದ ಇದಾಗಿದೆ. ಇದೊಂದು ಅವಿಸ್ಮರಣೀಯ.-ಶ್ರೀಪಾದ ಭಟ್ಟ ಕೊರ್ಸೆ.