ಗೋಕರ್ಣ: 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಮಂಜಗುಣಿ- ಗಂಗಾವಳಿ ಸೇತುವೆ ಕಾಮಗಾರಿಯನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೂ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಇದರ ಜತೆಯಲ್ಲಿಯೇ ಕೆಆರ್‌ಡಿಸಿಎಲ್ ಅಧಿಕಾರಿಗಳು ಬುಧವಾರ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳೆದ 5 ವರ್ಷಗಳಿಂದ ಕಾಮಗಾರಿ ನಡೆಸಲಾಗುತ್ತಿದ್ದು, ತೀವ್ರ ಮಂದಗತಿಯಲ್ಲಿ ನಿರ್ಮಾಣಗೊಳ್ಳುತ್ತಿರುವುದರಿಂದ ಸಾರ್ವಜನಿಕರು ಪ್ರತಿಭಟನೆಯನ್ನು ಕೂಡ ನಡೆಸಿದ್ದರು. ಹೀಗಾಗಿ ಕಾಮಗಾರಿ ಸ್ವಲ್ಪ ವೇಗ ಪಡೆದುಕೊಂಡಿದ್ದು, ಜನಪ್ರತಿನಿಧಿಗಳ ಬಗ್ಗೆ ಜನರಲ್ಲಿ ತೀವೃ ಅಸಮಧಾನವಿದ್ದು, ಕೇವಲ ಒಂದು ಅಥವಾ ಎರಡು ವರ್ಷಗಳಲ್ಲಿ ಮುಗಿಯಬೇಕಿದ್ದ ಈ ಸೇತುವೆ ಕಾಮಗಾರಿ 5 ವರ್ಷವಾದರೂ ಪೂರ್ಣಗೊಳಿಸದಿರುವುದಕ್ಕೆ ಹಿಡಿಶಾಪ ಹಾಕುವಂತಾಗಿದೆ.
ಮಳೆಗಾಲದಲ್ಲಿ ಮಂಜಗುಣಿಯಿಂದ ಗಂಗಾವಳಿಗೆ ದೋಣಿಯ ಮೂಲಕ ತೆರಳಬೇಕಾಗುತ್ತದೆ. ಮಳೆ ಹೆಚ್ಚಾದರೆ ನೀರಿನ ಹರಿವಿಗೆ ಮತ್ತು ಗಾಳಿಯ ತೀವೃತೆಗೆ ದೋಣಿ ಸಂಚಾರವನ್ನು ಸ್ಥಗಿತಗೊಳಿಸಬೇಕಾಗುತ್ತದೆ. ಹೀಗಾಗಿ ಜನರು ಸುಮಾರು 25 ಕಿ.ಮೀ. ಹೆಚ್ಚುವರಿಯಾಗಿ ಕ್ರಮಿಸಬೇಕಾಗುತ್ತದೆ. ಆದಷ್ಟು ಶೀಘ್ರ ಕಾಮಗಾರಿ ಮುಕ್ತಾಯಗೊಂಡು ಸಾರ್ವಜನಿಕರಿಗೆ ದೊರೆಯುವಂತಾಗಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.
ಈಗಾಗಲೇ ಕಾಮಗಾರಿ ವೇಗ ಪಡೆದುಕೊಂಡಿದ್ದು, ಇನ್ನೆರಡು ತಿಂಗಳೊಳಗೆ ಸೇತುವೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ನಾವು ಶ್ರಮ ವಹಿಸುತ್ತಿದ್ದೇವೆ. ಈ ಸೇತುವೆ ಸಾರ್ವಜನಿಕರಿಗೆ ಮುಕ್ತಗೊಂಡರೆ ಬಹುಪಯೋಗಿ ಆಗಲಿದೆಗೀ ಹಿನ್ನೆಲೆಯಲ್ಲಿಯೂ ನಾವು ಆದಷ್ಟು ಶೀಘ್ರ ಮುಗಿಸುವ ಪ್ರಯತ್ನದಲ್ಲಿದ್ದೇವೆ ಎಂದು ಕೆಆರ್‌ಡಿಸಿ ಇಂಜಿನೀಯರ್ ಸಂತೋಷ ಹೇಳಿದ್ದಾರೆ.