ಅಂಕೋಲಾ: ಹಸಿವು, ಬಡತನ ಅಸ್ಪೃಶ್ಯತೆ ಮತ್ತು ಶಿಕ್ಷಣದ ಕೊರತೆಗಳು ನಮ್ಮನ್ನು ಸಾಮಾಜಿಕವಾಗಿ ಹಿಂದಿಕ್ಕಿದಲ್ಲದೆ, ಶತಮಾನಗಳಿಂದ ಮೇಲ್ವರ್ಗದ ಶೋಷಣೆಗಳಿಗೆ ಬಲಿಪಶುವನ್ನಾಗಿ ಮಾಡಿದವು. ಇತ್ತೀಚಿನ ದಿನಗಳಲ್ಲಿ ಆಶಾದಾಯಕವಾಗಿ ಶೈಕ್ಷಣಿಕ ಜಾಗೃತಿ ಹೆಚ್ಚುತ್ತಿದೆ. ಅಲ್ಲದೆ ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ಮಕ್ಕಳು ಅದ್ವಿತೀಯ ಸಾಧನೆ ಮಾಡುತ್ತಿರುವುದು ಕಂಡಾಗ ಅಭಿಮಾನ ಮೂಡುತ್ತದೆ ಎಂದು ಡಾ.ರಾಮಕೃಷ್ಣ ಗುಂದಿ ಹೇಳಿದರು.
ತಾಲೂಕಿನ ವಂದಿಗೆ ಗ್ರಾಮದಲ್ಲಿ ಜಿಲ್ಲಾ ಆಗೇರ ಸಮಾಜ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ಏರ್ಪಡಿಸಲಾದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭವನ್ನು ದೀಪ ಬೆಳಗಿ ಉದ್ಘಾಟಿಸಿ ಅವರು ಮಾತನಾಡಿದರು. ಉತ್ತರ ಕನ್ನಡ ಜಿಲ್ಲೆಯ ಶೋಷಿತ ದಲಿತ ಸಮುದಾಯಗಳಲ್ಲಿ ಒಂದಾದ ಹಾಗೆ ಇರಲು ತಮ್ಮ ಶೈಕ್ಷಣಿಕ ಪ್ರಗತಿಗಾಗಿ ಸ್ಥಾಪಿಸಿಕೊಂಡ ಪ್ರಸ್ತುತ ಸಂಘಟನೆ ಮೂಲಕ ಪ್ರತಿ ವರ್ಷವೂ ಪ್ರತಿಭಾ ಪುರಸ್ಕಾರ ನಡೆಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾಜದ ಮೊದಲ ಎಂಜಿನಿಯರಿಂಗ್ ಪದವೀಧರ, ಭಟ್ಕಳದ ಕಾರ್ಯನಿರ್ವಾಹಕ ಎಂಜಿನಿಯರ್ ರಾಮ ಅರ್ಗೇಕರ ಮಾತನಾಡಿ, ಸಮಾಜದ ವಿದ್ಯಾರ್ಥಿಗಳು ಹಿಂದಿನ ದಿನಗಳಲ್ಲಿ ಓದುವಾಗ ಸರಕಾರದಲ್ಲಿ ಧನಿಕರಲ್ಲಿ ಸಹಾಯ ಯಾಚನೆಗಾಗಿ ಕೈ ಚಾಚುವ ಸಂದರ್ಭವಿತ್ತು. ಇಂದು ಅಂತಹ ಆಪತ್ತಿನ ದಿನಗಳನ್ನು ನಾವು ದಾಟಿ ಬಂದಿದ್ದೇವೆ ಯಾವ ವಿದ್ಯಾರ್ಥಿಯು ಆರ್ಥಿಕ ಕೊರತೆ ಎಂದು ಶಿಕ್ಷಣವನ್ನು ನಿಲ್ಲಿಸುವಂತಿಲ್ಲ. ಅಂತಹ ಸಂದರ್ಭ ಬಂದರೆ ಹಾಗೆ ಅಭಿವೃದ್ಧಿ ಸಂಘವನ್ನು ಸಂಪರ್ಕಿಸಿ ಸಹಾಯ ಪಡೆದುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಂಘದ ಸಂಘಟನಾ ಅಧ್ಯಕ್ಷ ಗುಣು ಬಿ.ಆಗೇರ, ಗೌರವ ಅಧ್ಯಕ್ಷ ಅರುಣ್ ಶೇಡಗೇರಿ, ಉಪಾಧ್ಯಕ್ಷ ವಾಮನ ಆಗೇರ, ಮಾರುತಿ ವಿ.ಆಗೇರ, ಈಶ್ವರ್ ವಂದಿಗೆ, ಹೊನ್ನಪ್ಪ ಆಗೇರ, ನಾಗರಾಜ್ ಮೇಲಿನಮನೆ, ಶ್ರೀನಿವಾಸ ನಂದಿಗೆ, ಅಶೋಕ್ ಶೇಡಗೇರಿ, ಶಾಂತಿ ಆಗೇರ, ಹೇಮಾ ಆಗೇರ ಮುಂತಾದವರು ಮಾತನಾಡಿದರು.
ಸಂಘದ ಹಿರಿಯ ಸದಸ್ಯರಾದ ನಿವೃತ್ತ ಶಿಕ್ಷಕ ಮಹದೇವ ಬಿ.ಆಗೇರ ಅವರಿಗೆ ಜೀವಮಾನದ ಸಾಧನೆಗಾಗಿ ವಿಶೇಷ ಸನ್ಮಾನ ಮಾಡಲಾಯಿತು. ಗಣೇಶ್ ವಂದಿಗೆ ಹಾಗೂ ಸಂತೋಷ್ ಮಾಸ್ತಿಮನೆ ಇವರನ್ನು ಶೈಕ್ಷಣಿಕ ಸಾಧನೆಗಾಗಿ, ದಿಗಂಬರ ಲಕ್ಷ್ಮೇಶ್ವರ ಇವರನ್ನು ನಾಟಿ ವೈದ್ಯಕೀಯ ಸೇವೆಗಾಗಿ ಸನ್ಮಾನಿಸಲಾಯಿತು. ತಿಮ್ಮಣ್ಣ ಆಗೇರ, ಬೊಮ್ಮಯ್ಯ ನೀಲಂಪುರ, ಹೊನ್ನಪ್ಪ ಆಗೇರ ಇವರನ್ನು ಸಂಘಟನೆಯ ಸುದೀರ್ಘ ಸೇವೆಗಾಗಿ ಸನ್ಮಾನಿಸಿ ಗೌರವಿಸಲಾಯಿತು.
ಎಸ್‌ಎಸ್‌ಎಲ್‌ಸಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ 48 ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರದೊಂದಿಗೆ 1000 ರೂ/ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು. ಸಂಘಟನೆಯ ಅಧ್ಯಕ್ಷ ಗುರು ಎನ್.ಶೇಡಗೇರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮಂಜುನಾಥ್ ಶೆಡಗೇರಿ ಎಲ್ಲರನ್ನೂ ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಮುರಳಿ ವಂದಿಗೆ ವಾರ್ಷಿಕ ವರದಿಯನ್ನು ಓದಿದರು. ಜಯಶೀಲ ಆಗೇರ ಮತ್ತು ಪೂರ್ಣಿಮಾ ಶೇಡಗೇರಿ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ನಿಶಾಂತ್ ಆಗೇರ ಸರ್ವರಿಗೂ ಉಪಕಾರ ಸ್ಮರಣೆ ಮಾಡಿದರು.