ಜೋಯಿಡಾ: ವಿಧಾನಸಭಾ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ತಾಲೂಕಿನ ಅನಮೋಡ ಅಬಕಾರಿ ಚೆಕ್‌ಪೋಸ್ಟ್ ಬಳಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಗೋವಾ ರಾಜ್ಯಕ್ಕೆ ಹತ್ತಿರವಾಗಿರುವ ಅನಮೋಡ ಚೆಕ್‌ಪೋಸ್ಟ್ನಲ್ಲಿ ಅಬಕಾರಿ ಅಧಿಕಾರಿಗಳು, ರಾಮನಗರ ಪೊಲೀಸರು, ತಹಶೀಲ್ದಾರ ಕಚೇರಿ ಸಿಬ್ಬಂದಿ ಹಾಗೂ ಚುನಾವಣಾ ಅಧಿಕಾರಿಗಳು ಅಕ್ರಮ ಗೋವಾ ಮದ್ಯ ಸಾಗಾಟ ಹಾಗೂ ಅನಧಿಕೃತ ಹಣ ಸಾಗಾಟವನ್ನು ತಡೆಯಲು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
ಈಗಾಗಲೇ ಬಹಳಷ್ಟು ಅಕ್ರಮ ಸಾರಾಯಿ ವಾಹನವನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡು ಕೇಸ್ ದಾಖಲಿಸಿದ್ದು, ತ್ರಿಕೋನ ಸ್ಪರ್ಧೆ ಇರುವ ಹಳಿಯಾಳ- ಜೊಯಿಡಾ- ದಾಂಡೇಲಿ ಕ್ಷೇತ್ರದಲ್ಲಿ ಅಕ್ರಮ ನಡೆಯಬಾರದು ಎಂಬ ದೃಷ್ಟಿಯಿಂದ ಗಡಿ ಭಾಗದಲ್ಲಿ ಹೆಚ್ಚಿನ ತಪಾಸಣೆ ನಡೆಸಲಾಗುತ್ತಿದೆ. ದಾಂಡೇಲಿ ಡಿವೈಎಸ್‌ಪಿ ಶಿವಾನಂದ ಕಟಗಿ, ಜೊಯಿಡಾ ಸಿಪಿಐ ಮಾಹಂತೇಶ ಹೊಸಪೇಟ, ರಾಮನಗರ ಪಿಎಸ್‌ಐ ಬಸವರಾಜ ಎಮ್., ಅನಮೋಡ ಅಬಕಾರಿ ಪಿಎಸೈ ಶ್ರೀಕಾಂತ ಅಸೋದೆ ಹಾಗೂ ಸಿಬ್ಬಂದಿ ಅಕ್ರಮ ನಡೆಯದಂತೆ ತೀವ್ರ ನಿಗಾ ವಹಿಸಿದ್ದಾರೆ.
ಚುನಾವಣೆ: ಅನಮೋಡ ಚೆಕ್‌ಪೋಸ್ಟ್’ನಲ್ಲಿ ಬಿಗಿ ಬಂದೋಬಸ್ತ್
