ಕುಮಟಾ: ಪಟ್ಟಣದ ವಿವಿಧೆಡೆ ಅಳವಡಿಸಲಾದ ಬ್ಯಾನರ್, ಪೋಸ್ಟರ್‌ಗಳನ್ನು ತೆರವುಗೊಳಿಸುವಾಗ ಆಡಳಿತ ಪಕ್ಷದ ಪೋಸ್ಟರ್‌ಗಳನ್ನು ಹಾಗೆಯೇ ಬಿಟ್ಟ ಪುರಸಭೆ ಸಿಬ್ಬಂದಿಯ ಕಾರ್ಯವೈಖರಿಯ ಬಗ್ಗೆ ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಲು ಕೆಲವೇ ದಿನಗಳು ಬಾಕಿ ಇದೆ. ಹಾಗಾಗಿ ಕುಮಟಾ ಪುರಸಭೆ ಅಧಿಕಾರಿಗಳ ತಂಡ ಪಟ್ಟಣದಲ್ಲಿ ಬೇಕಾಬಿಟ್ಟಿ ಅಳವಡಿಸಲಾದ ವಿವಿಧ ಪಕ್ಷಗಳ ಮತ್ತು ಸಂಘಟನೆಗಳ ಬ್ಯಾನರ್, ಪೋಸ್ಟರ್ ತೆರವುಗೊಳಿಸುವ ಕಾರ್ಯಾಚರಣೆಗೆ ಮುಂದಾಗಿದ್ದರು. ಬಿಜೆಪಿಯ ಬ್ಯಾನರ್, ಪೋಸ್ಟರ್ ಮತ್ತು ಕಟೌಟ್‌ಗಳನ್ನು ಹಾಗೆಯೇ ಬಿಟ್ಟು, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಇನ್ನಿತರೆ ಸಂಘಟನೆಗಳ ಕಾರ್ಯಕ್ರಮಗಳ ಕುರಿತಾಗಿ ಅಳವಡಿಸಲಾದ ಬ್ಯಾನರ್, ಪೋಸ್ಟರ್ ಗಳನ್ನು ಮಾತ್ರ ತೆರವುಗೊಳಿಸುವ ಕಾರ್ಯವನ್ನು ಅಧಿಕಾರಿಗಳು ನಡೆಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸ್ಥಳಕ್ಕಾಗಮಿಸಿದ ಪುರಸಭೆ ಅಧಿಕಾರಿಗಳ ಬ್ಯಾನರ್, ಪೋಸ್ಟರ್ ತೆರವು ಕಾರ್ಯಾಚರಣೆಯ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದರು.
ನೀವು ತೆರವು ಕಾರ್ಯಾಚರಣೆ ಮಾಡುವುದಿದ್ದರೆ ಎಲ್ಲ ಪಕ್ಷಗಳ ಬ್ಯಾನರ್ ಪೋಸ್ಟರ್‌ಗಳನ್ನು ತೆರವುಗೊಳಿಸಿ. ಆಡಳಿತ ಪಕ್ಷದ ಬ್ಯಾನರ್ ಮತ್ತು ಪೋಸ್ಟರ್‌ಗಳು ತೆರವು ಮಾಡದೇ ಇರಲು ಏನು ಕಾರಣ ಎಂದು ಪ್ರಶ್ನಿಸಿದ ಸೋನಿ, ಕಾನೂನು ಎಲ್ಲರಿಗೂ ಒಂದೆ. ಅಧಿಕಾರಿಗಳು ಬಿಜೆಪಿ ಪಕ್ಷದ ಪರ ಕೆಲಸ ಮಾಡುತ್ತಿರುವುದು ಸರಿಯಲ್ಲ. ಮೊದಲು ಆಡಳಿತ ಪಕ್ಷದ ಬ್ಯಾನರ್, ಪೋಸ್ಟರ್ ತೆರವುಗೊಳಿಸಿದ ಬಳಿಕ ನಮ್ಮ ಜೆಡಿಎಸ್ ಪೋಸ್ಟರ್, ಬ್ಯಾನರ್ ತೆರವುಗೊಳಿಸಬೇಕು. ಒಬ್ಬರಿಗೊಂದು, ಇನ್ನೊಬ್ಬರಿಗೊಂದು ಕಾನೂನು ಮಾಡುವುದು ಅಧಿಕಾರಿಗಳಿಗೆ ಶೋಭೆ ತರುವುದಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪುರಸಭೆ ಸಿಬ್ಬಂದಿ ಎಲ್ಲ ಪಕ್ಷಗಳ ಬ್ಯಾನರ್, ಪೋಸ್ಟರ್ ತೆರವುಗೊಳಿಸುವ ಮೂಲಕ ಕಾರ್ಯಾಚರಣೆಯನ್ನು ಮುಂದುವರೆಸಿದರು.