ಕಾರವಾರ: ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಅರ್ಜಿ ನಮೂನೆಗಳ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಆಸ್ತಿ ತೆರಿಗೆಯ ಮೊತ್ತ ಸಂಗ್ರಹಿಸಿ, ಬ್ಯಾಂಕುಗಳಿಗೆ ನೀಡುತ್ತಿದ್ದ ಪ್ರಕ್ರಿಯೆ ಬದಲಾಗಿ ಆಂಡ್ರಾಯ್ಡ್ ಸ್ವೈಪ್ ಮೆಷಿನ್ ಬಳಸಿ ಆನ್‌ಲೈನ್‌ನಲ್ಲಿಯೇ ಸುಲಭವಾಗಿ ತೆರಿಗೆ ಪಾವತಿಸಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್‌ನ ಅಭಿವೃದ್ಧಿ ಶಾಖೆಯ ಉಪಕಾರ್ಯದರ್ಶಿ ಡಿ.ಎಂ.ಜಕ್ಕಪ್ಪಗೋಳ ಹೇಳಿದರು.
ಜಿಲ್ಲಾ ಪಂಚಾಯತ್‌ನ ಸಭಾಂಗಣದಲ್ಲಿ ತಾಲೂಕು ಪಂಚಾಯತ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಸೋಮವಾರ ಜರುಗಿದ ಆಸ್ತಿ ತೆರಿಗೆ ಡಿಜಿಟಲ್ ಸಂಗ್ರಹ ಮೆಷಿನ್ ವಿತರಣೆ ಹಾಗೂ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ತೆರಿಗೆ ಸಂಗ್ರಹ ಮೆಷಿನ್ ವಿತರಿಸಿ ಅವರು ಮಾತನಾಡಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಈಗ ಆಸ್ತಿ ತೆರಿಗೆ ಪಾವತಿಗೆ ಡಿಜಿಟಲ್ ಸ್ಪರ್ಶ ನೀಡಿದ್ದು, ಡಿಜಿಟಲ್ ಪಾವತಿಗಳನ್ನು ಸ್ವೀಕರಿಸಲು ಹೊಸ ಸ್ಮಾರ್ಟ್ ಮಾರ್ಗವನ್ನು ಪರಿಚಯಿಸಲಾಗಿದೆ. ಈ ಯಂತ್ರವನ್ನು ಸಿಮ್ ಕಾರ್ಡ್ ಹಾಗೂ ವೈಪೈ ಬಳಸಿಕೊಳ್ಳುವುದರ ಮೂಲಕ ಉಪಯೋಗಿಸಬಹುದಾಗಿದೆ. ಸ್ವೈಪ್, ಚಿಪ್ ಕಾರ್ಡ್ ಇನ್ಸೆರ್ಟ್, ಟ್ಯಾಪ್ ಕಾರ್ಡ್ ಹಾಗೂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಆಸ್ತಿ ತೆರಿಗೆ ಪಾವತಿ ಮಾಡಬಹುದು. ಪಾವತಿಗಾಗಿ ಮಾಸ್ಟರ್ ಕಾರ್ಡ್, ವೀಸಾ, ಯುಪಿಐ ಹಾಗೂ ರೂಪೇ ಕಾರ್ಡ್ಗಳನ್ನು ಬಳಸಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್‌ನ ಅಭಿವೃದ್ಧಿ ಶಾಖೆಯ ಸಹಾಯಕ ಕಾರ್ಯದರ್ಶಿ ಜೆ.ಆರ್. ಭಟ್ಟ, ಕಾರವಾರ ತಾಲೂಕು ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಬಾಲಪ್ಪನವರ ಆನಂದಕುಮಾರ, ತಾಲೂಕಿನ ಎಲ್ಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಬಿಲ್ ಕಲೆಕ್ಟರ್‌ಗಳು ಹಾಗೂ ಡಿಇಒಗಳು ಇದ್ದರು.