ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಬೇಲೇಕೇರಿ- ಕೇಣಿ ಮತ್ತು ಹೊನ್ನಾವರದ ಪಾವಿನಕುರ್ವಾದಲ್ಲಿ ಉದ್ದೇಶಿತ ಗ್ರೀನ್‌ಫೀಲ್ಡ್ ಬಂದರು ನಿರ್ಮಾಣ ಯೋಜನೆಗೆ ಅಡ್ಡಿ- ಆತಂಕಗಳು ಎದುರಾಗುತ್ತಲೇ ಇದೆ. ಜಾಗತಿಕ ಟೆಂಡರ್‌ನಲ್ಲಿ ಕಂಪನಿಗಳು ಭಾಗವಹಿಸಲು ಹಿಂದೇಟು ಹಾಕುತ್ತಿದ್ದು, ಇದರಿಂದಾಗಿ ಪಾವಿನಕುರ್ವಾದ ಉದ್ದೇಶಿತ ಬಂದರು ನಿರ್ಮಾಣದ ಟೆಂಡರ್ ಪ್ರಕ್ರಿಯೆಯನ್ನ ಸರ್ಕಾರ ರದ್ದುಪಡಿಸಿದೆ. ಸದ್ಯ ಕೇಣಿ ಬಂದರು ನಿರ್ಮಾಣಕ್ಕೆ ಒಂದೇ ಒಂದು ಕಂಪನಿ ಟೆಂಡರ್‌ನಲ್ಲಿ ಭಾಗವಹಿಸಿದೆ.
2022ರ ಸೆಪ್ಟೆಂಬರ್‌ನಲ್ಲಿ ರಾಜ್ಯ ಸರ್ಕಾರವು ಕೇಣಿ ಮತ್ತು ಪಾವಿನಕುರ್ವೆಯಲ್ಲಿ ಆಳ ಸಮುದ್ರದ ಗ್ರೀನ್‌ಫೀಲ್ಡ್ ಬಂದರುಗಳನ್ನು ನಿರ್ಮಿಸಿ, ನಿರ್ವಹಿಸಲು ಜಾಗತಿಕ ಟೆಂಡರ್‌ಗಳನ್ನು ಆಹ್ವಾನಿಸಿತ್ತು. ಆದರೆ, ಬಂದರು ನಿರ್ಮಾಣಕ್ಕೆ ಪರಿಸರ ಮತ್ತು ಕರಾವಳಿ ನಿಯಂತ್ರಣ ವಲಯದ ಅನುಮತಿ, ರೈಲು ಮತ್ತು ರಸ್ತೆ ಸಂಪರ್ಕಕ್ಕಾಗಿ ಭೂಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಹಾಗೂ ವೆಚ್ಚಗಳನ್ನ ಹೊಣೆಯು ಟೆಂಡರ್ ಪಡೆಯುವ ಕಂಪನಿಗಳ ಮೇಲೆ ಹೇರಿರುವ ಸರ್ಕಾರದ ಷರತ್ತಿನಿಂದಾಗಿ ಜಾಗತಿಕ ಟೆಂಡರ್‌ನಲ್ಲಿ ಕಂಪನಿಗಳು ಭಾಗವಹಿಸಿಲ್ಲ ಎನ್ನಲಾಗುತ್ತಿದೆ.
ಕೇಣಿಯ ಬಂದರು ಟೆಂಡರ್‌ನಲ್ಲಿ ಸಜ್ಜನ್ ಜಿಂದಾಲ್ ಮಾಲೀಕತ್ವದ ಜೆಎಸ್‌ಡಬ್ಲ್ಯು ಗ್ರೂಪ್‌ನ ಜೆಎಸ್‌ಡಬ್ಲ್ಯು ಇನ್ಫ್ರಾಸ್ಟ್ರಕ್ಚರ್ ಮಾತ್ರ ಭಾಗವಹಿಸಿದ್ದು, ಇದೇ ಕಂಪನಿಗೆ ಸರ್ಕಾರ ಟೆಂಡರ್ ಅಂತಿಮಗೊಳಿಸುವ ಸಾಧ್ಯತೆ ಇದೆ. ಆದರೆ ಪಾವಿನಕುರ್ವಾ ಬಂದರು ಟೆಂಡರ್‌ನಲ್ಲಿ ಯಾವುದೇ ಕಂಪನಿ ಆಸಕ್ತಿ ತೋರದೇ ಟೆಂಡರ್ ಪ್ರಕ್ರಿಯೆ ರದ್ದುಗೊಂಡಿದೆ. ಪ್ರಚಲಿತ ದಿನಗಳಲ್ಲಿ ಭಾರತದ ಅತಿದೊಡ್ಡ ಖಾಸಗಿ ಬಂದರು ನಿರ್ವಾಹಕ ಕಂಪನಿಯಾಗಿರುವ ಅದಾನಿ ಪೋರ್ಟ್ಸ್ ಮತ್ತು ಸ್ಪೆಷಲ್ ಎಕನಾಮಿಕ್ ಝೋನ್ ಲಿಮಿಟೆಡ್ (ಎಪಿಎಸ್‌ಇಝೆಡ್) ಈ ಟೆಂಡರ್‌ನಲ್ಲಿ ಭಾಗವಹಿಸುವ ನಿರೀಕ್ಷೆಯನ್ನ ಹೊಂದಲಾಗಿತ್ತು. ಆದರೆ ಈ ಕಂಪನಿ ಕೂಡ ಟೆಂಡರ್‌ನಲ್ಲಿ ಭಾಗವಹಿಸದಿರುವುದು ಅಚ್ಚರಿ ಮೂಡಿಸಿದೆ.
ಈ ಬಂದರುಗಳಿಗೆ ಅನುಕೂಲವಾಗುವಂತೆ ರಾಜ್ಯ ಸಕಾರವು ಕೇಂದ್ರ ಸರ್ಕಾರದ ನೆರವಿನೊಂದಿಗೆ ಸಾಗರಮಾಲಾ, ಭಾರತ್‌ಮಾಲಾ ಹಾಗೂ ಪಿಎಂ ಗತಿಶಕ್ತಿ ಯೋಜನೆಗಳಲ್ಲಿ ರಸ್ತೆ ಹಾಗೂ ರೈಲು ಸಂಪರ್ಕ ಕಲ್ಪಿಸಲು ಉದ್ದೇಶಿಸಿದೆ. ಆದರೆ ಟೆಂಡರ್‌ನಲ್ಲೇ ಯಾವ ಕಂಪನಿಗಳೂ ಭಾಗವಹಿಸದಿರುವುದು ಸರ್ಕಾರಕ್ಕೆ ಹಿನ್ನಡೆಯುಂಟು ಮಾಡಿದೆ.