• Slide
    Slide
    Slide
    previous arrow
    next arrow
  • ಅಂಗಡಿಗಳ ಹರಾಜು ಪ್ರಕ್ರಿಯೆಯಲ್ಲೂ ಎಡವಟ್ಟು; ಸೀಮೆಎಣ್ಣೆ ಕ್ಯಾನ್ ಹಿಡಿದು ಅಂಗಡಿಕಾರರ ಪ್ರತಿಭಟನೆ

    300x250 AD

    ಭಟ್ಕಳ: ಅಂಗಡಿಗಳ ಹರಾಜು ಪ್ರಕ್ರಿಯೆಯಲ್ಲಿ ಭಟ್ಕಳ ಪುರಸಭೆ ಮತ್ತೊಮ್ಮೆ ಎಡವಟ್ಟು ಮಾಡಿಕೊಂಡಿದೆ. ಅಂಗಡಿಕಾರರಿಂದ ಹರಾಜು ಪ್ರಕ್ರಿಯೆಗೆ ಡಿಮಾಂಡ್ ಡ್ರಾಫ್ಟ್ ಪಡೆದುಕೊಂಡ ನಂತರ ಉರ್ದು ಪತ್ರಿಕೆಯಲ್ಲಿ ಪ್ರಕಟಣೆ ಹೊರಡಿಸಿಲ್ಲ ಎನ್ನುವ ಕ್ಷುಲ್ಲಕ ಕಾರಣ ನೀಡಿ ಹರಾಜು ಪ್ರಕ್ರಿಯೆಯನ್ನೇ ಮುಂದೂಡಿದೆ ಎಂದು ಆರೋಪಿಸಿ ಅಂಗಡಿಕಾರರು ಪುರಸಭೆಯ ಎದುರು ಪ್ರತಿಭಟನೆ ನಡೆಸಿದರು.
    ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡಿದ ಪುರಸಭಾ ನಾಮ ನಿರ್ದೇಶಿತ ಸದಸ್ಯ ಶ್ರೀಕಾಂತ ನಾಯ್ಕ, ಪುರಸಭಾ ಅಂಗಡಿಗಳ ಹರಾಜು ಪ್ರಕ್ರಿಯೆ ನಿಗದಿಯಂತೆ ಫೆ. 7ರಂದು ನಡೆಯಬೇಕಾಗಿತ್ತು. ಆದರೆ, ಉರ್ದು ಭಾಷೆಯಲ್ಲಿ ಜಾಹೀರಾತು ನೀಡಲಿಲ್ಲ ಎನ್ನುವ ಕಾರಣ ನೀಡಿ ಸಂಪೂರ್ಣ ಹರಾಜು ಪ್ರಕ್ರಿಯೆಯನ್ನು ಮುಂದೂಡಿ ಗೊಂದಲ ಸೃಷ್ಟಿ ಮಾಡಲು ಹುನ್ನಾರ ನಡೆಸಿದಂತಿದೆ. ಈಗಾಗಲೇ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಅಂಗಡಿಕಾರರಿಗೆ ಅನ್ಯಾಯ ಮಾಡಿ ಇತರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪುರಸಭೆಯ ಅಧ್ಯಕ್ಷರು ಸರ್ವಾಧಿಕಾರಿ ಧೋರಣೆ ತಳೆದಿದ್ದಾರೆ ಎಂದು ದೂರಿದರು.
    ಈ ಹಿಂದೆ ಕೂಡ ಪುರಸಭಾ ಅಂಗಡಿ ಮಳಿಗೆಗಳ ಅವೈಜ್ಞಾನಿಕ ಹರಾಜು ಪ್ರಕ್ರಿಯೆ ಹಾಗೂ ನಂತರದ ಬೆಳವಣಿಗೆಯಲ್ಲಿ ರಾಮಚಂದ್ರ ನಾಯ್ಕ ಎಂಬುವವರು ಪ್ರಾಣ ಕಳೆದುಕೊಂಡಿರುವ ಘಟನೆ ಇನ್ನೂ ಹಸಿರಾಗಿದೆ. ಆಗಲೇ ಪುರಸಭಾ ಅಧ್ಯಕ್ಷರು ಯಾವುದೇ ಸಭೆಯನ್ನು ಕರೆಯದೇ ಏಕಪಕ್ಷೀಯವಾಗಿ ನಿರ್ಣಯವನ್ನು ಕೈಗೊಂಡಿರುವುದು ಸರಿಯಲ್ಲ. ತಕ್ಷಣ ಹರಾಜು ಪ್ರಕ್ರಿಯೆಯನ್ನು ನಡೆಸಬೇಕು. ಇಲ್ಲವಾದಲ್ಲಿ ಮಂಗಳವಾರದಿಂದ (ಫೆ.14) ರಸ್ತೆಯಲ್ಲಿ ಕುಳಿತು ಅಂಗಡಿಕಾರರು ಮತ್ತು ಸಾರ್ವಜನಿಕರನ್ನು ಸೇರಿಸಿಕೊಂಡು ಪ್ರತಿಭಟನೆ ಮಾಡುತ್ತೇವೆ” ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
    ಅಂಗಡಿಕಾರ ರಾಮನಾಥ ಬಳೇಗಾರ್, ಈಗಾಗಲೇ 21 ಅಂಗಡಿಗಳ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು 46 ಜನರು ಡಿ.ಡಿ.ಯನ್ನು ನೀಡಿ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುತ್ತಾರೆ. ಕಾನೂನು ಪ್ರಕ್ರಿಯೆಗಳನ್ನು ಪೂರೈಸಿ ಹರಾಜು ಪ್ರಕ್ರಿಯೆ ಹಮ್ಮಿಕೊಂಡಿದ್ದು ಇದೀಗ ಕ್ಷುಲ್ಲಕ ಕಾರಣಕ್ಕೆ ಹರಾಜು ಪ್ರಕ್ರಿಯೆಯನ್ನು ರದ್ದುಗೊಳಿಸಿರುವುದರ ಹಿಂದೆ ಬೃಹತ್ ಷಡ್ಯಂತ್ರ ಇದೆ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ ಎಂದು ಹೇಳಿದರು.
    ಈ ಹಿಂದೆ ಹರಾಜು ಪ್ರಕ್ರಿಯೆಯನ್ನು ನಡೆಸಿದಾಗ ಬೇಕಾಬಿಟ್ಟಿ ಹರಾಜು ಕೂಗಿ, ಲಕ್ಷಾಂತರ ರೂಪಾಯಿಗೆ ಹರಾಜು ಹಾಕಿ ನಂತರ ನಾಪತ್ತೆಯಾಗಿದ್ದರಿಂದ ಪುರಸಭೆಗೆ ಲಕ್ಷಾಂತರ ರೂ. ನಷ್ಟವಾಗಿರುವುದನ್ನು ಸ್ಮರಿಸಿದ ಅವರು ಈ ಬಾರಿಯೂ ತಮಗೆ ಬೇಕಾದವರನ್ನು ಹರಾಜು ಪ್ರಕ್ರಿಯೆಯಲ್ಲಿ ತೂರಿಸಿ, ಸಂರ್ಪೂಣ ಹರಾಜು ಪ್ರಕ್ರಿಯೆಯನ್ನೇ ಗೊಂದಲಮಯವನ್ನಾಗಿಸುವ ಹುನ್ನಾರ ಅಧ್ಯಕ್ಷರದ್ದಾಗಿದೆ ಎಂದೂ ದೂರಿದರು.
    ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯ ಪ್ರವೇಶಿಸಿ ಮುಂದೆ ಆಗಬಹುದಾಗಿದ್ದ ಅನಾಹುತಗಳನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು. ಇಲ್ಲವಾದಲ್ಲಿ ಮುಂದಾಗುವ ಎಲ್ಲಾ ಅನಾಹುತಗಳಿಗೆ ಪುರಸಭಾ ಅಧ್ಯಕ್ಷರೇ ಜವಾಬ್ದಾರರು ಆಗಬೇಕಾಗುತ್ತದೆ. ನ್ಯಾಯ ದೊರೆಯುವ ತನಕವೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top